ಗಾಂಧಿನಗರ ಕೆ.ಪಿ.ಎಸ್ ಪ್ರಾಥಮಿಕ ವಿಭಾಗದ ದೈ.ಶಿ. ಶಿಕ್ಷಕಿ ಶ್ರೀಮತಿ ಎ.ಜಿ. ಭವಾನಿ ಸೇವಾ ನಿವೃತ್ತಿ

0

ಸುಳ್ಯದ ಗಾಂಧಿನಗರ ಕೆಪಿಎಸ್ ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಎ.ಜಿ ಭವಾನಿಯವರು ಡಿ.31ರಂದು ಸೇವಾ ನಿವೃತ್ತಿ ಹೊಂದಲ್ಲಿದ್ದಾರೆ. ತೊಡಿಕಾನದ ಮರ್ಪಂಗಲ್ಲಿನ ದಿ.ಅಮೆಮನೆ ಗಣಪತಿ ಹಾಗೂ ದಿ.ಗಂಗಮ್ಮ ದಂಪತಿಯ ಪುತ್ರಿಯಾಗಿ ಡಿ.18, 1963 ರಂದು ಜನಿಸಿದ ಇವರು, 1985 ರಲ್ಲಿ ಸರಕಾರಿ ಸೇವೆಗೆ ನೇಮಕಗೊಂಡ ಇವರು ಸ.ಹಿ.ಪ್ರಾ.ಶಾಲೆ ಎಡಮಂಗಲದಲ್ಲಿ 2 ವರ್ಷ 6 ತಿಂಗಳು, ಸ.ಹಿ.ಪ್ರಾ.ಶಾಲೆ, ಐರ‍್ನಾಡು ನಲ್ಲಿ10 ವರ್ಷ 5 ತಿಂಗಳು ಸೇವೆ ಸಲ್ಲಿಸಿ ಗಾಂಧಿನಗರ ಕೆ.ಪಿ.ಎಸ್ ನ ಪ್ರಾಥಮಿಕ ವಿಭಾಗದಲ್ಲಿ ಸುಮಾರು 25 ವರ್ಷ 5ತಿಂಗಳು ಸೇವೆ ಸಲ್ಲಿಸಿದ್ದಾರೆ. ಅಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ 12 ವರ್ಷಗಳ ಕಾಲ ಕರ್ತವ್ಯದಲ್ಲಿದ್ದರು.

ಅನೇಕ ವಿದ್ಯಾರ್ಥಿಗಳನ್ನು ಕ್ರೀಡಾ ಕ್ಷೇತ್ರದಲ್ಲಿ ಬೆಳಗಿಸಿದ ಕೀರ್ತಿ ಇವರದ್ದು. ಅಲ್ಲದೆ ಅನೇಕ ಕ್ರೀಡಾಕೂಟಗಳನ್ನು ಶಾಲೆಯಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದಾರೆ. ಇವರ ಸೇವೆಗಾಗಿ ನೇಷನ್ ಬಿಲ್ಡರ್ ಪ್ರಶಸ್ತಿ, ರೋಟರಿ – ಇನ್ನರ್ ವಿಲ್ ಕ್ಲಬ್ ವತಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ, ಯೆನೆಪೋಯ ಸಂಸ್ಥೆ ಮಂಗಳೂರು ವತಿಯಿಂದ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ದ.ಕ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ.

ಗಾಂಧಿನಗರ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾಗಿದ್ದ ಸಂದರ್ಭದಲ್ಲಿ ಶಾಲಾ ಆಟದ ಮೈದಾನ ವಿಸ್ತರಣೆ, ಧತ್ತಿನಿಧಿ ಯೋಜನೆಗಳು, ಶಾಲೆಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಕಾಂಪೌಂಡ್, ಬರವಣಿಗೆಗೆ ಬೇಕಾದ ಪೆನ್ನು, ಪುಸ್ತಕ, ಕೊಡೆ, ರಿಬ್ಬನ್, ಎ೪ ಶೀಟ್ ಇತ್ಯಾದಿಗಳನ್ನು ಸಂಘ ಸಂಸ್ಥೆಗಳಿಂದ, ದಾನಿಗಳಿಂದ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಶಾಲೆಯಲ್ಲಿ ಸ್ಕೌಟ್-ಗೈಡ್ ಮೇಳ, ವಿಜ್ಞಾನ ಮೇಳ, ಸೇವಾದಳ ರ್‍ಯಾಲಿ ಆಯೋಜಿಸಿದ್ದಾರೆ.


ಇವರು ಪ್ರಸ್ತುತ ಉಬರಡ್ಕ ಮಿತ್ತೂರು ಗ್ರಾಮದ ಕುತ್ತಮೊಟ್ಟೆಯಲ್ಲಿ ನೆಲೆಸಿದ್ದು, ಇವರ ಪತಿ ಎಲ್ಯಣ್ಣ ಗೌಡರು ಮಾಜಿ ಸೈನಿಕ, ಪ್ರಸ್ತುತ ಪ್ರಗತಿಪರ ಕೃಷಿಕರಾಗಿದ್ದಾರೆ. ಹಿರಿಯ ಪುತ್ರ ರೋಹಿತ್ ರವರು ಚೆನೈನ ಯಮಹಾ ಮೋಟಾರ್‍ಸ್ ನಲ್ಲಿ ಉದ್ಯೋಗದಲ್ಲಿದ್ದು, ಸೊಸೆ ಪಂಚಮಿ ಗಲ್ಫ್ ಏಷ್ಯಾ ಇಂಜಿನಿಯರಿಂಗ್ ಆಂಡ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಉದ್ಯೋಗದಲ್ಲಿದ್ದಾರೆ.
ಕಿರಿಯ ಪುತ್ರ ಲಾಲಿತ್ ಪಾನತ್ತಿಲರವರು ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ವ್ಯಾಸಂಗ ಮಾಡುತ್ತಿದ್ದಾರೆ
.