ಅಡ್ಕಾರು ಅಯ್ಯಪ್ಪ ಮಂದಿರದಲ್ಲಿ 17ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ

0

ಜಾಲ್ಸೂರು ಗ್ರಾಮದ ಅಡ್ಕಾರಿನ ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ವತಿಯಿಂದ ಅಯ್ಯಪ್ಪ ಮಂದಿರ 17ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಡಿ.15ರಂದು ಜರುಗಿತು.

ಪ್ರಾತ:ಕಾಲ ಗಣಪತಿ ಹವನ, ಪೂರ್ವಾಹ್ನ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.

ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ನಿರಂತರವಾಗಿ ಸುಳ್ಯ ತಾಲೂಕಿನ ವಿವಿಧ ಭಜನಾ ತಂಡಗಳಿಂದ ಭಜನೆ ಜರುಗಿ , ರಾತ್ರಿ ಶ್ರೀ ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಈ ವೇಳೆ ವಿಶೇಷ ಸಿಡಿಮದ್ದು ಪ್ರದರ್ಶನಗೊಂಡಿತು.

ರಾತ್ರಿ ಟೀಂ ತವಶ್ಯ ತಂಡದಿಂದ ಭಕ್ತಿಗಾನ ಲಹರಿ ಹಾಗೂ ಕೋನಡ್ಕಪದವಿನ ಕಾರ್ತಿಕೇಯ ಭಜನಾ ಮಂಡಳಿಯವರಿಂದ ಕುಣಿತ ಭಜನೆ ಜರುಗಿತು.
ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೃಷಿಕ ಶ್ರೀಕಾಂತ್ ಗೋಳ್ವಲ್ಕರ್ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಶೋಕ ಅಡ್ಕಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾತ್ರಿ ಅನ್ನಸಂತರ್ಪಣೆಯ ಬಳಿಕ ಕಾಸರಗೋಡಿನ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ನಾರಾಯಣ ಮಡಿವಾಳ ಅಡ್ಕಾರು, ಕಾರ್ಯದರ್ಶಿ ಮನು ಎನ್. ಅಡ್ಕಾರುಪದವು, ಖಜಾಂಜಿ ದಾಮೋದರ ಎ.ಎಸ್. ಅಡ್ಕಾರುಪದವು, ಉಪಾಧ್ಯಕ್ಷರುಗಳಾದ ಪುರುಷೋತ್ತಮ ಕಾಮತ್, ರಾಜೇಶ್ (ಮಣಿ) ಕೋನಡ್ಕಪದವು , ಜೊತೆ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಪ್ರಸಾದ್, ಚಂದ್ರಶೇಖರ ಎ.ಎಸ್. ಅಡ್ಕಾರುಪದವು, ಗುರುಸ್ವಾಮಿ ಚಂದ್ರಶೇಖರ ಅಡ್ಕಾರು ಸೇರಿದಂತೆ ಶ್ರೀ ಅಯ್ಯಪ್ಪ ವೃತಧಾರಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.