ಶ್ರೀ ಯೋಗೇಶ್ವರಾನಂದ ಸ್ವಾಮೀಜಿಯವರಿಗೆ ಅಭಿನಂದನೆ
ಆಧ್ಯಾತ್ಮ ಸಾಧನೆಯ ಮೌನ ಕ್ರಾಂತಿಯ ಮೂಲಕ ಸಮಾಜದಲ್ಲಿ ಬದಲಾವಣೆ ತಂದ ಬಲು ದೊಡ್ಡ ಇತಿಹಾಸ ನಮ್ಮ ದೇಶಕ್ಕಿದೆ. ಹಲವು ಆಶ್ರಮಗಳು ಭಕ್ತರ ಮನೆ, ಮನಗಳಿಗೆ ನೆಮ್ಮದಿಯನ್ನೂ ನೀಡಿದೆ. ಮಾತುಗಳ ಶಕ್ತಿಗಿಂತ ಮೌನ ಕ್ರಾಂತಿ ಸಮಾಜದಲ್ಲಿ ಬದಲಾವಣೆ ತರುತ್ತದೆ ಎಂದು ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅಭಿಪ್ರಾಯ ಪಟ್ಟಿದ್ದಾರೆ.
ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಅಭಿನಂದನಾ ಸಮಿತಿ ಮತ್ತು ಚೈತನ್ಯ ಸೇವಾ ಟ್ರಸ್ಟ್( ರಿ ) ಅಜ್ಜಾವರ ದೇವರ ಕಳಿಯ ಇದರ ವತಿಯಿಂದ ಆಶ್ರಮದಲ್ಲಿ ಇಂದು ನಡೆದ ಶ್ರೀ ಸ್ವಾಮೀಜಿಯವರ 200ನೇ ಕೃತಿ ” ಸ್ವಮಾತೆಯೇ ಜಗನ್ಮಾತೆಯ ಸ್ವರೂಪಳು ” ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸ್ವಾಮೀಜಿಯವರು, “ಸಮಾಜದಲ್ಲಿ ಯಾರೂ ಮೇಲು ಕೀಳಲ್ಲ, ಎಲ್ಲರೂ ಸಮಾನರು. ನಾವು ಸಮಾಜದಲ್ಲಿ ಸಾಮರಸ್ಯದಿಂದ ಹೊಂದಿಕೊಂಡು ಬಾಳಬೇಕು ಎಂದು ಹೇಳಿದರು.
ಸ್ವಾಮೀಜಿಯವರ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸ ಪ್ರೊ. ಸಂಜೀವ ಕುದ್ಪಾಜೆಯವರು, ಸಮಾಜದಲ್ಲಿ ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ ಮುಖ್ಯ. ಮಕ್ಕಳ ಎದುರು ಕೆಟ್ಟ ವಿಷಯಗಳನ್ನು ಮಾತನಾಡಬಾರದು. ನಾವು ಹಣದ ಮೋಹಕ್ಕೆ ಒಳಗಾಗದೆ ನಮ್ಮತನವನ್ನು ಮರೆಯಬಾರದು. ಪ್ರಕೃತಿಯನ್ನು ಪ್ರೀತಿಸಿ ಬದುಕಬೇಕು ಎಂದರಲ್ಲದೆ, ಸ್ವಾಮೀಜಿಯವರು ಉತ್ತಮ ಕೃತಿ ಸಮಾಜಕ್ಕೆ ನೀಡುತ್ತಿದ್ದಾರೆ.
ಈ ಕೃತಿಗಳನ್ನು ಎಲ್ಲರೂ ಓದಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಯೋಧ್ಯ ಕರಸೇವಕ ಜಗನ್ನಾಥ ಮುಡೂರು ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಲಾಯಿತು. ಚೈತನ್ಯ ಸೇವಾ ಆಶ್ರಮದ ಟ್ರಸ್ಟಿ ಪ್ರೊ. ಅನಿಲ್ ಬಿ.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿ ಪ್ರಣವಿ ಸ್ವಾಗತಿಸಿ ವಂದಿಸಿದರು. ಪ್ರೊ.ರೇಖಾ ಕಾರ್ಯಕ್ರಮ ನಿರೂಪಿಸಿದರು.