ಪೆರುವಾಜೆ : ಬ್ರಹ್ಮರಥೋತ್ಸವ, ಜಾತ್ರೆ – ಭದ್ರತಾ ವ್ಯವಸ್ಥೆ ಕುರಿತಂತೆ ಸಭೆ

0

ನೂರು ವರ್ಷಗಳ ಬಳಿಕ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಬ್ರಹ್ಮರಥೋತ್ಸವದ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದ್ದು ಭಕ್ತವೃಂದಕ್ಕೆ ಯಾವುದೇ ವ್ಯವಸ್ಥೆಗಳಲ್ಲಿ ಕುಂದು ಕೊರತೆ ಉಂಟಾಗದಂತೆ ಪ್ರತಿಯೊಬ್ಬರು ಸಮರ್ಪಣ ಭಾವದಿಂದ ಕೆಲಸ ನಿರ್ವಹಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಜಾತ್ರೆ ಮತ್ತು ಬ್ರಹ್ಮರಥೋತ್ಸವ ಪ್ರಯುಕ್ತ ಭದ್ರತೆಯ ವ್ಯವಸ್ಥೆಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಳ್ಳಾರೆ ಠಾಣಾ ಪೊಲೀಸರ ಉಪಸ್ಥಿತಿಯಲ್ಲಿ ಜ.07 ರಂದು ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಸುಗಮ ವ್ಯವಸ್ಥೆಯ ನೆಲೆಯಲ್ಲಿ ಪೊಲೀಸರ ಜತೆಗೆ ಭಕ್ತಾಧಿಗಳ ಸಹಕಾರವು ಅಗತ್ಯ. ಎಲ್ಲದಕ್ಕಿಂತ ಮುಖ್ಯವಾಗಿ ಕ್ಷೇತ್ರದಲ್ಲಿ ಸ್ವಯಂಸೇವಕರ ಪಾತ್ರ ಹಿರಿದಾದುದು ಎಂದರು.

ರಥ ಸಂಚಾರ ನಡೆದು ಪುನಃ ಮೂಲವಸ್ಥಾನಕ್ಕೆ ಸೇರುವ ತನಕ ನಮ್ಮೆಲ್ಲರ ಪಾತ್ರ ಮಹತ್ವದಾಗಿದೆ. ರಥೋತ್ಸವದ ಅಪೂರ್ವ ಕ್ಷಣವನ್ನು ಕಂಡು ನಾವೆಲ್ಲರೂ ಪುನೀತರಾಗೋಣ ಎಂದ ಅವರು ಜಾತ್ರೆಯ ಪ್ರಯುಕ್ತ ಸ್ವಚ್ಛತಾ ವಿಭಾಗದ ಬಗ್ಗೆ ನಿಗಾ ಇರಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ, ಕೋವಿಡ್ ಸುರಕ್ಷತೆಯ ದೃಷ್ಟಿಯಿಂದ ಮಾಸ್ಕ್ ಅಳವಡಿಕೆ, ಇದಕ್ಕಾಗಿ ಆರೋಗ್ಯ ಇಲಾಖೆಯ ಸಹಕಾರ ಪಡೆಯುವಂತೆ ಅವರು ಸೂಚಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿ, ದೇವರ ಕಾರ್ಯ ಏಕ ವ್ಯಕ್ತಿಯಿಂದ ಆಗುವಂತಹದು ಅಲ್ಲ. ಇದು ಎಲ್ಲ ಭಕ್ತರು ಸೇರಿ ಮಾಡಬೇಕಾದದ್ದು. 21 ಗ್ರಾಮಗಳಿಗೆ ಮಾಗಣೆ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರವು ಬ್ರಹ್ಮರಥೋತ್ಸವದ ಅಪೂರ್ವ ಕ್ಷಣವನ್ನು ಕಣ್ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಇದೆ. ಹಾಗಾಗಿ ನಾವೆಲ್ಲರೂ ಜತೆಗೂಡಿ ಕೆಲಸ ನಿರ್ವಹಿಸೋಣ ಎಂದರು.

ವೇದಿಕೆಯಲ್ಲಿ ಐರಿಷ್ ಫ್ಲವರಿಷ್‍ನ ಮಾಲಕ ಉಮೇಶ್ ಕೊಟ್ಟೆಕಾೈ, ವ್ಯವಸ್ಥಾಪನ ಸಮಿತಿ ಸದಸ್ಯರಾದ ನಾರಾಯಣ ಕೊಂಡೆಪ್ಪಾಡಿ, ಜಯಪ್ರಕಾಶ್ ರೈ ಪೆರುವಾಜೆ, ಜಗನ್ನಾಥ ರೈ ಎನ್, ಬೆಳ್ಳಾರೆ ಠಾಣಾ ಕ್ರೈಂ ಎಸ್‍ಐ ಅಶೋಕ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರುವಾಜೆ ಒಕ್ಕೂಟದ ಅಧ್ಯಕ್ಷ ಸುಂದರ ನಾಯ್ಕ ಮಠತ್ತಡ್ಕ, ಸೇವಾ ಪ್ರತಿನಿಧಿ ಹರಿಣಾಕ್ಷಿ, ಒಡಿಯೂರು ಸಂಘದ ಪ್ರೇಮಾವತಿ, ಶೌರ್ಯ ವಿಪತ್ತು ನಿರ್ವಹಣ ತಂಡದ ಸದಸ್ಯರು, ಭಾವೈಕ್ಯ ಯುವಕ ಮಂಡಲದ ಅಧ್ಯಕ್ಷ ರಜನೀಶ್, ಜೇಸಿಐ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ, ದೇವಾಲಯದ ವ್ಯವಸ್ಥಾಪಕ ವಸಂತ ಪೆರುವಾಜೆ ಮೊದಲಾದವರು ಉಪಸ್ಥಿತರಿದ್ದರು.