ಗ್ರಾಮ ಮಟ್ಟದಲ್ಲಿಯೂ ಸಾಹಿತ್ಯ ಸಂಘಟನೆ – ಡಾ.ಎಂ.ಪಿ. ಶ್ರೀನಾಥ್
ರಾಜ್ಯ, ತಾಲೂಕು, ಗಡಿನಾಡುಗಳಲ್ಲಿ ಸಾಹಿತ್ಯ ಸಂಘಟನೆ ಯಶಸ್ವಿಯಾಗಿ ನಡೆಯುತ್ತಿದ್ದು, ಇದೀಗ ಹೋಬಳಿ ಘಟಕ ರಚಿಸಲಾಗಿದೆ.ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಸಾಹಿತ್ಯ ಸಂಘಟನೆ ಮಾಡಲಾಗುತ್ತದೆ. ಗ್ರಾಮ ಸಂಘಟನೆಗೆ ಅಧ್ಯಕ್ಷರ ಬದಲು ಸಂಚಾಲಕರನ್ನು ನೇಮಿಸಲಾಗುತ್ತದೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಹೇಳಿದರು.
ಅವರು ಇಂದು ಸುಳ್ಯ ಕನ್ನಡ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಮತ್ತು ಪಂಜ ಹೋಬಳಿ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯಪೂರ್ಣ ಸಮಾಜ ನಿರ್ಮಿಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸ. ವಿದ್ಯಾರ್ಥಿಗಳು ಇದ್ದಲ್ಲಿಗೆ ಸಾಹಿತ್ಯ ಪರಿಷತ್ತು ಹೋಗಬೇಕು. ಸಾಹಿತ್ಯ ಪರಿಷತ್ತಿನಿಂದಾಗಿ ವಿದ್ಯಾರ್ಥಿಗಳ ಜೀವನ ಬದಲಾಗಬೇಕು. ಸಾಹಿತ್ಯ ಪರಿಷತ್ತಿಗೆ ಹೆಚ್ಚು ಹೆಚ್ಚು ಸದಸ್ಯರು ಸೇರ್ಪಡೆಗೊಳ್ಳಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಕವಿಗಳಾದ ಕುತ್ಯಾಳ ನಾಗಪ್ಪ ಗೌಡ (ಕಿರಣ )ಮಾತನಾಡಿ ಸಾಹಿತ್ಯದ ಮೌಲ್ಯಮಾಪನವನ್ನು ಸಾಹಿತ್ಯ ಪರಿಷತ್ತು ಮಾಡಬೇಕು.ಸಾಹಿತ್ಯ ಸಮ್ಮೇಳನಗಳು ಮೆರವಣಿಗೆ ಹಬ್ಬದ ವಾತಾವರಣಕ್ಕೆ ಸೀಮಿತವಾಗದೆ ಸಾಹಿತ್ಯದ ವಿಮರ್ಶೆಗೆ ವೇದಿಕೆಯಾಗಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲ್ ವಹಿಸಿದ್ದರು. ಸುಳ್ಯ ಹೋಬಳಿ ಘಟಕದ ಅಧ್ಯಕ್ಷರಾದ ಚಂದ್ರಾವತಿ ಬಡ್ಡಡ್ಕ ಮತ್ತು ತಂಡ ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ ಮತ್ತು ತಂಡದ ಪದಗ್ರಹಣ ನಡೆಯಿತು.
ನೂತನ ಪದಾಧಿಕಾರಿಗಳಿಗೆ ಕನ್ನಡ ಶಾಲನ್ನು ಹಾಕಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳು ಬರಮಾಡಿಕೊಂಡರು. ವೇದಿಕೆಯಲ್ಲಿ ಜಿಲ್ಲಾ ಕಸಾಪ ಪ್ರತಿನಿಧಿ ರಾಮಚಂದ್ರ ಪಲತ್ತಡ್ಕ, ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಚಂದ್ರಾವತಿ ಮತ್ತು ತೇಜಸ್ವಿ ಕಡಪಳ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಾಯಕ ರಮೇಶ್ ಮೆಟ್ಟಿನಡ್ಕ ಆಶಯ ಗೀತೆ ಲಹಾಡಿದರು. ಅಧ್ಯಕ್ಷ ಚಂದ್ರಶೇಖರ ಪೇರಾಲು ಸ್ವಾಗತಿಸಿ, ಶ್ರೀಮತಿ ಚಂದ್ರಮತಿ ವಂದಿಸಿದರು.ಕಸಾಪ ನಿರ್ದೇಶಕಿ ಶ್ರೀಮತಿ ಲತಾ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.
ಕಸಾಪ ನಿರ್ದೇಶಕರುಗಳಾದ ಪ್ರೊ. ಬಾಲಚಂದ್ರ ಗೌಡ ,ಪ್ರೊ. ಸಂಜೀವ ಕುದ್ಪಾಜೆ, ಗೋಪಿನಾಥ ಮೆತ್ತಡ್ಕ, ಸಂಕೀರ್ಣ ಚೊಕ್ಕಾಡಿ, ರಮೇಶ್ ನೀರಬಿದಿರೆ, ಕೇಶವ ಸಿ.ಎ., ಯೋಗೇಶ್ ಹೊಸೊಳಿಕೆ, ದೇವಪ್ಪ ಹೈದಂಗೂರು ಸಹಕರಿಸಿದರು.