ಭಾರತೀಯ ಭೂಸೇನೆಯಲ್ಲಿ ಸುಮಾರು 22 ವರ್ಷಗಳ ಕಾಲ ಹವಾಲ್ದಾರ್ ಆಗಿ ದೇಶದ ವಿವಿಧೆಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿ ಹುಟ್ಟೂರಿಗೆ ಆಗಮಿಸಿದ ಯೋಧ ಬಳ್ಪ ಗ್ರಾಮದ ರವಿ ಕೊಠಾರಿಯವರಿಗೆ ಅದ್ದೂರಿಯ ಸ್ವಾಗತ ಕಾರ್ಯಕ್ರಮ ಫೆ. 3ರಂದು ಬಳ್ಪ ಮತ್ತು ಬೀದಿಗುಡ್ಡೆಯಲ್ಲಿ ನಡೆಯಿತು.
ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಬೀದಿಗುಡ್ಡೆ ಮತ್ತು ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್‌ನವರು ಆಯೋಜಿಸಿ ಕಾರ್ಯಕ್ರಮದಲ್ಲಿ ಆರಂಭದಲ್ಲಿ
ಬಳ್ಪ ಗ್ರಾ.ಪಂ. ಬಳಿಗೆ ಆಗಮಿಸಿದ ರವಿ ಕೊಠಾರಿಯವರನ್ನು ಪಂಚಾಯತ್ ಮತ್ತು ಗ್ರಾಮಸ್ಥರ ವತಿಯಿಂದ ಸ್ವಾಗತಿಸಿ ಸನ್ಮಾನಿಸಲಾಯಿತು.
ಬಳಿಕ ವಾಹನ ಮೆರವಣಿಗೆಯೊಂದಿಗೆ ಬೀದಿಗುಡ್ಡೆಗೆ ತೆರಳಿ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಸಭಾ ಕಾರ್ಯಕ್ರಮ ಏರ್ಪಡಿಸಿ ಭಜನಾ ಮಂಡಳಿ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಊರವರೂ ರವಿ ಕೊಠಾರಿಯವರನ್ನು ವೈಯಕ್ತಿಕವಾಗಿಯೂ ಸನ್ಮಾನಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಪ ಗ್ರಾ.ಪಂ. ಅಧ್ಯಕ್ಷ ಹರ್ಷಿತ್ ಕಾರ್ಜ ವಹಿಸಿದ್ದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಯೇನೆಕಲ್ಲು ರವಿಕೊಠಾರಿ ದಂಪತಿಯನ್ನು ಸನ್ಮಾನಿಸಿದರು. ಉದ್ಯಮಿ ಹಾಗೂ ಧಾರ್ಮಿಕ ಮುಖಂಡ ಸದಾನಂದ ರೈ ಅರ್ಗುಡಿ, ರವಿ ಕೊಠಾರಿಯವರ ಪತ್ನಿ ಶ್ರೀಮತಿ ರೂಪ, ತಂದೆ ಶೇಷಪ್ಪ ಗೌಡ, ತಾಯಿ ಶ್ರೀಮತಿ ಕೆಂಚಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜನಾ ಮಂಡಳಿ ಅಧ್ಯಕ್ಷ ಎಲ್ಯಣ್ಣ ಗೌಡ ಸ್ವಾಗತಿಸಿ ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಜಯಂತ್ ಸಂಪ್ಯಾಡಿ, ವಂದಿಸಿದರು. ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮಹೇಶ್ ಸೂಂತಾರು ಕಾರ್ಯಕ್ರಮ ನಿರೂಪಿಸಿದರು.
ಕಡಬ ತಾಲೂಕಿನ ಬಳ್ಪ ಗ್ರಾಮದ ಕೊಠಾರಿ ಮನೆ ಶ್ರೀಮತಿ ಕೆಂಚಮ್ಮ ಮತ್ತು ಶೇಷಪ್ಪ ಗೌಡ ದಂಪತಿಯ ಇಬ್ಬರು ಮಕ್ಕಳಲ್ಲಿ ಪ್ರಥಮ ಪುತ್ರನಾಗಿ 1979ರ ಡಿ. 31ರಂದು ಜನಿಸಿದ ರವಿ ಕೊಠಾರಿಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ.ಶಾಲೆ ಸಂಪ್ಯಾಡಿ ಬೀದಿಗುಡ್ಡೆ ಯಲ್ಲಿ, 5 ರಿಂದ 7 ನೇ ತರಗತಿಯನ್ನು ಸ.ಹಿ.ಪ್ರಾ ಶಾಲೆ ಬಳ್ಪ ದಲ್ಲಿ, ಪ್ರೌಢ ಶಿಕ್ಷಣವನ್ನು ಸ.ಪ್ರೌಢ ಶಾಲೆ ಏನೆಕಲ್ಲಿನಲ್ಲಿ ಹಾಗೂ ಪದವಿಪೂರ್ವ ಶಿಕ್ಷಣವನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ.ಕಾಲೇಜು ಸುಬ್ರಹ್ಮಣ್ಯದಲ್ಲಿ ಪೂರೈಸಿದರು.
ವಿದ್ಯಾರ್ಥಿ ಜೀವನದಲ್ಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಅತ್ಯುತ್ತಮ ಕಬಡ್ಡಿ ಆಟಗಾರನಾಗಿ ತನ್ನದೇ ಆದ ವಿಶಿಷ್ಟ ರೀತಿಯ ದಾಳಿಯೊಂದಿಗೆ ಸರ್ವಾಂಗೀಣ ಆಟಗಾರ ನಾಗಿ ಶ್ರೀ ಸಿಧ್ದಿವಿನಾಯಕ ಸ್ಪೋರ್ಟ್ಸ್ ಕ್ಲಬ್‌ನ ಕಬಡ್ಡಿ ತಂಡವನ್ನು ಪ್ರತಿನಿಧಿಸಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದರು. ಜನವರಿ 2002ರಲ್ಲಿ ಭಾರತೀಯ ಭೂಸೇನೆಗೆ ಆಯ್ಕೆಯಾಗಿ
ಮದ್ರಾಸ್ ರೆಜಿಮೆಂಟ್ ನಲ್ಲಿ ಹವಾಲ್ದಾರ್ ಅಗಿ ಸೇವೆ ಪ್ರಾರಂಬಿಸಿದರು. ನಂತರ ಭೂತಾನ್, ದೆಹಲಿ, ಹೈದರಾಬಾದ್ ನಲ್ಲಿ ಸೇವೆ ಸಲ್ಲಿಸಿ ಮದ್ರಾಸ್ ರೆಜಿಮೆಂಟ್ ನಲ್ಲೇ ಸೆವಾ ನಿವೃತ್ತಿ ಹೊಂದಿರುತ್ತಾರೆ. 2009 ರಲ್ಲಿ ರೂಪ ಇವರನ್ನು ವಿವಾಹವಾಗಿದ್ದು, ಓರ್ವ ಪುತ್ರ ಲಕ್ಷಣ್ ವಿದ್ಯಾರ್ಥಿಯಾಗಿದ್ದಾರೆ.