ಗ್ಯಾರಂಟಿ ಯೋಜನೆಗಳ ವಿರೋಧಿ ಬಿಜೆಪಿ ಸೋಲಿಸಿ, ಕಾಂಗ್ರೆಸ್ ‌ಬೆಂಬಲಿಸಿ

0

ಸುಳ್ಯದಲ್ಲಿ 60 ಸಾವಿರ ಲೀಡ್ ಬಿಜೆಪಿಗರ ಕನಸು : ಭರತ್ ಮುಂಡೋಡಿ

ಗ್ಯಾರಂಟಿಯನ್ನು ಬಿಟ್ಟಿಭಾಗ್ಯ ಎಂದು ಹೇಳುವ ಬಿಜೆಪಿಗರ ಮನೆಗೂ ಯೋಜನೆ ತಲುಪಿದೆ : ಪಿ.ಸಿ

ಗ್ಯಾರಂಟಿ ಯೋಜನೆಗಳ ವಿರೋಧಿಯಾದ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ದ.ಕ. ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿಯವರು ಸುಳ್ಯ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಬಿಜೆಪಿ ಪಡೆಯುತ್ತದೆ ಎನ್ನುವುದು ಬಿಜೆಪಿಗರ ಕನಸು ಎಂದು ವ್ಯಂಗ್ಯವಾಡಿದ್ದಾರೆ.

ಎ.22ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು
ಬಿಜೆಪಿ ನಾಯಕರು ಕಳೆದವಾರ ಪತ್ರಿಕಾಗೋಷ್ಠಿ ಮಾಡಿ ‘ಕಾಂಗ್ರೆಸ್ ನವರು ಪ್ರಚಾರ ನಡೆಸುವ ಸಂದರ್ಭ ಆಧಾ‌ರ್ ಕಾರ್ಡ್ ಕೇಳಿ, ಹಣ ಬರುವುದು ಎಂದು ಪ್ರಚಾರ ಮಾಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಗೆ ವಿರೋಧಿಯಾದುದು. ಈ ಬಗ್ಗೆ ಚುನಾವಣಾ ಆಯುಕ್ತಕ್ಕೆ ದೂರು ನೀಡುವುದಾಗಿ’ ಹೇಳಿದ್ದಾರೆ. ಬಹುಶಃ ಬಿಜೆಪಿ ನಾಯಕರಿಗೆ ಚುನಾವಣಾ ನೀತಿ ಸಂಹಿತೆಯ ಸಾಮಾನ್ಯ ಜ್ಞಾನ ಕೂಡ ಇಲ್ಲ ಎಂಬುವುದು ಇದರಿಂದ ಅರ್ಥವಾಗುತ್ತದೆ. ಸರಕಾರದ ಗ್ಯಾರೆಂಟಿ ಯೋಜನೆಗಳು ಈಗಾಗಲೇ ಅನುಷ್ಠಾನಗೊಂಡು ಎಲ್ಲಾ ಮನೆಯ ಮಹಿಳೆಯರ ಮನೆಗೆ ಮತ್ತು ಮನಕ್ಕೆ ಮುಟ್ಟಿದೆ. ಇದರಿಂದ ವಿಚಲಿತರಾದ ಬಿಜೆಪಿಗರು ಈ ಹೇಳಿಕೆ ನೀಡುತ್ತಿದ್ದಾರೆ. ಇದು ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆ ಹಾಗೂ ಇದರ ಸಮರ್ಪಕ ಅನುಷ್ಠಾನಕ್ಕೆ ಸರಕಾರ ರೂಪಿಸಿದ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷನಾಗಿ ನನ್ನನ್ನು ನೇಮಿಸಿದ್ದಾರೆ. ಹಾಗಾಗಿ ನಾನು ಜನರ ಬಳಿ ಮತ ಕೇಳಲು ಹೋದಾಗ ಗ್ಯಾರಂಟಿ ಯೋಜನೆಯ ಫಲ ನಿಮಗೆ ಸಿಕ್ಕಿದೆಯೇ ಎಂದು ಕೇಳಬೇಕಾದುದು ನನ್ನ ಕರ್ತವ್ಯ. ಆಗ ಸಹಜವಾಗಿಯೇ ಯೋಜನೆಯ ಫಲ ಸಿಕ್ಕದ ಮಹಿಳೆಯರು ಆಧಾ‌ರ್ ಕಾರ್ಡ್ ಹಾಗೂ ರೇಶನ್ ಕಾರ್ಡ್ ನೀಡಿ ನಮಗೆ ಈ ಯೋಜನೆ ಸಿಕ್ಕುವಂತೆ ಮಾಡಬೇಕು ಎಂದು ಕೇಳುತ್ತಾರೆ. ಇದು ನೀತಿ ಸಂಹಿತೆಯ ಉಲ್ಲಂಘನೆಯೇ? ಹಾಗಿದ್ದರೆ ಕೇಂದ್ರ ಸರಕಾರದಿಂದ ಕೃಷಿಕರಿಗೆ ಬರುವ ವಾರ್ಷಿಕ 6 ಸಾವಿರ ರೂ. ಬರುವುದನ್ನು ಜಿಲ್ಲಾ ಬಿಜೆಪಿ ಕಚೇರಿಯಿಂದ ಎರಡೆರಡು ಬಾರಿ ಫೋನಾಯಿಸಿ ಕೇಳಿ, ‘ಮೋದಿಗಾಗಿ ಓಟು ಕೊಡಿ ಎಂದು ಕೇಳಲಾಗುತ್ತಿದೆಯಲ್ಲಾ ಅದು ನೀತಿ ಸಂಹಿತೆ ಉಲ್ಲಂಘನೆಯಾಗುವು ದಿಲ್ಲವೇ? ಬಿಜೆಪಿಯವರು ಧಾರಾಳವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಬಹುದು. ಎದುರಿಸಲು ನಾವು ಸಿದ್ಧರಾಗಿದ್ದೇವೆ. ಇದರಿಂದ ನಿಮ್ಮ ಮನಸ್ಥಿತಿ ಅರ್ಥವಾಗುತ್ತದೆ. ನಿಮಗೆ ಬಂದ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ವರದಾನವಾಗಿರುವ ಯೋಜನೆಗಳನ್ನು ನಿಲ್ಲಿಸಬೇಕೆಂಬುದು ನಿಮ್ಮ ಬಯಕೆಯಾಗಿದೆ. ನಿಮ್ಮ ನಾಯಕಿಯೊಬ್ಬರು 2,000 ರೂ. ಭಿಕ್ಷೆ ನಮ್ಮ ಮಹಿಳೆಯರಿಗೆ ಅಗತ್ಯವಿಲ್ಲ ಎಂದು ಹೇಳಿರುವುದು, ನಿಮ್ಮ ರಾಜ್ಯಾಧ್ಯಕ್ಷರು ಚುನಾವಣೆಗಳ ನಂತರ ಈ ಯೋಜನೆ ನಿಲ್ಲುತ್ತದೆ ಎಂದು ಹೇಳಿಕೆ ನೀಡಿರುವುದು ಹಾಗೂ ನಿಮ್ಮ ಮೈತ್ರಿ ಪಕ್ಷದ ಅಧ್ಯಕ್ಷರು ಈ ಯೋಜನೆಯಿಂದ ಗ್ರಾಮೀಣ ಮಹಿಳೆಯರು ದಾರಿ ತಪ್ಪಿದ್ದಾರೆಂದು, ಗಂಡಸರು ಮದ್ಯದ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿರುವುದನ್ನು ಗಮನಿಸಿದ್ದೇನೆ. ಆದರೆ ಒಂದಂತೂ ಗ್ಯಾರಂಟಿ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಕಾಂಗ್ರೆಸ್ ಸರಕಾರ ಇರುವ ತನಕ ನಿಮ್ಮ ಯಾವ ಪ್ರಯತ್ನಗಳೂ ನಡೆಯುವುದಿಲ್ಲ. ಈ ಐದು ಗ್ಯಾರಂಟಿ ಯೋಜನೆಗಳೂ ಮುಂದುವರಿಯುವುದು ಶತಸಿದ್ದ. ಆದುದರಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಮಹಿಳಾ ಮತದಾರರಲ್ಲಿ ಹಾಗೂ ಮನೆಯ ಯಜಮಾನರಲ್ಲಿ ಮನವಿ ಮಾಡುತ್ತಿದ್ದೇನೆ ಈ ಯೋಜನೆಗಳ ವಿರೋಧಿ ಬಿಜೆಪಿಯನ್ನು ತಿರಸ್ಕರಿಸಿ ನಿಮ್ಮ ಬದುಕಿಗೆ ಆಧಾರವಾದ ಕಾಂಗ್ರೆಸ್ ಪಕ್ಷವನ್ನು ಬೆಂಬಲ ನೀಡಿ ಎಂದು ಭರತ್ ಮುಂಡೋಡಿ ಹೇಳಿದರು.

ನೇಹಾ ಹತ್ಯೆಯನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತಿದ್ದಾರೆ. ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ನಾವು ಆಗ್ರಹಿಸಿದ್ದೇವೆ ಎಂದು‌ ಹೇಳಿದರು.

ಈ ಬಾರಿ ಸುಳ್ಯದಲ್ಲಿ‌ ಬಿಜೆಪಿಗೆ 60 ಸಾವಿರ ಲೀಡ್ ಸಿಗುತ್ತದೆ ಎನ್ನುವುದು ಬಿಜೆಪಿ ನಾಯಕರ ಕನಸು. ಈ ಬಾರಿ ಬಿಜೆಪಿಗರ ಲೆಕ್ಕ ಉಲ್ಟಾ ಆಗೋದು ಪಕ್ಕ ಎಂದು ಭರತ್ ಮುಂಡೋಡಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು‌ ಮಾತನಾಡಿ, ಸರಕಾರದ ಗ್ಯಾರಂಟಿ ಯೋಜನೆಯನ್ನು ಬಿಜೆಪಿಗರು ಬಿಟ್ಟಿ ಭಾಗ್ಯ ಎಂದು‌ ಹೇಳುತ್ತಾರೆ. ಬಿಟ್ಟಿ ಭಾಗ್ಯ ಎಂದು ಹೇಳುವವರ ಮನೆಗೂ ಈ ಯೋಜನೆ ತಲುಪಿದೆ. ಅದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ ಸೌಲಭ್ಯ ಪಡೆದು ಆ ರೀತಿ ಹೇಳುವುದು ಸರಿಯಲ್ಲ. ಅದು ಸರಕಾರದ ಯೋಜನೆ ಎಂದು‌ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ‌ಮಾತನಾಡಿ, “ಶೇ.5ರಷ್ಟು‌ ಮನೆಗಳಿಗೆ ಮಾತ್ರ ತಾಂತ್ರಿಕ ಸಮಸ್ಯೆಯಿಂದ ಯೋಜನಡ ತಲುಪಿಲ್ಲ. ಈ ಕುರಿತು ಪೂರ್ಣ ‌ಲೆಕ್ಕ ಪಡೆಯಲಾಗುತಿದ್ದು, ಮುಂದಿನ ದಿನದಲ್ಲಿ ಎಲ್ಲ ಅರ್ಹರಿಗೂ ಯೋಜನೆ ಸಿಗಲಿದೆ” ಎಂದು ಹೇಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್‌ ಕುತ್ತಮೊಟ್ಟೆ, ಜಿಲ್ಲಾ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ, ವಕೀಲ ಚರಣ್ ಕಾಯರ, ತಮಿಳು ಮುಖಂಡ ಚಂದ್ರಲಿಂಗಂ ಐವರ್ನಾಡು ಇದ್ದರು.