ಅಸಮರ್ಪಕ ಪೈಪ್ ಅಳವಡಿಕೆ ಕಾರ್ಯ ನಿಲ್ಲಿಸದಿದ್ದಲ್ಲಿ ಮಾ 11 ರಂದು ನ. ಪಂ. ಮುಂಭಾಗ ಧರಣಿ ಸತ್ಯಾಗ್ರಹ :ಕೆ.ಎಸ್. ಉಮ್ಮರ್ ಮನವಿ
ಸುಳ್ಯ ನಗರದಲ್ಲಿ ಆರಂಭಗೊಂಡಿರುವ ಕುಡಿಯುವ ನೀರಿನ 58 ಕೋಟಿ ರೂ ಗಳ ಬೃಹತ್ ಯೋಜನೆಯ ಪೈಪುಗಳನ್ನು ಅಳವಡಿಸುವ ಕಾಮಗಾರಿಯಿಂದ ಸುಳ್ಯದ ನಾನಾ ಕಡೆಗಳಲ್ಲಿ ನೀರಿಗಾಗಿ ಸಮಸ್ಯೆ ಎದುರಾಗಿದೆ. ಕೂಡಲೆ ಈ ಕಾಮಗಾರಿಯನ್ನು ನಿಲ್ಲಿಸಿದಿದ್ದಲ್ಲಿ ನಗರ ಪಂಚಾಯತ್ ಮುಂಬಾಗ ಮಾರ್ಚ್ 11ರಂದು ಬೆಳಿಗ್ಗೆ ಸಾರ್ವಜನಿಕರನ್ನು ಸೇರಿಸಿಕೊಂಡು ಧರಣಿ ಸತ್ಯಾಗ್ರಹ ಮಾಡುವುದಾಗಿ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ಮುಖ್ಯ ಅಧಿಕಾರಿ ಸುಧಾಕರ್ ಅವರಿಗೆ ಮನವಿ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.
ನೂತನ ಪೈಪುಗಳ ಅಳವಡಿಕೆಯಿಂದಾಗಿ ಅಲ್ಲಲ್ಲಿ ಹಳೆಯ ಪೈಪುಗಳು ಒಡೆದು ನೀರಿಗೆ ಸಮಸ್ಯೆ ಉಂಟಾದರೆ ಕೆಲವು ಕಡೆಗಳಲ್ಲಿ ಮಣ್ಣು ಮಿಶ್ರಿತ ನೀರು ನಲ್ಲಿಗಳಲ್ಲಿ ಬಂದು ಸುಳ್ಯದ ಜನತೆ ಸಂಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಯೋಜನೆಯ ಅಂಗವಾಗಿ ಕುರುಂಜಿಬಾಗಿನಲ್ಲಿ ಬೃಹತ್ ನೀರಿನ ಟ್ಯಾಂಕಿ ನಿರ್ಮಾಣಗೊಳ್ಳುತ್ತಿದ್ದು ಇದೇ ರೀತಿಯ ಇನ್ನೂ ನಾಲ್ಕು ಟ್ಯಾಂಕುಗಳ ಸುಳ್ಯ ನಗರದ ಕಡೆಗಳಲ್ಲಿ ನಿರ್ಮಾಣ ಆಗಬೇಕಾಗಿದೆ.ಇದರ ಕೆಲಸವನ್ನು ಪೂರ್ತಿ ಮಾಡುವುದು ಬಿಟ್ಟು ತರಾತುರಿಯಾಗಿ ನಗರದಲ್ಲೆಡೆ ಪೈಪ್ ಅಳವಡಿಕೆಯ ಬೃಹತ್ ಗುಂಡಿಗಳ ಕಾಮಗಾರಿ ಮಾಡಿಕೊಂಡು ಜನರಿಗೆ ತೊಂದರೆ ನೀಡುತ್ತಿದ್ದಾರೆ. ಅಲ್ಲದೆ ಈ ಬಿರು ಬಿಸಿಲಿನ ಸಂದರ್ಭದಲ್ಲಿ ಜನರಿಗೆ ನೀರಿಗೆ ತೊಂದರೆ ಉಂಟಾಗುತ್ತಿದ್ದು,
ಆದ್ದರಿಂದ ಪ್ರಥಮವಾಗಿ ಟ್ಯಾಂಕ್ ನಿರ್ಮಾಣ ಕೆಲಸ ಮುಗಿಸಿದ ಬಳಿಕವಷ್ಟೇ ಜೂನ್ ತಿಂಗಳ ನಂತರ ಪೈಪುಗಳ ಜೋಡಣೆಯ ಕೆಲಸ ಕಾರ್ಯ ಮಾಡಬೇಕಾಗಿದೆ ಇದನ್ನು ಸಂಬಂಧಪಟ್ಟ ಗುತ್ತಿಗೆದಾರರಿಗೆ ಅಧಿಕಾರಿಗಳು ಮಾಹಿತಿ ನೀಡಬೇಕು.ಅಲ್ಲದೆ ಕೂಡಲೇ ಇದೀಗ ಮಾಡುತ್ತಿರುವ ಅಸಮರ್ಪಕ ಪೈಪುಗಳ ಅಳವಡಿಕೆಯ ಕಾಮಗಾರಿಯನ್ನು ನಿಲ್ಲಿಸಬೇಕು ಇಲ್ಲದಿದ್ದಲ್ಲಿ ಮಾರ್ಚ್ 11 ಬೆಳಿಗ್ಗೆ 10.30 ಕ್ಕೆ ಸಾರ್ವಜನಿಕರನ್ನು ಸೇರಿಸಿಕೊಂಡು ಪೈಪ್ ಅಳವಡಿಕೆಯ ಕಾಮಗಾರಿ ನಿಲ್ಲಿಸುವ ವರೆಗೆ ನಗರ ಪಂಚಾಯತ್ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹವನ್ನು ಮಾಡುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.