ಏ. 4ರ ತನಕ ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮ ಕಲಶ, ಹಸಿರುವಾಣಿ ಮೆರವಣಿಗೆ

0

ಬಳ್ಪ ಗ್ರಾಮದ ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮ ಕಲಶ ಮಹೋತ್ಸವ ಮಾ.‌ 30ರಿಂದ ಏ. 4ರ ತನಕ ನಡೆಯಲಿದ್ದು, ಮಾ. 30ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಬಳಿಕ ತಿಮ್ಮಪ್ಪ ಗೌಡ ಕಲ್ಲೇರಿ ರಾಜಾಂಗಣ ಚಪ್ಪರವನ್ನು ಉದ್ಘಾಟಿಸಿದರು. ಸಂಜೆ ಹಸಿರುವಾಣಿ ಮೆರವಣಿಗೆಯನ್ನು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯ ವಠಾರದಲ್ಲಿ ಜತ್ತಪ್ಪ ಗೌಡ ಸಂಪ್ಯಾಡಿ ಉದ್ಘಾಟಿಸಿದರು. ಉಗ್ರಾಣ ಮುಹೂರ್ತವನ್ನು ರಾಮಕೃಷ್ಣ ರೈ ಅಗಳ್ತ ನೆರವೇರಿಸಿದರು. ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಕಾರ್ಜ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.


ರಾತ್ರಿ ವಿವಿಧ ವೈದಿಕ ಕಾರ್ಯಗಳು ನಡೆಯಲಿದೆ. ಮಾ. 31ರಂದು ಪ್ರಾತಃಕಾಲದಿಂದ ಆರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಗಳು, ಅರ್ಧ ಏಕಹಾ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಏ. 1ರಂದು ವಿವಿಧ ವೈದಿಕ ಕಾರ್ಯಗಳು, ಸಂಜೆ 6.00ಗಂಟೆಯಿಂದ ಕುಣಿತ ಭಜನೆ, 7.00 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 9.00ರಿಂದ ವಿಠಲ ನಾಯಕ್ ಮತ್ತು ತಂಡದಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಲಿದೆ.

ಏ. 2ರಂದು ಬೆಳಿಗ್ಗೆಯಿಂದ ವಿವಿಧ ವೈದಿಕ ಕಾರ್ಯಗಳು, ಮಧ್ಯಾಹ್ನ ತ್ರಿಕಾಲ ಪೂಜೆ, ಸಂಜೆ ದೀಪಾರಾಧನೆ, ಕುಣಿತ ಭಜನೆ, ರಾತ್ರಿ 7.00 ಗಂಟೆಯಿಂದ ಸುಬ್ರಹ್ಮಣ್ಯ ಕುಮಾರ ಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ನಾಟಕ ಕುಹೂ ಕುಹೂ ಕೋಗಿಲೆ, ಕಲಾಮಂದಿರ್ ಬೆಳ್ಳಾರೆ ಇವರಿಂದ ನೃತ್ಯ ಸಂಭ್ರಮ ನಡೆಯಲಿದೆ. ಏ. 3ರಂದು ವಿವಿಧ ವೈದಿಕ ಕಾರ್ಯಗಳು, ಸಂಜೆ 6.00ರಿಂದ ಭಜನಾ ಸಂಕೀರ್ತನೆ, ಸಂಜೆ 7.00ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ಗಜೇಂದ್ರ ಮೋಕ್ಷ ನಡೆಯಲಿದೆ. ಏ. 4ರಂದು ಬೆಳಿಗ್ಗೆ ಮಹಾಗಣಪತಿ ಹೋಮ ಬಳಿಕ 9.40ರಿಂದ 10.30ರ ವರೆಗೆ ನಡೆಯುವ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಸದಾಶಿವ ದೇವರಿಗೆ ಅಷ್ಟಬಂಧ ಕ್ರಿಯೆ, ಕಲಶಾಭಿಷೇಕ ನಡೆಯಲಿದೆ. ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಪ್ರತೀದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.