ಸರ್ಕಾರದ ನಾಮನಿರ್ದೇಶನದಲ್ಲೂ ಸಂಪಾಜೆ ಕಾಂಗ್ರೆಸ್ ಕಾರ್ಯಕರ್ತರ ಕಡೆಗಣನೆಗೆ ಖಂಡನೆ
ಕಳೆದ ಮೂರು ವರ್ಷಗಳಿಂದ ಸಂಪಾಜೆ ವಲಯ ಕಾಂಗ್ರೆಸ್ಸಿನ ಆಂತರಿಕ ಸಮಸ್ಯೆಯನ್ನು ಇತ್ಯರ್ಥಪಡಿಸುವಲ್ಲಿ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಯಾವುದೇ ಮುತುವರ್ಜಿಯನ್ನು ವಹಿಸದೆ ಪ್ರಭಾವಿ ನಾಯಕರಾದ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆಯವರು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿಯಲು ಕಾರಣವಾಗಿದೆ. ಕಳೆದ 25 ವರ್ಷಗಳಿಂದ ಸಂಪಾಜೆಯಲ್ಲಿ ಸಮರ್ಥವಾಗಿ ಪಕ್ಷವನ್ನು ಮುನ್ನಡೆಸಿ ಯಾವುದೇ ಅಧಿಕಾರದ ಹಿಂದೆ ಹೋಗದೆ ನಿಸ್ವಾರ್ಥವಾಗಿ ಸೋಮಶೇಖರ್ ಕೊಯಿಂಗಾಜೆಯವರು ಪಕ್ಷಕ್ಕಾಗಿ ದುಡಿದಿದ್ದಾರೆ. ಅಂತಹ ನಾಯಕರಿಗೆ ನೋವಾಗಿರುವುದನ್ನು ಸರಿಪಡಿಸಿ ಮತ್ತೆ ಪಕ್ಷದಲ್ಲಿ ಸಕ್ರಿಯರಾಗುವಂತೆ ಮನವೊಲಿಸಲು ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ಸಿನ ಪ್ರಮುಖರು ಮುಂದಾಗಬೇಕೆಂದು ಮಾರ್ಚ್ 2೦ ರಂದು ಕಲ್ಲುಗುಂಡಿಯ ಸಮನ್ವಯ ಸಹಕಾರಿ ಸಭಾಭವನದಲ್ಲಿ ನಡೆದ ಸಂಪಾಜೆ ವಲಯ ಕಾಂಗ್ರೆಸ್ಸಿನ ಪ್ರಮುಖ ನಾಯಕರ ತುರ್ತು ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.
ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಹಲವು ಸಮಿತಿಗಳಿಗೆ ಸುಳ್ಯದಿಂದ ಹಲವರನ್ನು ನಾಮನಿರ್ದೇಶನ ಮಾಡಲಾಗಿದ್ದು ಅದರಲ್ಲಿ ಸಂಪಾಜೆಯ ಕಾಂಗ್ರೆಸ್ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಪ್ರತೀ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮುನ್ನಡೆಯನ್ನು ಕೊಡುವಂತಹ ಗ್ರಾಮ ಸಂಪಾಜೆ. ಆದರೆ ಕಾರ್ಯಕರ್ತರಿಗೆ ಅಧಿಕಾರವನ್ನು ನೀಡುವ ಸಂದರ್ಭದಲ್ಲಿ ಸಂಪಾಜೆಯ ಕಾಂಗ್ರೆಸ್ ನಾಯಕರ ಬಳಿ ಸೌಜನ್ಯಕ್ಕಾದರೂ ಅಭಿಪ್ರಾಯವನ್ನು ಕೇಳಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಈ ಸಭೆಯ ಮೂಲಕ ನೀಡಲಾಗಿದೆ.
ಈ ಎರಡು ವಿಚಾರಗಳ ಬಗ್ಗೆ ಗಮನಹರಿಸುವಂತೆ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಗೆ ನಿರ್ಣಯ ಮಾಡಿ ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದಕ್ಕೆ ಸೂಕ್ತ ಸ್ಪಂದನೆ ದೊರೆಯದೆ ಇದ್ದಲ್ಲಿ ಸಂಪಾಜೆಯ ಕಾಂಗ್ರೆಸ್ ನಿಯೋಗವು ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಸುಳ್ಯ ಕಾಂಗ್ರೆಸ್ಸಿನ ವಾಸ್ತವ ಸ್ಥಿತಿಯನ್ನು ಮನದಟ್ಟು ಮಾಡಲು ಮುಂದಾಗುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಯಿತೆಂದು ತಿಳಿದುಬಂದಿದೆ.
ಸಂಪಾಜೆ ವಲಯ ಕಾಂಗ್ರೆಸ್ ಉಪಾಧ್ಯಕ್ಷರಾದ ಎ.ಕೆ.ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞ ಗೂನಡ್ಕ, ಸಂಪಾಜೆ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಐ.ಲೂಕಾಸ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿ.ಎಸ್.ಯಮುನಾ, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಉಷಾ ರಾಮ ನಾಯ್ಕ್, ಎಚ್.ಎ.ಹಮೀದ್, ದ.ಕ.ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಜ್ಞಾನಶೀಲನ್ ನೆಲ್ಲಿಕುಮೇರಿ, ಕೆ.ಪಿ.ಸಿ.ಸಿ.ವಕ್ತಾರ ಶೌವಾದ್ ಗೂನಡ್ಕ, ಕಾರ್ಮಿಕ ಮುಖಂಡರಾದ ಕೆ.ಪಿ.ಜಾನಿ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಬೆಂಜಮಿನ್ ಡಿ’ಸೋಜಾ, ಎ.ಕೆ.ಹನೀಫ್, ತಾಜ್ ಮಹಮ್ಮದ್, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯದರ್ಶಿ ರುಡಾಲ್ಫ್ ಕ್ರಾಸ್ತಾ ಸೇರಿದಂತೆ ಮತ್ತಿತರರ ಪ್ರಮುಖರು ಉಪಸ್ಥಿತರಿದ್ದರು.