ಸುಳ್ಯ ಕುಡಿಯುವ ನೀರಿನ ಯೋಜನೆ ಅಮೃತ್ 2.0 ಯೋಜನೆಯ ಕಳಪೆ ಕಾಮಗಾರಿ ಮತ್ತು ಕಾಮಗಾರಿಯಿಂದ ಸಾರ್ವಜನಿಕರಿಗೆ ಬೇರೆ ಬೇರೆ ರೀತಿಯ ಸಂಕಷ್ಟ ಅನುಭವಿಸುತ್ತಿರುವುದಾಗಿ ಮೇ 7ರಂದು ಸುಳ್ಯದಲ್ಲಿ ನಡೆದ ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಈ ರೀತಿಯಾಗಿ ಉಲ್ಲೇಖಿಸಲಾಗಿದೆ.’ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಸುಮಾರು 58 ಕೋಟಿ ರೂಪಾಯಿಯ ವೆಚ್ಛದಲ್ಲಿ ಅಮೃತ್ ಯೋಜನೆಯು ಸರಕಾರದಿಂದ ಮಂಜೂರುಗೊಂಡು ಕಾಮಗಾರಿಯು ಪ್ರಗತಿಯಲ್ಲಿದೆ.ಪ್ರಸ್ತುತ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವದ ಸಮಸ್ಯೆಯು ತುಂಬಾ ಕಾಡುತ್ತಿದೆ. ಈ ಸಂದರ್ಭದಲ್ಲಿ ಕುಡಿಯುವ ನೀರಿಗೆ ಹೊಸ ಪೈಪ್ ಲೈನ್ ಕಾಮಗಾರಿ ಸುಳ್ಯ ನಗರ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದ ಮೇಲ್ಪಟ್ಟು ನಡೆಯುತ್ತಿದೆ.ಇದರಿಂದಾಗಿ ಸುಳ್ಯ ನಗರದ ಜನತೆಗೆ ಕುಡಿಯುವ ನೀರಿನ ಅಭಾವ ಸಮಸ್ಯೆಯು ತಲೆದೋರಿದೆ. ಈ ಬಗ್ಗೆ ನಗರ ಪಂಚಾಯತ್‌ನ ಮುಂಭಾಗದಲ್ಲಿ ಕಾಮಗಾರಿ ಸದ್ಯದ ಮಟ್ಟಿಗೆ ಸ್ಥಗಿತ ಗೊಳಿಸಬೇಕೆಂದು ಸಾರ್ವಜನಿಕರಿಂದ ಹಲವು ಬಾರಿ ಪ್ರತಿಭಟನೆಗಳು ಮತ್ತು ಧರಣಿಗಳು ನಡೆದು ಅಧಿಕಾರಿಗಳಿಗೆ ಮನವಿ ನೀಡಿದರು. ಯಾವುದೇ ಕ್ರಮ ಕಂಡುಬಂದಿರುವುದಿಲ್ಲ.
ಅಲ್ಲದೆ ಈ ಪೈಪ್ ಲೈನ್ ಕಾಮಗಾರಿ ವಹಿಸಿಕೊಂಡಿರುವ ಟೆಂಡರುದಾರರು ನಗರದಲ್ಲಿ ಅವೈಜ್ಞಾನಿಕವಾಗಿ ಕಳಪೆ ಕಾಮಗಾರಿ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಸಿಗದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ, ಮತ್ತು ಸಾರ್ವಜನಿಕರ ಸಂಚರಿಸುವ ರಸ್ತೆಗಳು ಸಂಪೂರ್ಣವಾಗಿ ಹದೆಗೆಟ್ಟಿದ್ದು ಇದರಿಂದಾಗಿ ಸಾರ್ವಜನಿಕರು ಸಂಕಷ್ಟ ಎದುರಿಸುವ ಅನಿವಾರ್ಯ ಉಂಟಾಗಿದೆ .
ಆದುದರಿಂದ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಇಲಾಖೆಯ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಂಡು ಸಾರ್ವಜನಿಕರಿಗೆ ಕುಡಿಯುವ ನೀರು ಸಮರ್ಪಕವಾಗಿ ನಿರಂತರವಾಗಿ ಸಿಗುವ ಹಾಗೆ ಮತ್ತು ಜನಸಾಮಾನ್ಯರು ಸಂಚರಿಸುವ ರಸ್ತೆಗಳು ಸರಿಪಡಿಸಿಕೊಡಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ, ಎಂದು ಸಂಬಂಧಪಟ್ಟ ದಾಖಲೆ ಗಳೊಂದಿಗೆ ದೂರು ನೀಡಿದ್ದಾರೆ.