ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಹಳೆಗೇಟು ತಿರುವಿನಲ್ಲಿದ್ದ ಅಪಾಯಕಾರಿ ಕಾಡು ಪೊದೆಗಳ ತೆರವು

0

ಸ್ವಚ್ಛತಾ ಕಾರ್ಯದಲ್ಲಿ ಸಹಕರಿಸಿದ ಸುಳ್ಯ ಜನಸ್ಪಂದನಾ ವೇದಿಕೆ

ಸುಳ್ಯ ಹಳೆಗೇಟು ಪೆಟ್ರೋಲ್ ಬಂಕ್ ಮುಂಬಾಗ ಹೆದ್ದಾರಿ ಬದಿಯಲ್ಲಿ ಕಾಡುಪೊದೆಗಳು ಬೆಳೆದು ರಸ್ತೆಗೆ ತಾಗಿಕೊಂಡು ವಾಹನ ಸವಾರರಿಗೆ ಆತಂಕವನ್ನು ಉಂಟು ಮಾಡುತ್ತಿತ್ತು.

ಅಲ್ಲದೆ ಈ ಭಾಗದಲ್ಲಿ ದೊಡ್ಡ ತಿರುವು ಇರುವ ಕಾರಣ ಎದುರು ಭಾಗದಿಂದ ಬರುವ ವಾಹನಗಳು ಮತ್ತೊಂದು ಕಡೆಯಿಂದ ಬರುವ ವಾಹನ ಚಾಲಕರಿಗೆ ಕಾಣದೆ ಹಲವಾರು ಬಾರಿ ಅಪಘಾತಗಳು ಸಂಭವಿಸಿ ಜೀವ ಹಾನಿ ಘಟನೆಗಳು ಕೂಡ ಸಂಭವಿಸಿದ್ದವು.ಈ ಸಮಸ್ಯೆಗಳ ಬಗ್ಗೆ ಸುದ್ದಿ ಪತ್ರಿಕೆಯಲ್ಲಿ ವರದಿಗಳನ್ನು ಕೂಡ ಪ್ರಕಟಿಸಲಾಗಿತ್ತು.ಅಲ್ಲದೆ ಸ್ವಚ್ಛ ಸುಳ್ಯ ರಮಣೀಯ ಸುಳ್ಯ ತಂಡದ ಸದಸ್ಯರಿಂದ ಶ್ರಮದಾನದ ಮೂಲಕ ಎರಡು,ಮೂರು ಬಾರಿ ಸ್ವಚ್ಛತಾ ಕಾರ್ಯ ನಡೆದು ಕಾಡು ಬಳ್ಳಿಗಳ ತೆರವು ಕಾರ್ಯ ಕೂಡ ನಡೆದಿತ್ತು.

ಆದರೂ ರಸ್ತೆಗೆ ತಾಗಿಕೊಂಡಿರುವ ಗುಡ್ಡೆಯ ಮೇಲಿನಿಂದ ಮತ್ತೆ ಕಾಡು ಬಳ್ಳಿಗಳು ಬೆಳೆದು ರಸ್ತೆಗೆ ಆವರಿಸಿ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದೀಗ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಹೆದ್ದಾರಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ಕಳೆದ ಒಂದು ವಾರದಿಂದ 2,3 ಜೆ ಸಿ ಬಿ ಗಳ ಮೂಲಕ ಜಾಲ್ಸೂರಿನಿಂದ ಸಂಪಾಜೆವರೆಗೆ ಕೆಲಸ ಕಾರ್ಯ ಆರಂಭಗೊಂಡಿದೆ.

ಈ ನಿಟ್ಟಿನಲ್ಲಿ ಕಳೆದ ಎರಡು ದಿನಗಳ ಮೊದಲು ಹಳೆಗೇಟು ಭಾಗಕ್ಕೆ ಬಂದಾಗ ಅಲ್ಲಿ ವಿದ್ಯುತ್ ತಂತಿಗಳು ಮತ್ತು ಕುಡಿಯುವ ನೀರಿನ ಸಂಪರ್ಕದ ಪೈಪುಗಳಿದ್ದು ಕೆಲಸಕ್ಕೆ ಅಡಚಣೆಯಾಗಿ ಮೇಲಿನಿಂದ ಮೇಲಕ್ಕೆ ಅಲ್ಪಸ್ವಲ್ಪ ಸ್ವಚ್ಛತೆ ಮಾಡಿ ಹೋಗಿದ್ದರು.

ಇದನ್ನು ತಿಳಿದ ಸುಳ್ಯದ ಜನಸ್ಪಂದನಾ ಸಮಿತಿಯ ಸಂಚಾಲಕ ಸುಂದರ್ ರಾವ್ ಮತ್ತೆ ಅವರನ್ನು ಹಳೆಗೇಟು ಭಾಗಕ್ಕೆ ಕರೆಸಿ,ಮೆಸ್ಕಾಂ ಇಲಾಖೆ ಮತ್ತು ನಗರ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಮೆಸ್ಕಾಂ ಸಿಬ್ಬಂದಿಗಳಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಕೆಲಸ ಕಾರ್ಯಕ್ಕೆ ಅನುಕೂಲವಾಗುವಂತೆ ಮಾಡಿಕೊಟ್ಟರು. ಅಲ್ಲದೆ ಬೆಳಿಗ್ಗೆನಿಂದ ಸಂಜೆಯವರೆಗೆ ಸ್ಥಳದಲ್ಲೇ ನಿಂತು ಗುತ್ತಿಗೆದಾರರಿಗೆ, ಮತ್ತು ಜೆಸಿಬಿ ಚಾಲಕರಿಗೆ ಸಲಹಾ ಸೂಚನೆಗಳನ್ನು ನೀಡಿ ಹೆದ್ದಾರಿ ಪೂರ್ಣ ಸ್ವಚ್ಛಗೊಳಿಸುವ ರೀತಿಯಲ್ಲಿ ಸಹಕರಿಸಿ ಪರಿಸರ ಸಂಪೂರ್ಣ ಸ್ವಚ್ಛತೆಗೊಳ್ಳುವಂತೆ ಮತ್ತು ವಾಹನ ಸವಾರರಿಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನೋಡಿಕೊಂಡರು.