ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ

0


ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ.


ರೈತರ ಸಾಲ ಸಂಪೂರ್ಣ ಮನ್ನಾ : ಮಮತಾ ಗಟ್ಟಿ


ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ. ನೀಡಲಾಗುವುದು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀಮತಿ ಮಮತಾ ಗಟ್ಟಿ ಹೇಳಿದರು.


ಅವರು ಇಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ” ಕಾಂಗ್ರೆಸ್ ಪಕ್ಷವು ಕರ್ನಾಟಕದ ಮಾದರಿಯಲ್ಲಿ ರಾಷ್ಟ್ರದಲ್ಲೂ ಗ್ಯಾರಂಟಿಗಳನ್ನು ಘೋಷಿಸಿದೆ. ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ ಮತ್ತು ಪಾಲುದಾರಿಕೆ ನ್ಯಾಯಗಳನ್ನು ಘೋಷಿಸಿದ್ದು, ರೈತ ನ್ಯಾಯ ಕಾರ್ಯಕ್ರಮದಡಿಯಲ್ಲಿ ರೈತರ ಸಾಲ ಮನ್ನಾ ಮಾಡುವುದು. ಮಹಿಳಾ ನ್ಯಾಯದ ಅಡಿಯಲ್ಲಿ ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ ೧ ಲಕ್ಷ ರೂ. ನೀಡಲಾಗುವುದು. ಯುವ ನ್ಯಾಯದ ಅಡಿಯಲ್ಲಿ ೩೦ ಲಕ್ಷ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು. ಕಾಂಗ್ರೆಸ್‌ಗೆ ನುಡಿದಂತೆ ನಡೆಯುವ ಗುಣ ಇರುವುದರಿಂದ ನಾವು ಘೋಷಿಸಿದ ನ್ಯಾಯಗಳನ್ನು ಅಧಿಕಾರಕ್ಕೆ ಬಂದಾಗ ಜಾರಿ ಮಾಡುತ್ತೇವೆ. ಇದು ಜನರಿಗೂ ತಿಳಿದಿದೆ. ಆದ್ದರಿಂದ ಜನರ ಮತ್ತು ಈ ಬಾರಿ ಕಾಂಗ್ರೆಸ್‌ನತ್ತ ವಾಲಿ ಪದ್ಮರಾಜ ಪೂಜಾರಿಯವರು ಜಯಗಳಿಸುವುದು ಖಂಡಿತ” ಎಂದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರು ಮಾತನಾಡಿ, ” ಎ. ೧೯ರಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿಯವರು ಸುಳ್ಯ, ಕಲ್ಲುಗುಂಡಿ, ಗುತ್ತಿಗಾರು, ಸವಣೂರು ಮೊದಲಾದೆಡೆ ರೋಡ್‌ಶೋ ಹಾಗೂ ಕಾರ್ನರ್ ಸಭೆಗಳನ್ನು ಏರ್ಪಡಿಸುವರೆಂದು ಹೇಳಿದರು.
ಚುನಾವಣಾ ಪ್ರಚಾರ ಉಸ್ತುವಾರಿ ಜಯಪ್ರಕಾಶ್ ರೈ ಮಾತನಾಡಿ ” ಕಾಂಗ್ರೆಸ್ ಸರಕಾರದ ಗ್ಯಾರಂಟಿ ಕಾರ್ಯಕ್ರಮಗಳು ಪರಿಣಾಮ ಬೀರುತ್ತವೆ. ನಮ್ಮ ದ.ಕ. ಜಿಲ್ಲೆಯ ಮಹಿಳೆಯರು ಖಂಡಿತವಾಗಿ ಈ ಬಾರಿ ಕಾಂಗ್ರೆಸ್‌ಗೆ ಓಟು ಹಾಕುವ ಮೂಲಕ ಕೃತಜ್ಞತೆ ಸಮರ್ಪಿಸುತ್ತಾರೆ” ಎಂದರು.
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರು ಮಾತನಾಡಿ ” ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗೆ ರಾಜ್ಯದ ಪ್ರತಿ ಮನೆಯೂ ಫಲಾನುಭವಿಯಾಗಿದೆ. ಬಿಜೆಪಿಯ ನಾಯಕರ ಮತ್ತು ಕಾರ್ಯಕರ್ತರ ಮನೆಯ ಮಹಿಳೆಯರು ಕೂಡಾ ಮಾಸಿಕ ೨೦೦೦ ರೂ, ಅಕ್ಕಿಯ ಹಣ, ಉಚಿತ ವಿದ್ಯುತ್ ಬಿಲ್ ಯೋಜನೆಗಳನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಅವರು ಖಂಡಿತವಾಗಿ ಕಾಂಗ್ರೆಸ್‌ಗೆ ಮತ ಚಲಾಯಿಸುತ್ತಾರೆ. ವಿರೋಧಿಸುವ ನೈತಿಕತೆಯನ್ನು ಬಿಜೆಪಿಗರು ಕಳೆದುಕೊಂಡಿದ್ದಾರೆ. ಯಾರದಾದರೂ ಮನೆಗಳಿಗೆ ತಾಂತ್ರಿಕ ಕಾರಣಕ್ಕಾಗಿ ಗ್ಯಾರಂಟಿಗಳು ತಲುಪುತ್ತಿಲ್ಲವಾದರೆ ನಾವು ಅದರ ಬಗ್ಗೆ ಪರಿಶೀಲಿಸಿ, ಅಡೆತಡೆ ನಿವಾರಿಸಿ ಸೌಲಭ್ಯ ತಲುಪಿಸುತ್ತೇವೆ ಎಂದು ಹೇಳಿದರು.
ಪ್ರಚಾರ ಸಮಿತಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಅರೆಭಾಷೆ ಅಕಾಡೆಮಿ
ಅಧ್ಯಕ್ಷ ಸದಾನಂದ ಮಾವಜಿ, ಎಸ್.ಸಂಶುದ್ದೀನ್, ಕೆ.ಎಂ. ಮುಸ್ತಫ, ರಾಜ್ಯ ಮಹಿಳಾ ಕಾಂಗ್ರೆಸ್ ಸಂಯೋಜಕಿ ಶ್ರೀಮತಿ ಗೀತಾ ಮಂಗಳೂರು, ಪಿ.ಎಸ್. ಗಂಗಾಧರ್, ಪ್ರವೀಣ್ ಮುಂಡೋಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.