ಜ. 26 ರಿಂದ ಜ. 29: ಅಯ್ಯನಕಟ್ಟೆ ಜಾತ್ರೋತ್ಸವ

0

ಉಗ್ರಾಣ ಮುಹೂರ್ತ ಮತ್ತು ಗೊನೆ ಕಡಿಯುವ ಕಾರ್ಯ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಮೂರುಕಲ್ಲಡ್ಕ ಮತ್ತು ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಜಾತ್ರೋತ್ಸವ ಜ. 26ರಿಂದ ಜ. 29ರ ವರೆಗೆ ವಿಜೃಂಭಣೆಯಿಂದ ಜರಗಲಿದೆ.
ಜ. 20 ರಂದು ಮೂರುಕಲ್ಲಡ್ಕದಲ್ಲಿ ಉಗ್ರಾಣ ಮುಹೂರ್ತ ಮತ್ತು ಗೊನೆ ಕಡಿಯುವ ಕಾರ್ಯ ನಡೆಯಿತು.


ಸೇವಾ ಸಮಿತಿ ಗೌರವಾಧ್ಯಕ್ಷರೂ ವಿಶ್ವಸ್ಥರೂ ಆದ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ವಿಶ್ವಸ್ಥರಾದ ಎನ್. ವಿಶ್ವನಾಥ ರೈ ಕಳಂಜ‌ಗುತ್ತು, ವೆಂಕಟ್ರಮಣ ಗೌಡ ತಂಟೆಪ್ಪಾಡಿ, ಶೀನಪ್ಪ ಗೌಡ ತೋಟದಮೂಲೆ, ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ, ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಕಿಲಂಗೋಡಿ, ಕೋಶಾಧಿಕಾರಿ ಪ್ರಭಾಕರ ಆಳ್ವ, ಸದಸ್ಯರಾದ ಕೂಸಪ್ಪ ಗೌಡ ಮುಗುಪ್ಪು, ಗಂಗಾಧರ ತೋಟದಮೂಲೆ, ಜಾತ್ರೋತ್ಸವ ಸಮಿತಿ 2024 ಗೌರವಾಧ್ಯಕ್ಷ ಸಪ್ತಗಿರಿ ಪುರಂದರ ಗೌಡ, ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಕಾರ್ಯದರ್ಶಿ ಕುಶಾಲಪ್ಪ ಗೌಡ ಬಿ ಮಣಿಮಜಲು, ಉಪಾಧ್ಯಕ್ಷ ಪುರುಷೋತ್ತಮ ತಂಟೆಪ್ಪಾಡಿ ಜೊತೆ ಕಾರ್ಯದರ್ಶಿ ಕೌಶಿಕ್ ಕೊಡಪಾಲ, ಮಾರ್ಗದರ್ಶಕರಾದ ಮುಂಡುಗಾರು ಸುಬ್ರಹ್ಮಣ್ಯ, ಸುಧಾಕರ ರೈ ಎ.ಎಂ, ಬಾಳಿಲ ರಾಮಚಂದ್ರ ರಾವ್, ರುಕ್ಮಯ್ಯ ಗೌಡ ಕಳಂಜ, ಅಚ್ಚುತ ಗೌಡ ಬಾಳಿಲ ಸೇರಿದಂತೆ ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಧಾನ ದೈವದ ಪಾತ್ರಿ ಲಕ್ಷ್ಮಣ ಗೌಡ ಬೇರಿಕೆ ದೇವತಾ ಪ್ರಾರ್ಥನೆ ನೆರವೇರಿಸಿದರು.
ಜ. 26ರಂದು ಬೆಳಿಗ್ಗೆ ವ9.30ರಿಂದ ತಂಟೆಪ್ಪಾಡಿ ಶ್ರೀ ಶಿರಾಡಿ ದೈವದ ಸನ್ನಿಧಿಯಲ್ಲಿ ಗಣಪತಿ ಹವನ, ನಾಗತಂಬಿಲ, ವಿಶೇಷ ತಂಬಿಲ ನಡೆಯಲಿದೆ.

ಬೆಳಿಗ್ಗೆ ಗಂಟೆ 11 ರಿಂದ ಮೂರುಕಲ್ಲಡ್ಕದಲ್ಲಿ ನಾಗತಂಬಿಲ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5:00ರಿಂದ ಬಾಳಿಲ ಶ್ರೀ ಮಂಜುನಾಥೇಶ್ವರ ದ್ವಾರದ ಬಳಿಯಿಂದ ಮೂರುಕಲ್ಲಡ್ಕ ಶ್ರೀ ಉಳ್ಳಾಕುಲು ಸ್ಥಾನದವರೆಗೆ ಹಸಿರುವಾಣಿ ಮೆರವಣಿಗೆ ನಡೆಯಲಿದೆ. ಜ. 27ಎಂದು ಬೆಳಿಗ್ಗೆ 8.30 ರಿಂದ ಗಣಪತಿ ಹವನ ಸಹಿತ ಚಂಡಿಕಾ ಹವನ ಮತ್ತು ದುರ್ಗಾ ಪೂಜೆ, ದೈವಗಳಿಗೆ ವಿಶೇಷ ತಂಬಿಲ ಸೇವೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಕುಕ್ಕುತ್ತಡಿಯ ಶ್ರೀ ದೈವಗಳ ಬಚ್ಚೆಲ್‌ಕಟ್ಟೆಯಲ್ಲಿ ತಂಬಿಲ ಸೇವೆ ನಡೆಯಲಿದೆ. ಸಂಜೆ 6:45 ರಿಂದ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಕೋಟೆಮುಂಡುಗಾರು, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕಳಂಜ‌, ಬ್ರಾಹ್ಮರಿ ಮಹಿಳಾ ಭಜನಾ ಮಂಡಳಿ ತಂಟೆಪ್ಪಾಡಿ ಇವರಿಂದ ಮೂರುಕಲ್ಲಡ್ಕದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7:30 ರಿಂದ ಶ್ರೀ ಉಳ್ಳಾಕುಲು ದೈವಕ್ಕೆ ಎಣ್ಣೆಬೂಳ್ಯ ನಡೆಯಲಿದೆ.

ಜ. 28ರಂದು ಬೆಳಿಗ್ಗೆ 5:30ಕ್ಕೆ ಮೂರುಕಲ್ಲಡ್ಕ ದೈವಸ್ಥಾನದಿಂದ ಸಪರಿವಾರ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವಗಳ ಕಿರುವಾಲು, ತೋಟದ ಮೂಲೆ ಸ್ಥಾನದಿಂದ ರುದ್ರಚಾಮುಂಡಿ ದೈವದ ಕಿರುವಾಲು ಹೊರಟು ಮೂರುಕಲ್ಲಡ್ಕದಲ್ಲಿ ಏಕತ್ರಗೊಂಡು ಕಲ್ಲಮಾಡಕ್ಕೆ ತೆರಳಲಿದೆ. ಸುಪ್ರಭಾತ 7.00ರಿಂದ ಅಯ್ಯನಕಟ್ಟೆ ಕಲ್ಲಮಾಡದಲ್ಲಿ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವದ ಸಿರಿಮುಡಿ ಏರಿ ಕಾಲಾವಧಿ ನೇಮವು ನಡೆಯಲಿದ್ದು ಬಳಿಕ ಬಟ್ಟಲು ಕಾಣಿಕೆ, ಸಿರಿಮುಡಿ ಗಂಧ ಪ್ರಸಾದ ವಿತರಣೆಯಾಗಿ ತದನಂತರ, ಕೊಡಮಣಿತ್ತಾಯ, ಕೊಲ್ಲಿಕುಮಾರ, ಪುರುಷ ದೈವ, ಮೈಸಂದಾಯ ದೈವಗಳ ಕಟ್ಟುಕಟ್ಟಳೆಯ ನೇಮ, ಬೂಳ್ಯ ವಿತರಣೆ ನಡೆಯಲಿದೆ. ಪೂ. 11:30 ರಿಂದ ರುದ್ರಚಾಮುಂಡಿ ದೈವದ ನರ್ತನ ಸೇವೆ, ಬೂಳ್ಯ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ವಿಶ್ರಾಂತ ಅಧ್ಯಾಪಕರಾದ ಸದಾಶಿವ ಭಟ್ ಜೋಗಿಬೆಟ್ಟು ಭಾಗವಹಿಸಲಿದ್ದಾರೆ. ಅರ್ ಯಾತ್ರಾ ಸಂಸದ ನಳೀನ್ ಕುಮಾರ್ ಕಟೀಲು, ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ, ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟು, ಕಳಂಜ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ಭಾಗವಹಿಸಲಿದ್ದಾರೆ. ಸಂಜೆ 7.00ರಿಂದ ಪ್ರಸಿದ್ಧ ಕಲಾವಿದರ ಕೊಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಮರ್ಯಾದಾ ಪುರುಷೋತ್ತಮ ನಡೆಯಲಿದೆ. ರಾತ್ರಿ 9:00 ರಿಂದ ಅನ್ನಸಂತರ್ಪಣೆ ನಡೆಯಲಿದೆ. ಜ. 29ರಂದು ಬೆಳಿಗ್ಗೆ 7.30 ಕ್ಕೆ ತಂಟೆಪಾಡಿ ಶಿರಾಡಿ ದೈವದ ಭಂಡಾರ ಹೊರಡುವುದು, ಬೆಳಿಗ್ಗೆ 8.00ಕ್ಕೆ ಕಳಂಜ ಗುತ್ತಿನಿಂದ ಧೂಮಾವತಿ ದೈವದ ಬಂಡಾರ ಹೊರಡುವುದು ಮತ್ತು ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟು ಕಲ್ಲಮಾಡದಲ್ಲಿ ಮೂರು ದೈವಗಳ ಕಾಲಾವಧಿ ನೇಮ(ತಿರ್ತನೇಮೊ), ಬೂಳ್ಯ ವಿತರಣೆ ನಡೆಯಲಿದೆ.

ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ 2.30ರಿಂದ ಕಲ್ಲಮಾಡದಲ್ಲಿ ಶಿರಾಡಿ ದೈವದ ದೊಂಪದ ಬಲಿನೇಮ ನಡೆದು ಮಾರಿ ಹೊರಡಲಿದೆ. ಸಂಜೆಯ ವೇಳೆ ಬೆಳ್ಳಾರೆ ಸಮೀಪದ ತಂಬಿನಮಕ್ಕಿಯಲ್ಲಿ ಗೌರಿಹೊಳೆಯ ಸಮೀಪ ಬಲಿಸಮರ್ಪಣೆಯಾಗಿ ನಾಲ್ಕುದಿನಗಳ ಅಯ್ಯನಕಟ್ಟೆ ಜಾತ್ರೆ ಸಂಪನ್ನಗೊಳ್ಳುತ್ತದೆ.