ಹಿರಿಯ ಬಿಜೆಪಿ ಮುಖಂಡ ಹಾಗೂ ಹಿರಿಯ ಉದ್ಯಮಿ ದಿ. ಕೆ. ಉಪೇಂದ್ರ ಕಾಮತ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

ಸುಳ್ಯದ ಸಾಮಾಜಿಕ – ಧಾರ್ಮಿಕ ಹಾಗೂ ರಾಜಕೀಯ ಮುಖಂಡರುಗಳಿಂದ ನುಡಿನಮನ ಸಲ್ಲಿಕೆ

ಸುಳ್ಯದ ಹಿರಿಯ ಬಿಜೆಪಿ ಮುಖಂಡ, ಹಿರಿಯ ಉದ್ಯಮಿ ದಿ. ಕೆ. ಉಪೇಂದ್ರ ಕಾಮತ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಮೇ.8ರಂದು ಬೆಳಿಗ್ಗೆ ಜರುಗಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸೇವಾ ಪ್ರಮುಖರಾದ ನ. ಸೀತಾರಾಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುಳ್ಯ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಅವರು ಆಶಯಗೀತೆ ಹಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಚಾಲಕರಾದ ಚಂದ್ರಶೇಖರ ತಳೂರು ಅವರು ಮಾತನಾಡಿ ‘ಸುಳ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದಿ. ಕುರುಂಜಿ ವೆಂಕಟರಮಣ ಗೌಡರು ಸಲ್ಲಿಸಿದ ಸೇವೆ ಅನನ್ಯ. ಅದೇ ರೀತಿ ಉದ್ಯಮ ಕ್ಷೇತ್ರದಲ್ಲಿ ಉಪೇಂದ್ರ ಕಾಮತ್ ಅವರು ಸಲ್ಲಿಸಿದ ಕೊಡುಗೆ ಅಪಾರವಾಗಿದೆ. 1973ರಲ್ಲಿ ಕಾಸರಗೋಡಿನಿಂದ ಜಾಲ್ಸೂರಿನ ವಿನೋಬನಗರಕ್ಕೆ ಬಂದು ನೆಲೆಸಿ, ಗೇರುಬೀಜ ಉದ್ಯಮವನ್ನು ಸ್ಥಾಪಿಸುವುದರ ಮೂಲಕ ಈ ಭಾಗದ ಬಹಳಷ್ಟು ಮಂದಿಗೆ ತಮ್ಮ ಕಾರ್ಖಾನೆಯಲ್ಲಿ ಉದ್ಯೋಗ ಕೊಟ್ಟು ಈ ಭಾಗದ ಜನರಿಗೆ ಅನ್ನದಾತರಾದವರು. ಇದರ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತನಾಗಿ ಆ ಕಾಲದಲ್ಲಿ ಜನಸಂಘದಲ್ಲಿ ಕೆಲಸ ಮಾಡಿದ ಕೀರ್ತಿ ಉಪೇಂದ್ರ ಕಾಮತ್ ಅವರದ್ದಾಗಿದೆ ಎಂದರಲ್ಲದೇ , ಈಗಿನ ಗೇರುಬೀಜ ಫ್ಯಾಕ್ಟರಿಯ ಹಿಂದೆ ಅವರದ್ದು ಒಂದು ಸಣ್ಣ ಮನೆಯಿತ್ತು. ಅಲ್ಲಿ ಸಂಘದ ಬೈಠಕ್ ಆ ಕಾಲದಲ್ಲಿ ಜರುಗುತ್ತಿದ್ದ ಕ್ಷಣಗಳನ್ನು ನೆನಪಿಸಿಕೊಂಡರು. ಕೇರಳದ ಕಲ್ಲಿಕೋಟೆಯಲ್ಲಿ 1967ರಲ್ಲಿ ನಡೆದ ಅಖಿಲ ಭಾರತ ಜನಸಂಘದ ಸಮಾವೇಶದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ, ಸಮಾವೇಶ ಯಶಸ್ವಿಗೊಳಿಸಿದ ಕೀರ್ತಿ ಉಪೇಂದ್ರ ಕಾಮತ್ ಅವರದ್ದಾಗಿದೆ ಎಂದರು.

ಮಾಜಿ ವಿಧಾನಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಅವರು ಮಾತನಾಡಿ 1973ರಲ್ಲಿ ನನಗೆ ಉಪೇಂದ್ರ ಕಾಮತರ ಪರಿಚಯ ಆಯಿತು. ಅವರು ವಿನೋಬನಗರಕ್ಕೆ ಬಂದು ನೆಲೆಸಿ, ಗೇರುಬೀಜ ಕಾರ್ಖಾನೆಯನ್ನು ಪ್ರಾರಂಭಿಸಿ, ಈ ಭಾಗದ ಅದೆಷ್ಟೋ ಕುಟುಂಬಗಳಿಗೆ ಆಶ್ರಯದಾತರಾಗಿದ್ದರು. ಅವರು ಓರ್ವ ಉದ್ಯಮಿಯಾಗಿರದೇ, ಸಮಾಜದ ಜೊತೆಗೆ ತಾವೂ ಇರಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದವರು‌. ಜನಸಂಘದ ಕಾಲದಲ್ಲಿ ಸಂಘಕ್ಕೆ ಸಲ್ಲಿಸಿದ ಕೊಡುಗೆ ಅಪಾರವಾದದ್ದು. ಜಾಲ್ಸೂರಿನಲ್ಲಿ ಬಿಜೆಪಿ ಮಂಡಲ ಪಂಚಾಯತಿ ಪ್ರಧಾನರಾಗಿ ಆ ಕಾಲಘಟ್ಟದಲ್ಲಿ ಸಲ್ಲಿಸಿದ ಕೊಡುಗೆಯನ್ನು ಸ್ಮರಿಸಿಕೊಂಡರು.

ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ ಉಪೇಂದ್ರ ಕಾಮತ್ ಅವರು ಸಜ್ಜನ ವ್ಯಕ್ತಿ. ಜನಸಂಘದ ಕಾಲದಿಂದಲೂ ಸಮಾಜಕ್ಕೆ ಅವರು ಸಲ್ಲಿಸಿದ ಕೊಡುಗೆ ಅನನ್ಯ. ನಮ್ಮನ್ನೂ ಅವರ ಮನೆಯವರಂತೆ ಕಾಣುತ್ತಿದ್ದ ವ್ಯಕ್ತಿತ್ವ ಅವರದ್ದು. ಅವರ ಆದರ್ಶ ಗುಣಗಳೇ ನಮಗೆ ದಾರಿದೀಪ. ಅವರು ಸಮಾಜದಲ್ಲಿ ಸಲ್ಲಿಸಿದ ಸಾಧನೆಯೇ ನಮಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.

ಮಾಜಿ ಸಚಿವ ಎಸ್. ಅಂಗಾರ ಅವರು ಮಾತನಾಡಿ ಉಪೇಂದ್ರ ಕಾಮತ್ ಅವರು ಸಮಾಜ ಮತ್ತು ಸಂಘಟನೆಗೆ ಸಲ್ಲಿಸಿದ ಸಾಧನೆಗಳು ಇನ್ನೂ ಜೀವಂತವಾಗಿದೆ. ಜಾಲ್ಸೂರಿನಲ್ಲಿ ಉಪೇಂದ್ರ ಕಾಮತ್ ಅವರ ನೇತೃತ್ವದಲ್ಲಿ ಹಾಗೂ ಅಜ್ಜಾವರದಲ್ಲಿ ಎ.ಎಸ್. ವಿಜಯಕುಮಾರ್ ಅವರ ನೇತೃತ್ವದ ಎರಡು ಮಂಡಲ ಪಂಚಾಯತಿಗಳು ಮಾತ್ರ ಬಿಜೆಪಿ ಪಾಲಿನದ್ದಾಗಿತ್ತು‌. ಆ ಕಾಲಘಟ್ಟದಲ್ಲಿ ಸಂಘಟನೆಗೆ ಬಲತುಂಬಿದವರು ಉಪೇಂದ್ರ ಕಾಮತರು. ಸಜ್ಜನ ವ್ಯಕ್ತಿತ್ವದ ಕಾಮತರು ಸಮಾಜದ ಎಲ್ಲಾ ವರ್ಗದ ಜನರಿಗೆ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.

ಸುಳ್ಯ ವಾಣಿಜ್ಯ ಮತ್ತು ವರ್ತಕರ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ ಅವರು ಮಾತನಾಡಿ ಸುಳ್ಯವನ್ನು ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಬ್ಯಾಲೆನ್ಸ್ ಮಾಡಿದವರು ದಿ. ಕುರುಂಜಿ ವೆಂಕಟರಮಣ ಗೌಡರು ಮತ್ತು ಉಪೇಂದ್ರ ಕಾಮತ್ ಅವರು. ಉಪೇಂದ್ರ ಕಾಮತರು ವಿನೋಬನಗರದಲ್ಲಿ ಗೇರುಬೀಜ ಉದ್ಯಮ ಸ್ಥಾಪಿಸಿ, ತಾನೂ ಬೆಳೆದು ಸುಳ್ಯವನ್ನೂ ಬೆಳೆಸಿದವರು ಎಂದು ಹೇಳಿದರು.

ಸಾಮಾಜಿಕ ಧುರೀಣ ಎಂ.ಬಿ. ಸದಾಶಿವ ಅವರು ಮಾತನಾಡಿ ಕಾಸರಗೋಡಿನಿಂದ ಸುಳ್ಯಕ್ಕೆ ಬಂದು ನೆಲೆಸಿ, ಗೇರುಬೀಜ ಉದ್ಯಮ ಪ್ರಾರಂಭಿಸಿ, ಈ ಭಾಗದ ಸಾವಿರಾರು ಕುಟುಂಬಗಳಿಗೆ ಅನ್ನಧಾತರಾಗಿದ್ದ ಉಪೇಂದ್ರ ಕಾಮತ್ ಅವರದ್ದು ಶ್ರೀಮಂತಿಕೆಯನ್ನು ತೋರ್ಪಡಿಸದ ವ್ಯಕ್ತಿತ್ವ. ಜನಸಂಘದ ಕಾಲಘಟ್ಟದಲ್ಲಿ ಭಾರತೀಯ ಜನಸಂಘವನ್ನು ಪುನಶ್ಚೇತನಗೊಳಿಸಿದ ಕೀರ್ತಿ ಉಪೇಂದ್ರ ಕಾಮತ್ ಅವರಿಗೆ ಸಲ್ಲುತ್ತದೆ. ಅವರ ಗೇರುಬೀಜ ಕಾರ್ಖಾನೆಯ ಪ್ರಾರಂಭದಿಂದಾಗಿ ಸುಳ್ಯದಲ್ಲಿ ಕೆನರಾ ಬ್ಯಾಂಕ್ ಸ್ಥಾಪನೆಗೆ ಕಾರಣಕರ್ತರಾದರು‌. ತನ್ನ ಕಾರ್ಖಾನೆಯ ನೌಕರರೊಂದಿಗೆ ಅತ್ಯಂತ ಪ್ರೀತಿಯಲ್ಲಿದ್ದುಕೊಂಡು, ತಾನೂ ಬೆಳೆದು ನೌಕರರನ್ನೂ ಬೆಳೆಸಿದವರು ಉಪೇಂದ್ರ ಕಾಮತ್ ಅವರದ್ದು ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ ಅವರು ಮಾತನಾಡಿ ಸುಮಾರು ಐನೂರಕ್ಕೂ ಹೆಚ್ಚು ಕುಟುಂಬಗಳಿಗೆ ಗೇರುಬೀಜ ಉದ್ಯಮ ಪ್ರಾರಂಭಿಸಿ, ಉದ್ಯೋಗ ಕಲ್ಪಿಸಿದ ಮೃದು ಹೃದಯಿ ವ್ಯಕ್ತಿತ್ವ ಉಪೇಂದ್ರ ಕಾಮತ್ ಅವರದ್ದಾಗಿದ್ದು, ತಮ್ಮ ಕಾರ್ಖಾನೆಗೆ ಬಂದ ಎಲ್ಲರನ್ನೂ ತಾರತಮ್ಯವಿಲ್ಲದೇ, ಸಮಾನ ರೀತಿಯಲ್ಲಿ ಕಾಣುತ್ತಿದ್ದ ವ್ಯಕ್ತಿತ್ವ ಕಾಮತ್ ಅವರದ್ದಾಗಿದ್ದು, ಸುಳ್ಯದಲ್ಲಿ ಶ್ರೇಯಸ್ ಕಾಂಪ್ಲೆಕ್ಸ್ ಸ್ಥಾಪಿಸಿ, ಕೊಡುಗೈದಾನಿಯಾಗಿದ್ದರು‌ .

ಸುಳ್ಯ ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ ಮಾತನಾಡಿ ಗೇರುಬೀಜ ಉದ್ಯಮ ಸ್ಥಾಪಿಸಿ, ನೂರಾರು ಕುಟುಂಬಕ್ಕೆ ಆಶ್ರಯದಾತರಾಗಿದ್ದ ಉಪೇಂದ್ರ ಕಾಮತ್ ಅವರು ಹಿಂದೂ ಸಮಾಜಕ್ಕೆ ಸ್ಪೂರ್ತಿಯಾಗಿದ್ದವರು. ವಿಶ್ವ ಹಿಂದೂ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಿಗೂ ನಮಗೆ ಸದಾ ಬೆನ್ನೆಲುಬಾಗಿದ್ದವರು ಉಪೇಂದ್ರ ಕಾಮತ್ ಅವರು ಎಂದು ಹೇಳಿದರು.
ಪಿ.ಕೆ. ಉಮೇಶ್ ಅವರು ಮಾತನಾಡಿ ಉಪೇಂದ್ರ ಕಾಮತ್ ಅವರು ಫ್ಯಾಕ್ಟರಿ ಕಾಮತರೆಂದೇ ಪರಿಚಯವಾಗಿದ್ದ ವ್ಯಕ್ತಿ. ಸಂಘ ಹಾಗೂ ಸಮಾಜಕ್ಕೆ ಅವರು ಸಲ್ಲಿಸಿದ ಕೊಡುಗೆ ಅಪಾರವಾದುದಾಗಿದೆ ಎಂದು ಹೇಳಿದರು.

ಜಿ.ಜಿ. ನಾಯಕ್ ಅವರು ಮಾತನಾಡಿ 1981ರಿಂದ ನನಗೂ ಉಪೇಂದ್ರ ಕಾಮತ್ ಅವರಿಗೂ ನಂಟು. ಅವರು ಗೇರುಬೀಜ ಕಾರ್ಖಾನೆ ಸ್ಥಾಪಿಸಿ, ಸಮಾಜಕ್ಕೆ ಸಲ್ಲಿಸಿದ ಕೊಡುಗೆಯನ್ನು ರಾಮಾಯಣ ಕಥೆಯ ಮೂಲಕ ವರ್ಣಿಸಿದರು.
ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರು ಮಾತನಾಡಿ ಸುಳ್ಯದ ಉದ್ಯಮ ಕ್ಷೇತ್ರದಲ್ಲಿ ಉಪೇಂದ್ರ ಕಾಮತ್ ಅವರು ಸಲ್ಲಿಸಿದ ಸಾಧನೆಯನ್ನು ಸ್ಮರಿಸಿಕೊಂಡರು.
ರಾಷ್ಟ್ರಸೇವಿಕ ಸಂಘದ ಶ್ರೀಮತಿ ಶಕುಂತಳ ಅವರು ಮಾತನಾಡಿ ಉಪೇಂದ್ರ ಕಾಮತ್ ಅವರ ಸಾಧನೆಯನ್ನು ಮೆಲುಕುಹಾಕಿದರು.

ಎನ್.ಎ. ಜ್ಞಾನೇಶ್ ಅವರು ಮಾತನಾಡಿ ಉಪೇಂದ್ರ ಕಾಮತ್ ಅವರು ಸಮಾಜಕ್ಕೆ ಸಲ್ಲಿಸಿದ ಕೊಡುಗೆಯನ್ನು ಸ್ಮರಿಸಿಕೊಂಡರು. ಉದ್ಯಮಿ ಕೃಷ್ಣ ಕಾಮತ್ ಅರಂಬೂರು ಅವರು ಮಾತನಾಡಿ ಕಾಸರಗೋಡಿನಿಂದ ಉಪೇಂದ್ರ ಕಾಮತ್ ಅವರು ವಿನೋಬನಗರಕ್ಕೆ ಬಂದು ಗೇರುಬೀಜ ಉದ್ಯಮ ಪ್ರಾರಂಭಿಸಿ, ಯಶಸ್ಸು ಕಾಣುವ ಮೂಲಕ ಸಾವಿರಾರು ಕುಟುಂಬಗಳಿಗೆ ಉದ್ಯೋಗದಾತರಾಗಿದ್ದರು‌ ಎಂದು ಹೇಳಿದರು.


ಸಭೆಯಲ್ಲಿ ಹಿರಿಯ ಬಿಜೆಪಿ ಮುಖಂಡ ರಾಮಯ್ಯ ಭಟ್ ಪಂಜ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ಜಯರಾಮ ರೈ ಜಾಲ್ಸೂರು, ಸೋಮನಾಥ ಪೂಜಾರಿ ಸುಳ್ಯ, ಸುಬೋದ್ ಶೆಟ್ಟಿ ಮೇನಾಲ, ಮನೋಜ್ ಅಡ್ಡಂತಡ್ಕ,
ಎ.ವಿ. ತೀರ್ಥರಾಮ, ಚಂದ್ರಾ ಕೋಲ್ಚಾರು, ಗಣೇಶ್ ಆಳ್ವ , ದಿನೇಶ್ ಅಡ್ಕಾರು, ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಶ್ರೀಮತಿ ಪುಷ್ಪಾ ಮೇದಪ್ಪ ಉಳುವಾರು, ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು, ಲಕ್ಷ್ಮೀನಾರಾಯಣ ಕಜೆಗದ್ದೆ ಸೇರಿದಂತೆ ಉಪೇಂದ್ರ ಕಾಮತ್ ಅವರ ಅಭಿಮಾನಿಗಳು, ಬಿಜೆಪಿ ಮುಖಂಡರುಗಳು ಉಪಸ್ಥಿತರಿದ್ದು, ಉಪೇಂದ್ರ ಕಾಮತ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಎ.ಟಿ. ಕುಸುಮಾಧರ ಹಾಗೂ ಸುದರ್ಶನ ಪಾತಿಕಲ್ಲು ಕಾರ್ಯಕ್ರಮ ನಿರೂಪಿಸಿದರು.