ಗಾಂಧಿನಗರ :ಮಕ್ಕಳ ಹಕ್ಕುಗಳ ಮಾಸೋತ್ಸವ -2023 ಮತ್ತು ಅಪರಾಧ ತಡೆ ಮಾಸಾಚರಣೆ

0

ಲೈಂಗಿಕ ದೌರ್ಜನ್ಯಕ್ಕೊಳಗಾದಲ್ಲಿ ಯಾವುದೇ ಮುಜುಗರವಿಲ್ಲದೆ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ: ಈರಯ್ಯ ದೂಂತೂರು

ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ (ರಿ) ದ.ಕ.,ಶಿಕ್ಷಣ ಸಂಪನ್ಮೂಲ ಕೇಂದ್ರ ಸುಳ್ಯ, ಪೋಲೀಸ್ ಇಲಾಖೆ ಸುಳ್ಯ, ಶಾಲಾಭಿವೃದ್ಧಿ ಸಮಿತಿ ಕೆ.ಪಿ.ಎಸ್ ಗಾಂಧಿನಗರ ಸುಳ್ಯ ಇದರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ -೨೦೨೩ ಮತ್ತು ಅಪರಾಧ ತಡೆ ಮಾಸಾಚರಣೆ ಡಿ 23 ರಂದು ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಗಾಂಧಿನಗರ ಪೆಟ್ರೋಲ್ ಬಂಕ್ ಬಳಿಯಿಂದ ಮಕ್ಕಳಲ್ಲಿ ಹಕ್ಕು ಮತ್ತು ರಕ್ಷಣೆ ಜಾಗೃತಿ ಕುರಿತು ವಿದ್ಯಾರ್ಥಿಗಳ ಮತ್ತು ಸುಳ್ಯ ಪೋಲೀಸ್ ಸಿಬ್ಬಂದಿಗಳ ಆಕರ್ಷಕ ಜಾಥಾ ನಡೆಯಿತು.
ಸುಳ್ಯ ಪೋಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಅಪಾರಧ ತಡೆ ಮಾಸಾಚರಣೆಯ ಕರಪತ್ರವನ್ನು ಬಿಡುಗಡೆಗೊಳಿಸಿ ಜಾಥಾಕ್ಕೆ ಚಾಲನೆ ನೀಡಿದರು.

ಬಳಿಕ ಗಾಂಧಿನಗರ ಕೆ.ಪಿ.ಎಸ್ ಶಾಲೆಯ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್. ಬಿ.ಈ. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಶುಭಹಾರೈಸಿದರು.

ಸಭಾಧ್ಯಕ್ಷತೆಯನ್ನು ಕೆಪಿಎಸ್ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಚಿದಾನಂದ ಕುತ್ಪಾಜೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಪೋಕ್ಸೋ ಕಾಯ್ದೆ ವಿಷಯಕ್ಕೆ ಸಂಬಂಧಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಕ್ಕಳಲ್ಲಿ ಯಾವುದಾದರೂ ರೀತಿಯ ಲೈಂಗಿಕ ದೌರ್ಜನ್ಯಗಳು ಉಂಟಾದಾಗ ಭಯಪಡದೆ ಸ್ಥಳೀಯ ಪೊಲೀಸ್ ಇಲಾಖೆಗಳಿಗೆ ತಿಳಿಸಬೇಕಾಗಿದೆ. ಇದರಿಂದ ಮಕ್ಕಳಿಗೆ ರಕ್ಷಣೆಯನ್ನು ಪೊಲೀಸ್ ಇಲಾಖೆ ನೀಡಲು ಸಹಕಾರಿಯಾಗುತ್ತದೆ.ಮಕ್ಕಳ ಪೋಷಕರು ಕೂಡ ಈ ರೀತಿಯ ಘಟನೆಗಳು ಸಂಭವಿಸಿದಾಗ ಅದನ್ನು ಮುಚ್ಚಿಡಲು ಪ್ರಯತ್ನಿಸಬಾರದು.ಇದರಿಂದ ಸಮಾಜದಲ್ಲಿ ಇನ್ನಷ್ಟು ಅಪರಾಧಗಳು ಬೆಳೆಯಲು ಕಾರಣವಾಗುತ್ತದೆ ಎಂದು ಹೇಳಿದರು.ಅಲ್ಲದೆ ಪೋಕ್ಸೋ ಕಾಯ್ದೆಯಡಿಯಲ್ಲಿ ಮಕ್ಕಳಿಗೆ ಯಾವುದೆಲ್ಲ ರಕ್ಷಣೆಗಳು ಸಿಗುತ್ತದೆ ಎಂಬ ವಿಷಯದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಪ್ರಾಂಶುಪಾಲರಾದ ಅಬ್ದುಲ್ ಸಮದ್,ಉಪ ಪ್ರಾಂಶುಪಾಲೆ ಜ್ಯೋತಿ ಲಕ್ಷ್ಮಿ, ಸಮಾಜ ಕಲ್ಯಾಣಾಧಿಕಾರಿ ಉಮಾದೇವಿ ಮಾತನಾಡಿ ಮಕ್ಕಳ ಹಕ್ಕುಗಳ ಕುರಿತು ವಿವರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸ್ಥಳೀಯ ನಗರ ಪಂಚಾಯತ್ ಸದಸ್ಯ ಷರೀಫ್ ಕಂಠಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಅಧಿಕಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಳ್ಯ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಶಂಕರ್ ಪೆರಾಜೆ ಪ್ರಾಸ್ತಾವಿಕ ಮಾತನಾಡಿ ಶಿಕ್ಷಣ ಸಂಪನ್ಮೂಲ ಕೇಂದ್ರ ಬೆಳೆದು ಬಂದ ಹಾದಿ ಮತ್ತು ಅದರ ಕಾರ್ಯ ಚಟುವಟಿಕೆಯ ಕುರಿತು ಮಾತನಾಡಿ ಸರ್ವರನ್ನು ಸ್ವಾಗತಿಸಿದರು.
ಸಂಘಟನಾ ಕಾರ್ಯದರ್ಶಿ ಹಸೈನಾರ್ ಜಯನಗರ ಕಾರ್ಯಕ್ರಮ ನಿರೂಪಿಸಿ ಶಾಲಾ ಶಿಕ್ಷಕ ಯೂಸುಫ್ ವಂದಿಸಿದರು.
ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿಗಳು, ಗೃಹರಕ್ಷಕ ದಳದ ಸಿಬ್ಬಂದಿಗಳು, ಶಿಕ್ಷಣ ಸಂಪನ್ಮೂಲ ಕೇಂದ್ರದ ಪದಾಧಿಕಾರಿಗಳು ಸದಸ್ಯರು, ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.