ಪ್ಲಾಟಿಂಗ್ ಮತ್ತು ಹಿಸ್ಸಾ ನಂಬ್ರ ಬದಲಾವಣೆಯಿಂದ ಪಹಣಿಯಲ್ಲಿ ಸಾಲದ ನೋಂದಣಿಯ ಸಮಸ್ಯೆ

0

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶಾಸಕರ ನೇತೃತ್ವದಲ್ಲಿ ಸಮಾಲೋಚನಾ ಸಭೆ

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪ್ಲಾಟಿಂಗ್ ಮತ್ತು ಹಿಸ್ಸಾ ನಂಬ್ರ ಬದಲಾವಣೆಯ ಕಾರಣದಿಂದ ಕೃಷಿಕರಿಗೆ ಸಾಲ ಬಟಾವಡೆಯ ಸಂದರ್ಭದಲ್ಲಿ ಸಾಲಗಾರ ಕೃಷಿಕನ ಪಹಣಿಯಲ್ಲಿ ಸಾಲದ ನೋಂದಣಿಯ ಸಮಸ್ಯೆಯ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯರವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆಯು ನಡೆಯಿತು.

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ‘ಅರಂತೋಡು ಗ್ರಾಮದ ಸ.ನಂ. 127/1 ಮತ್ತು ತೊಡಿಕಾನ ಗ್ರಾಮದ ಸ.ನಂ. 108ಕ್ಕೆ ಸಂಬಂಧಿಸಿದ ಭೂಮಿಯಲ್ಲಿ ಸರಕಾರದಿಂದ ರೈತರಿಗೆ ಮಂಜೂರಾಗಿರುವ ಜಮೀನುಗಳಿಗೆ ಪ್ರತ್ಯ-ಪ್ರತ್ಯೇಕ ಹಿಸ್ಸಾ ನಂಬ್ರಗಳಿದ್ದು ಕಾವೇರಿ ತಂತ್ರಾಂಶ ಬದಲಾವಣೆಯ ಸಂದರ್ಭದಲ್ಲಿ ಒಂದೇ ಹಿಸ್ಸಾ ನಂಬ್ರಕ್ಕೆ ಬದಲಾಗಿರುತ್ತದೆ. ಇದರಿಂದಾಗಿ ರೈತರಿಗೆ ಸಾಲ ಪಡೆಯಲು, ಪಡೆದ ಸಾಲ ಮಂಜೂರಾಗಿ ಫುಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಲು, ಫುಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿದ ಬಳಿಕ ಪಹಣಿಯಲ್ಲಿ ಸಾಲ ದಾಖಲಾಗಲು ತೊಡಕಾಗುತ್ತಿದೆ. ಈ ತೊಂದರೆಯಿಂದಾಗಿ ಕೃಷಿ ಸಾಲಗಳನ್ನು ಪಡಕೊಳ್ಳಲು, ಬೆಳೆವಿಮೆಗೆ ಅರ್ಜಿಯನ್ನು ಸಲ್ಲಿಸಲು, ಎನ್.ಸಿ.ಎಸ್. ಮಾಡಿಸಲು ಎಲ್ಲಾ ರೀತಿಯಲ್ಲೂ ತೊಂದರೆಗಳಾಗುತ್ತಿದೆ. ಹಳದಿ ರೋಗದಿಂದ ತತ್ತರಿಸಿ ಹೋಗಿರುವ ರೈತರು ಈಗ ಎದುರಾಗಿರುವ ತೊಂದರೆಯಿಂದ ಸರ್ಕಾರದ ಯೋಜನೆಗಳಿಂದಲೂ ವಂಚನೆಗೆ ಒಳಗಾಗುವ ಸಾಧ್ಯತೆಯಿದೆ. ಆದುದರಿಂದ ಪ್ರಥಮ ಪ್ರಾಶಸ್ತದಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕಾಗಿ’ ಶಾಸಕರನ್ನು ಮತ್ತು ತಹಶೀಲ್ದಾರರನ್ನು ಒತ್ತಾಯಿಸಿದರು.

ತಹಶೀಲ್ದಾರ್ ಮಂಜುನಾಥ್‌ರವರು ಮಾತನಾಡಿ ‘ಪ್ಲಾಟಿಂಗ್ ಸಮಸ್ಯೆ ರಾಜ್ಯಮಟ್ಟದಲ್ಲಿಯೇ ಇರುವುದರಿಂದ ತೀರ್ಮಾನಗಳು ಸರಕಾರದ ಹಂತದಲ್ಲಿಯೇ ಆಗಬೇಕಾಗುತ್ತದೆ. ಆದರೆ ತಂತ್ರಾಶದ ಉನ್ನತೀಕರಣದ ಕಾರಣದಿಂದ ಹಿಸ್ಸಾ ನಂಬ್ರದ ಬದಲಾವಣೆಯಿಂದ ಆಗಿರುವಂತಹ ಸಮಸ್ಯೆಗಳನ್ನು ಈ ಕೂಡಲೇ ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತೇನೆ’ ಎಂಬ ಭರವಸೆಯನ್ನು ನೀಡಿದರು.

ಅರಂತೋಡು ಜಿಲ್ಲಾ ಪಂಚಾಯತ್ ಕ್ಷೇತ್ರದ ಮಾಜಿ ಸದಸ್ಯರಾದ ಹರೀಶ್ ಕಂಜಿಪಿಲಿಯವರು ಮಾತನಾಡಿ ‘ಈ ಸಮಸ್ಯೆ ಬಹಳ ಗಂಭೀರವಾದದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು. ರೈತರು ಸರಕಾರದ ಯೋಜನೆಗಳಿಂದ ವಂಚಿತರಾಗುವುದನ್ನು ತಡೆಯುವ ಸಲುವಾಗಿ ಪ್ರಥಮವಾಗಿ ಹಿಸ್ಸಾ ನಂಬ್ರ ಈ ಮೊದಲಿನಂತೆಯೇ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.


ಗ್ರಾಮ ಪಂಚಾಯತ್ ಅಧ್ಯಕ್ಷರು ಮಾತನಾಡಿ ‘ಈ ಸಮಸ್ಯೆಗಳ ಜೊತೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಅಕ್ರಮ-ಸಕ್ರಮ ಅರ್ಜಿಗಳ ವಿಲೇವಾರಿಗೆ ಬಾಕಿಯಂತಹ ಸಮಸ್ಯೆಗಳ ಸಹಿತ ಇನ್ನೂ ಅನೇಕ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ’ ಎಂದರು. ವಲಯ ಅರಣ್ಯಾಧಿಕಾರಿ ಮಂಜುನಾಥ್ ರವರು ಮಾತನಾಡಿ ‘ಬದಲಾಗಿರುವ ಹಿಸ್ಸಾ ನಂಬ್ರಗಳನ್ನು ಈ ಹಿಂದಿ ನಂತೆಯೇ ಮಾಡಿದಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಸಾಧ್ಯ’ ಎಂದರು. ಸಭಾಧ್ಯಕ್ಷರಾದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯರವರು ಮಾತನಾಡಿ ‘ಅರಂತೋಡು ಗ್ರಾಮದ ಸ.ನಂ. 127/1 ಮತ್ತು ತೊಡಿಕಾನ ಗ್ರಾಮದ ಸ.ನಂ. 108ಕ್ಕೆ ಸಂಬಂಧಿಸಿದ ಭೂಮಿಯಲ್ಲಿ ಎದುರಾಗಿರುವ ತೊಂದರೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಹಶೀಲ್ದಾರರು, ಉಪನೋಂದಣಾಧಿಕಾರಿ, ಸರ್ವೇಯರ್ ಮತ್ತು ಸಂಬಂಧಿತ ಅಧಿಕಾರಗಳ ಸಭೆಯನ್ನು ಕರೆದು ಸಮಾಲೋಚನೆ ಮಾಡಲಾಗುತ್ತದೆ. ಅಗತ್ಯವಿದ್ದಲ್ಲಿ ಸಹಾಯಕ ಕಮೀಷನರ್ ಮತ್ತು ಜಿಲ್ಲಾಧಿಕಾರಿಗಳನ್ನು ಇಲ್ಲಿಯೇ ಕರೆದು ಸಭೆಯನ್ನು ಮಾಡೋಣ. ಸಮಸ್ಯೆಗಳನ್ನು ರೈತರೇ ನೇರವಾಗಿ ಮಂಡಿಸಿದಲ್ಲಿ ಪರಿಣಾಮಕಾರಿಯಾದ ಪರಿಹಾರಗಳನ್ನು ಕಂಡುಕೊಳ್ಳಬಹುದು. ಅಧಿಕಾರಿಗಳ ಜೊತೆಯಲ್ಲಿ ಎಲ್ಲಾ ರೈತರು ಸಹಕರಿಸಬೇಕು.

ಅಧಿಕಾರಿಗಳೂ ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವರ್ತರಾಗಬೇಕು.’ ಎಂದು ಹೇಳಿದರು. ಕಂದಾಯ ನಿರೀಕ್ಷಕರಾದ ಅವಿನ್ ರಂಗತ್ ಮಲೆಯವರು ಸದರಿ ಪ್ಲಾಟಿಂಗ್ ಬಗ್ಗೆ ಮಾಹಿತಿಯನ್ನು ನೀಡಿದರು. ಸಂಘದ ಸದಸ್ಯರಾದ ಹಾಗು ಮಾಜಿ ಪ್ರಾಂಶುಪಾಲರಾದ ಕೆ.ಆರ್. ಗಂಗಾಧರ, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ರಮಣ ಪೆತ್ತಾಜೆ ಹಾಗು ಸುರೇಶ್ ತೊಡಿಕಾನ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘದ ನಿರ್ದೇಶಕರಾದ ಕುಸುಮಾಧರ ಅಡ್ಕಬಳೆ ಸ್ವಾಗತಿಸಿ, ಸಂಘದ ಗುಮಾಸ್ತರಾದ ನಯನ್ ಕುಮಾರ್ ಕಿರ್ಲಾಯ ವಂದಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.