ಅಂಗನವಾಡಿ ಕೇಂದ್ರಗಳಿಗೆ ಇನ್ನೂ ಬಾರದ ಪೌಷ್ಟಿಕ ಆಹಾರ ಸಾಮಾಗ್ರಿ

0

ಫೆಬ್ರವರಿ ತಿಂಗಳು ಅಂತ್ಯವಾಗುತ್ತಿದ್ದರು ಸರ್ಕಾರದಿಂದ ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗಬೇಕಿದ್ದ ಪೌಷ್ಟಿಕ ಆಹಾರ ಸಾಮಗ್ರಿಗಳು ಇನ್ನು ಬಂದಿಲ್ಲ. ಇನ್ನು ವಾರದೊಳಗೆ ಆಹಾರ ಸಾಮಾಗ್ರಿ ಬಾರದಿದ್ದರೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಜನವರಿ ತಿಂಗಳ ಪ್ರಾರಂಭದಲ್ಲಿ ಆಹಾರ ಬಂದ ಬಳಿಕ ಇದುವರೆಗೆ ಆಹಾರ ಸಾಮಾಗ್ರಿಗಳು ಅಂಗನವಾಡಿ ಕೇಂದ್ರಗಳಿಗೆ ಬಾರದೆ ಇರುವುದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಬೆಳಗ್ಗೆ ‌ಮಕ್ಕಳಿಗೆ ಕೊಡುವ ಆಹಾರದ ಕೊರತೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಅಂಗನವಾಡಿಯ ಮಕ್ಕಳಿಗೆ ವಾರದ ಮೂರು ದಿನ ಮೊಳಕೆ ಬರಿಸಿದ ಹೆಸರು ಕಾಳು, ಕಡಲೆ ಕಾಳು, ಮತ್ತು ಹಾಲನ್ನು ನೀಡಲಾಗುತ್ತಿತ್ತು. ವಾರದ ನಾಲ್ಕು ದಿನಗಳು ಎರಡು ದಿನ ಗಂಜಿ ಮತ್ತು ಉರುಳಿ ಚಟ್ನಿ, ಎರಡು ದಿನ ಅನ್ನ ಸಾಂಬಾರ್ ನೀಡಲಾಗುತ್ತಿತ್ತು.


ಇದೀಗ ಅದನ್ನು ಬದಲಾವಣೆಗೊಳಿಸಿ ವಾರದ ಮೂರು ದಿನ ಅಕ್ಕಿ ಕಿಚಡಿ, ಮೂರು ದಿನ ಅನ್ನ ಸಾಂಬಾರು, ಬೆಳಿಗ್ಗೆ ಪುಷ್ಟಿ ಉಂಡೆ, ಮೂರು ದಿನ ಪುಷ್ಟಿ ಆಹಾರ ನೀಡಲಾಗುತ್ತಿದೆ.
ಆಹಾರದಲ್ಲಿ ಬದಲಾವಣೆ ಆದ ಕಾರಣ ಈ ಬಾರಿಯ ಸಾಮಗ್ರಿಗಳು ಬರಲು ತಡವಾಗಿದೆ ಎಂದು ತಿಳಿದುಬಂದಿದೆ.


ಈ ಬಾರಿ ತಡವಾದ ಹಿನ್ನೆಲೆಯಲ್ಲಿ ಗರ್ಭಿಣಿ ಸ್ತ್ರೀಯರು, ಬಾಣಂತಿಯರು ಮತ್ತು ಆರು ತಿಂಗಳಿನಿಂದ ಮೂರು ವರ್ಷದವರೆಗಿರುವ ಮಕ್ಕಳಿಗೂ ಕೊಡಲಿರುವ ಪೌಷ್ಟಿಕ ಆಹಾರ ಹಂಚಿಕೆಯಲ್ಲೂ ತಡವಾಗಿದ್ದು ಶೀಘ್ರದಲ್ಲಿ ಸರಿಯಾಗಲಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದಾಗ, “ಅಂಗನವಾಡಿ ಕೇಂದ್ರದ ಫುಡ್ ಮೆನು ಬದಲಾಗಿದೆ. ಆದ್ದರಿಂದ ಜನವರಿ ತಿಂಗಳ ಫುಡ್ ಬರಬೇಕಷ್ಟೆ. ಈಗ ತಾಲೂಕಿನ ಅಂಗನವಾಡಿಗಳಲ್ಲಿ ಮಧ್ಯಾಹ್ನದ ಫುಡ್ ಗೆ ಯಾವುದೇ ಸಮಸ್ಯೆ ಇಲ್ಲ. ಬೆಳಗ್ಗೆ ನೀಡುವ ಉಪಹಾರ ಸಮಸ್ಯೆ ಆಗುತ್ತದೆ ಎಂದು ಗೊತ್ತಾದಾಗ ಪುಡ್ ಹೆಚ್ಚಿಗೆ ಇರುವ ಪಕ್ಕದ ಅಂಗನವಾಡಿಯಿಂದ ಪಡೆಯುವಂತೆ ಮಾಹಿತಿ ನೀಡಿದ್ದೇವೆ. ಈ ಕುರಿತು ನಾವು ಮಾಹಿತಿ ನೀಡಿದ್ದು, ವಾರದೊಳಗೆ ಆಹಾರ ಸರಬರಾಜು ಆಗುತ್ತದೆ ಎಂದು ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.