ಅಡಿಕೆ ಎಲೆಚುಕ್ಕಿ ರೋಗ ಹಾಗೂ ಗ್ರಾಮದ ಮೂಲಭೂತ ಸೌಲಭ್ಯಗಳ ಕುರಿತು ವಿವರಿಸಿದ ಸ್ಥಳೀಯ ಮುಖಂಡರು
ಗ್ರಾಮಾಭಿವೃದ್ಧಿಗೆ ಪೂರಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ: ಕ್ಯಾ. ಚೌಟ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರು ಅರಂತೋಡು -ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಎ.17ರಂದು ಭಾಗವಹಿಸಿದರು.
ಈ ವೇಳೆ ಸ್ಥಳೀಯವಾಗಿ ಇರುವ ಅಡಿಕೆ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗ ಹಾಗೂ ಮೂಲಭೂತ ಸೌಲಭ್ಯಗಳ ಸಮಸ್ಯೆಗಳ ಕುರಿತಂತೆ ಸ್ಥಳೀಯರು ಅಭ್ಯರ್ಥಿ ಚೌಟ ಅವರಲ್ಲಿ ವಿವರಿಸಿದರು.
ಅರಂತೋಡು – ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರು ಸ್ಥಳೀಯವಾಗಿ ಕೃಷಿಕರ ತೋಟಗಳಿಗೆ ಬಾಧಿಸಿರುವ ಅಡಿಕೆ ಹಳದಿ ರೋಗದ ಕುರಿತು ಮಾತನಾಡಿದರು. ಎಲೆಚುಕ್ಕಿ ರೋಗದ ಕುರಿತಾಗಿ ರಮೇಶ್ ದೇಲಂಪಾಡಿ ಅವರು ಮಾತನಾಡಿದರು. ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ ಅವರು ಮೂಲಭೂತ ಸೌಕರ್ಯಗಳ ಕುರಿತು ಮಾತನಾಡಿದರು. ಅರಂತೋಡು -ತೊಡಿಕಾನ ಸಹಕಾರಿ ಸಂಘದ ನಿರ್ದೇಶಕ ವಿಜೇತ್ ಮರ್ವಳ ತೊಡಿಕಾನ ಗ್ರಾಮದ ಬಿ.ಎಸ್.ಎನ್.ಎಲ್. ನೆಟ್ ವರ್ಕ್ ಸಮಸ್ಯೆ ಕುರಿತು ವಿವರಿಸಿದರು. ಕೆ.ಕೆ. ನಾರಾಯಣ ಕುಂಟುಕಾಡು ಅವರು ಅರಣ್ಯ ಒತ್ತುವರಿ ಕುರಿತಂತೆ ಮಾತನಾಡಿದರು.
ಕ್ಯಾ. ಬ್ರಿಜೇಶ್ ಚೌಟರು ಮಾತನಾಡಿ
ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ದೇಶದ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ತಮಗೆ ಮತನೀಡುವಂತೆ ವಿನಂತಿಸಿದರಲ್ಲದೇ, ಮುಂದಿನ ದಿನಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ವಿನಯ ಕುಮಾರ್ ಮುಳುಗಾಡು, ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಭಾರಿ ಅಪ್ಪಯ್ಯ ಮಣಿಯಾಣಿ ಪುತ್ತೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾದವ ಗೌಡ, ತಾಲೂಕು ಅಧ್ಯಕ್ಷ ಸುಕುಮಾರ ಕೋಡ್ತುಗುಳಿ, ಬಿಜೆಪಿ ಆಲೆಟ್ಟಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಸುದರ್ಶನ ಪಾತಿಕಲ್ಲು, ಕಾರ್ಯದರ್ಶಿ ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯ ಶಿವಾನಂದ ಕುಕ್ಕುಂಬಳ ಸ್ವಾಗತಿಸಿ, ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು ವಂದಿಸಿದರು.