“ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು”
✍️ ಶಂಕರ್ ನೆಲ್ಯಾಡಿ
ಕಳೆದ ಕೆಲವು ವರ್ಷಗಳಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಕಂಡಾಗ ಈ ಗಾದೆ ಅಕ್ಷರಶಃ ಸತ್ಯ ಎಂದು ಸಾಬೀತಾಗುತ್ತಿದೆ. ಕೊರೊನಾದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬಿದ್ದ ಹೊಡೆತದಿಂದ ಕಷ್ಟ ಅನುಭವಿಸುತ್ತಿರುವವರು ವಿದ್ಯಾರ್ಥಿಗಳು ಎಂದರೂ ತಪ್ಪಲ್ಲ. ಅದರ ಪರಿಣಾಮ ಇವಾಗಲೂ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದಲ್ಲಿ ಕಂಡು ಬರುತ್ತಿದೆ. ಸಾಲದು ಎಂಬಂತೆ ಪರೀಕ್ಷೆಯಲ್ಲಿ ಆದ ಬದಲಾವಣೆಗಳು, ಕಳೆದ ಬಾರಿ ಶೈಕ್ಷಣಿಕ ಅವಧಿ ಮುಗಿಯುತ್ತಾ ಬಂದಿದ್ದರೂ ವಿದ್ಯಾರ್ಥಿಗಳ ಕೈ ಸೇರದ ಪಠ್ಯ ಪುಸ್ತಕಗಳು, ಪಠ್ಯ ಪುಸ್ತಕದಲ್ಲಿ ಆದ ರಾಜಕೀಯಗಳು, ಇವೆಲ್ಲವುಗಳು ವಿದ್ಯಾರ್ಥಿಗಳ ಕಲಿಕಾಸಕ್ತಿಯನ್ನೇ ಕುಂಠಿತಗೊಳಿಸಿವೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವು ಆ ಶಾಲೆಯ ಶಿಕ್ಷಣವು ಯಾವ ಮಟ್ಟದಲ್ಲಿ ಇದೆ ಎಂಬುದಕ್ಕೆ ಸಾಕ್ಷಿಯಾಗುತ್ತದೆ. ಹಾಗಾಗಿಯೇ ಲಕ್ಷ ಗಟ್ಟಲೆ ಡೊನೇಷನ್ ಅನ್ನು ಬಾಚಿಕೊಂಡು ಶಿಕ್ಷಣವನ್ನು ಬ್ಯುಸಿನೆಸ್ ಆಗಿ ನೋಡುವ ಕೆಲವು ಶಿಕ್ಷಣ ಸಂಸ್ಥೆಗಳು ಹೆತ್ತವರ ಹಾಗೂ ಪೋಷಕರನ್ನು ಖುಷಿ ಪಡಿಸುವ ನಿಟ್ಟಿನಲ್ಲಿ ಅಂಕಗಳನ್ನು ನೀಡುವ ಪದ್ಧತಿಯನ್ನು ರೂಢಿಸಿಕೊಂಡಿವೆ. ಸರ್ಕಾರವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 5,8 ಮತ್ತು 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುತ್ತಿರುವುದು ಸರಿಯಾದ ಕ್ರಮವೇ. ಇದರಿಂದ ಶಾಲೆಯ ಹಾಗೂ ಶಿಕ್ಷಕರ ಗುಣಮಟ್ಟವನ್ನು ಕೂಡಾ ಮೌಲ್ಯ ಮಾಪನ ಮಾಡಿದಂತಾಗುತ್ತದೆ. ಮಾತ್ರವಲ್ಲದೆ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಎದುರಿಸಲು ಮಾನಸಿಕವಾಗಿ ಸದೃಢರಾಗುತ್ತಾರೆ. ಪ್ರಸ್ತುತ ಪಬ್ಲಿಕ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕೋರ್ಟಿಗೆ ಹೋಗುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಕ್ರಮ ಎಷ್ಟು ಸರಿ? ಒಂದು ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸಲು ಶಿಕ್ಷಕರು ಬಹಳಷ್ಟು ಶ್ರಮವನ್ನು ಪಟ್ಟಿರುತ್ತಾರೆ . ಜೊತೆಗೆ ಶಿಕ್ಷಕರು ತಮ್ಮ ಸಾಮರ್ಥ್ಯವನ್ನು ವಿದ್ಯಾರ್ಥಿಗಳ ಮೂಲಕ ಪರೀಕ್ಷೆಗೆ ಒಳಪಡಿಸಿ ಫಲಿತಾಂಶಕ್ಕೆ ಕಾಯುತ್ತಿರುತ್ತಾರೆ. ಒಟ್ಟಿನಲ್ಲಿ ಈ ಪರೀಕ್ಷೆ ರದ್ದತಿಯ ಹಿಂದಿರುವ ಲಾಭ ಯಾರಿಗೋ ? ನಷ್ಟ ಯಾರಿಗೋ? ಬಲ್ಲವರೇ ತಿಳಿಸಬೇಕು.
✍️ ಶಂಕರ್ ನೆಲ್ಯಾಡಿ