ಅರಂತೋಡು-ತೊಡಿಕಾನ ಪ್ರಾ.ಕೃ.ಪ.ಸ.ಸಂಘದಿಂದ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಕೆ
ಕರ್ನಾಟಕ ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಭೀಕರ ಬರಗಾಲ ಸಂಭವಿಸಿದ್ದು, ಇಂತಹ ಸಂದರ್ಭದಲ್ಲಿ ರಾಜ್ಯದ ರೈತರಿಗೆ ಕೃಷಿ ಕಾರ್ಯಗಳನ್ನು ನಡೆಸಲು ಅನಾನುಕೂಲತೆಯನ್ನು ಮನಗಂಡು ರಾಜ್ಯ ಸರಕಾರವು ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಬಡ್ಡಿಯನ್ನು ಮನ್ನಾ ಮಾಡುವುದಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಘೋಷಣೆಯನ್ನು ಮಾಡಿರುತ್ತಾರೆ.
ಈ ಬಡ್ಡಿ ಮನ್ನಾ ಯೋಜನೆಯು ರಾಜ್ಯದ ಸಹಕಾರ ಸಂಘಗಳಲ್ಲಿ ಸಾಲವನ್ನು ಪಡೆದಿರುವ ಹಾಗು ಸಾಲ ಪಡೆದು ಸುಸ್ತಿದಾರರಾಗಿರುವ ಎಲ್ಲಾ ಕೃಷಿಕರಿಗೆ ಈ ಘೋಷಿತ ಯೋಜನೆಯ ಪ್ರಯೋಜನವನ್ನು ರಾಜ್ಯ ಸರಕಾರ ದೊರಕಿಸಿಕೊಡಬೇಕು ಎಂದು ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ರಾಜ್ಯ ಸರಕಾರಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಕುಮಾರಿ ಭಾಗೀರಥಿ ಮುರುಳ್ಯರವರ ಮೂಲಕ ತಾಲೂಕಿನ ಎಲ್ಲಾ ಕೃಷಿಕ ಸಾಲಗಾರರ ಪರವಾಗಿ ಮನವಿಯನ್ನು ಸಲ್ಲಿಸಿದರು. ಬರಗಾಲದಂತಹ ಸಂಕಷ್ಟದ ಸಂದರ್ಭದಲ್ಲಿ ಕೃಷಿಕರ ನೆರವಿಗೆ ಬಂದಿರುವ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ನಮ್ಮ ಸಹಕಾರ ಸಂಘದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಅಲ್ಲದೆ ಬಡ್ಡಿ ಮನ್ನಾ ಯೋಜನೆಯು ಸುಸ್ತಿದಾರ ಹಾಗು ಸುಸ್ತಿದಾರರಲ್ಲದ ಸದಸ್ಯ ಸಾಲಗಾರರಿಗೂ ಅನ್ವಯಿಸುವಂತೆ ಆದೇಶವನ್ನು ಹೊರಡಿಸುವರೇ ಕ್ರಮವನ್ನು ಕೈಗೊಳ್ಳಬೇಕಾಗಿ ಸರಕಾರಕ್ಕೆ ಆಗ್ರಹಿಸಿ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಮತ್ತು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಂ. ಶಹೀದ್ ರವರು ಉಪಸ್ಥಿತರಿದ್ದರು.