ಕೆವಿಜಿ ವಿದ್ಯಾಸಂಸ್ಥೆಗಳಲ್ಲಿ ಯಾವುದೇ ಅಹಿತಕರ ಘಟನೆಗಳಾಗಲಿ, ಗೊಂದಲಗಳಾಗಲಿ ಇಲ್ಲ

0


ಹಿತರಕ್ಷಣಾ ವೇದಿಕೆ ಹೆಸರಲ್ಲಿ ಗೊಂದಲ ಸೃಷ್ಟಿ : ಡಾ.ಕೆ.ವಿ.ಚಿದಾನಂದ


ಕಾನೂನು ಬಾಹಿರ ಹೋರಾಟದ ಕ್ರಮ ಕೈಗೊಂಡರೆ ಸೂಕ್ತ ಕಾನೂನು ಕ್ರಮ


ಕೆವಿಜಿ ವಿದ್ಯಾಸಂಸ್ಥೆಗಳಲ್ಲಿ ಯಾವುದೇ ಅಹಿತಕರ ಘಟನೆಗಳಾಗಲಿ, ಗೊಂದಲಗಳಾಗಲಿ ಇಲ್ಲ. ಕೆವಿಜಿ ಹಿತರಕ್ಷಣಾ ವೇದಿಕೆ ಹೆಸರಿನಲ್ಲಿ ಗೊಂದಲ ಸೃಷ್ಟಿಗೆ ಹುನ್ನಾರ ನಡೆಯುತ್ತಿದ್ದು, ಕಾನೂನು ಬಾಹಿರ ಹೋರಾಟದ ಕ್ರಮ ಕೈಗೊಂಡರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ತಿಳಿಸಿದ್ದಾರೆ.

ನಿನ್ನೆ ಕೆವಿಜಿ ವಿದ್ಯಾಸಂಸ್ಥೆಗಳ ಹಿತರಕ್ಷಣಾ ಸಮಿತಿ ನಡೆಸಿದ ಪತ್ರಿಕಾಗೋಷ್ಠಿಗೆ ಉತ್ತರವಾಗಿ ಪತ್ರಿಕಾಹೇಳಿಕೆ ನೀಡಿರುವ ಅವರು, ಪತ್ರಿಕಾಗೋಷ್ಠಿಯನ್ನು ನಡೆಸಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಕಾರ್ಯ ವ್ಯಾಪ್ತಿಯಲ್ಲಿ ಬರುವ ವಿದ್ಯಾ ಸಂಸ್ಥೆಗಳಲ್ಲಿ ಗೊಂದಲ ಉಂಟಾಗಿದೆ ಹಾಗೂ ವಿದ್ಯಾರ್ಥಿಗಳ, ಸಿಬ್ಬಂದಿ ವರ್ಗದಲ್ಲಿ ಅನಿಶ್ಚಿತತೆ ಹಾಗೂಸಿಬ್ಬಂದಿಗಳ ಸೇವಾ ಭದ್ರತೆಗೆ ದಕ್ಕೆ ಉಂಟಾಗಿದೆ ಎಂದು ಅಪಾದಿಸಿದ್ದಾರೆ.

ಆದರೆ ಇದು ಸತ್ಯಕ್ಕೆ ದೂರವಾದ ವಿಷಯವಾಗಿರುತ್ತದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕರ್ನಾಟಕ ಸೊಸೈಟಿ ಅಧಿನಿಯಮಗಳು ೧೯೬೦ರ ಪ್ರಕಾರ ದಿ| ಡಾ| ಕುರುಂಜಿ ವೆಂಕಟ್ರಮಣ ಗೌಡರು ಸ್ಥಾಪಿಸಿದ ಸಂಸ್ಥೆಯಾಗಿರುತ್ತದೆ. ಹಾಗೂ ನಿಯಮ ಪ್ರಕಾರ ಇದರ ಚಟುವಟಿಕೆಗಳು ನಿರಂತವಾಗಿ ಯಾವುದೇ ತೊಂದರೆಗಳಿಲ್ಲದೇ ಸಂಸ್ಥೆಗಳನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದರೆ ವಿನಾ ಕಾರಣ ಇತ್ತೀಚಿನ ದಿನಗಳಲ್ಲಿ ಕೆ.ವಿ.ಜಿ ಕ್ಯಾಂಪಸ್ ಹಿತರಕ್ಷಣಾ ಸಮಿತಿಯನ್ನು ರಚನೆ ಮಾಡಿಕೊಂಡು ಪತ್ರಿಕಾ ಗೋಷ್ಠಿ ಕರೆದು ಕುರುಂಜಿಯವರು ಸ್ಥಾಪಿಸಿದ ಸಂಸ್ಥೆಗಳ ಹೆಸರನ್ನು ಹಾಳು ಮಾಡಲು ಕೆಲವು ಬಾಹ್ಯ ಶಕ್ತಿಗಳು ಹುನ್ನಾರ ನಡೆಸುತ್ತಿದ್ದಾರೆ. ಆದರೆ ಈ ತನಕ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಲೀ ಸಿಬ್ಬಂದಿಗಳಿಗಾಗಲೀ ಯಾವುದೇ ತೊಂದರೆಗಳು ಆಗಿರುವುದಿಲ್ಲ. ಆದರೆ ಇತ್ತೀಚೆಗೆ ಸಂಸ್ಥೆಗಳ ಆಡಳಿತ ಮಂಡಳಿಯ ವಿರುದ್ಧ ಅಶಿಸ್ತು ಮತ್ತು ಪಿತೂರಿ ನಡೆಸುತ್ತಿರುವ ಕೆಲವೊಂದು ಸಿಬ್ಬಂದಿಗಳನ್ನು ಆಡಳಿತಾತ್ಮಕ ದೃಷ್ಟಿಯಿಂದ ಅಮಾನತುಗೊಳಿಸಲಾಗಿದೆ.


ಕೆ.ವಿ.ಜಿ ಕ್ಯಾಂಪಸ್ ಹಿತರಕ್ಷಣಾ ವೇದಿಕೆಯ ಎಂಬ ಹೆಸರಿನಲ್ಲಿ ನಡೆಸಿರುವ ಪತ್ರಿಕಾ ಗೋಷ್ಠಿಯು ಈಗಾಗಲೇ ಸಂಸ್ಥೆಯಿಂದ ಅಮಾನತುಗೊಂಡಿರುವ ವ್ಯಕ್ತಿಗಳನ್ನು ರಕ್ಷಣೆ ಮಾಡಲು ನೀಡಿರುವ ಪತ್ರಿಕಾ ಹೇಳಿಕೆಯಾಗಿರುತ್ತದೆ.


ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸಂಸ್ಥೆಯಲ್ಲಿ ಕೆಲವೊಂದು ವ್ಯಾಜ್ಯಗಳು ನ್ಯಾಯಾಲಯದಲ್ಲಿರುವುದರಿಂದ ಸಂಸ್ಥೆಗಳನ್ನು ಮುನ್ನಡೆಸಲು ಆಡಳಿತಾತ್ಮಕ ದೃಷ್ಟಿಯಿಂದ ಹಾಗೂ ಸಿಬ್ಬಂದಿಗಳ ಹಿತ ರಕ್ಷಣೆಗೆ ಕಾನೂನು ಪ್ರಕಾರ ಕಾರ್ಯನಿರ್ವಹಿಸಿಕೊಂಡು ಬರಲಾಗುತ್ತಿದೆ. ಇದು ನೋಂದಾಯಿತ ಸಂಸ್ಥೆಗೆ ಸಂಬಂಧಪಟ್ಟ ವಿಷಯವಾಗಿರುವುದರಿಂದ ಹೊರಗಿನವರು ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಿ ಈ ರೀತಿಯ ಗೊಂದಲಗಳನ್ನು ಸೃಷ್ಟಿಸುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ. ನಮ್ಮ ನೋಂದಾಯಿತ ಸಂಸ್ಥೆಯಡಿಯಲ್ಲಿ ನಡೆಯುವ ಸಂಸ್ಥೆಗಳಲ್ಲಿ ಯಾವುದೇ ಅಹಿತಕರ ಘಟನೆಗಳಾಗಲಿ ಹಾಗೂ ಗೊಂದಲಗಳಿರುವುದಿಲ್ಲ ಹಾಗೂ ಯಾವುದೇ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಗೊಂದಲ ಪಡುವ ಅವಶ್ಯಕತೆ ಇರುವುದಿಲ್ಲ ಅಂತಹ ಘಟನೆಗಳು ಮುಂದೆ ನಡೆದರೆ ಅದಕ್ಕೆ ಕೆ.ವಿ.ಜಿ ಕ್ಯಾಂಪಸ್ ಹಿತರಕ್ಷಣಾ ವೇದಿಕೆಯವರು ಪತ್ರಿಕಾ ಗೋಷ್ಠಿ ಕರೆದು ನೀಡಿರುವ ಹೇಳಿಕೆಗಳೇ ಕಾರಣವಾಗಬಹುದುಅಲ್ಲದೇ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ ಅನಗತ್ಯ ಕಾನೂನು ಬಾಹಿರ ಹೋರಾಟದ ಕ್ರಮ ಕೈಗೊಂಡಲ್ಲಿ, ಇದರ ವಿರುದ್ಧ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಆಡಳಿತ ಮಂಡಳಿಯು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಉದ್ದೇಶಿತವಾಗಿರುವುದನ್ನು ಈ ಮೂಲಕ ತಿಳಿಯಪಡಿಸುತ್ತಿದ್ದೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.