ವಿಧಾನ ಪರಿಷತ್ ಚುನಾವಣೆ: ನೈರುತ್ಯ ಕ್ಷೇತ್ರದಿಂದ ಕಾಂಗ್ರೆಸ್ ಗೆಲುವು ಖಚಿತ

0

ವಿಧಾನ ಪರಿಷತ್‌ಗೆ ನೈರುತ್ಯ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ.ಕೆ.ಕೆ.ಮಂಜುನಾಥ್ ಕುಮಾರ್ ಅವರು ಸುಳ್ಯದ ವಿವಿಧ ಕಡೆಗಳಲ್ಲಿ ಭರದಿಂದ ಚುನಾವಣೆ ಪ್ರಚಾರ ನಡೆಸಿದ್ದು ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಚುನಾವಣಾ ಪ್ರಚಾರದ ಬಳಿಕ ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅಭ್ಯರ್ಥಿಗಳು, ರಾಜ್ಯದಲ್ಲಿ 2006 ರ ನಂತರ ಸರಕಾರಿ ಸೇವೆಗೆ ಸೇರಿದ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಸರಕಾರಿ ನೌಕರರು ಎಸ್.ಪಿ.ಎಸ್ ಅಡಿ ನೇಮಕವಾಗಿದ್ದು, ನಿವೃತ್ತಿ ವೇತನದಿಂದ ವಂಚಿತರಾಗಿರುವ ಅನುದಾನಿತ ಶಿಕ್ಷಣ ಸಂಸ್ಥೆ ಹಾಗೂ ಅರೆ ಸರಕಾರಿ, ಸ್ವಾಯತ್ತ ಸಂಸ್ಥೆಗಳ ನೌಕರರಿಗೂ ಓ.ಪಿ.ಎಸ್ ಜಾರಿ ಮಾಡಬೇಕು. ನಾವು ಗೆದ್ದರೆ ಎನ್.ಪಿ.ಎಸ್ ರದ್ದು ಮಾಡಿ ಓ.ಪಿ.ಎಸ್ ಜಾರಿ ಮಾಡಲು ಬದ್ಧವಾಗಿರುವುದಾಗಿ ಹೇಳಿದರು.

” 42 ವರ್ಷಗಳಿಂದ ನೈರುತ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿಲ್ಲ. ಆದರೆ ಈ ಬಾರಿ ಮತದಾರರು ಬದಲಾವಣೆ ಬಯಸಿದ ವಾತಾವರಣ ಕಂಡುಬರುತ್ತಿದೆ. ಶಿಕ್ಷಕರ, ಪದವೀಧರರ ಸಮಸ್ಯೆಗಳಿಗೆ ಬಿಜೆಪಿ ಸರಕಾರದಿಂದ ಪರಿಹಾರ ಸಿಕ್ಕಿಲ್ಲ. ಕಾಂಗ್ರೆಸ್ ಸರಕಾರ ಈಗ ಆಡಳಿತ ನಡೆಸುತ್ತಿರುವುದರಿಂದ ನಮ್ಮ ಗೆಲುವು ಈ ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗುತ್ತದೆ ” ಎಂದು ಹೇಳಿದ ಆಯನೂರು ಮಂಜುನಾಥ್ ರವರು, ವಿದ್ಯಾರ್ಥಿಗಳು ಪಡೆದ ಶೈಕ್ಷಣಿಕ ಸಾಲ ಅಥವಾ ಬಡ್ಡಿ ಮನ್ನಾ, ಅತಿಥಿ ಉಪನ್ಯಾಸಕ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ, ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ಶಿಕ್ಷಕರ ಮತ್ತು ನೌಕರರ ಸಮಸ್ಯೆಗಳಿಗೆ ಪರಿಹಾರ, ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಶ್ರಮಿಸುವುದಾಗಿ ಹೇಳಿದರು.

ಡಾ.ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ಶಿಕ್ಷಕರ ಕ್ಷೇತ್ರದಿಂದ ಗೆದ್ದು ವಿಧಾನಪರಿಷತ್ ಸದಸ್ಯರಾದವರು ಶಿಕ್ಷಕ ಸಮಾಜಕ್ಕೆ ದ್ರೋಹ ಮಾಡಿದ್ದಾರೆ. ಹಾಡು ಹೇಳುತ್ತ, ಪ್ರಹಸನ ಮಾಡುತ್ತಾ, ಏಕಪಾತ್ರಾಭಿನಯ ಮಾಡುತ್ತಾ 6 ವರ್ಷ ಕಳೆದ ವಿಧಾನಸಭಾ ಪರಿಷತ್ ಸದಸ್ಯರು ಅಧಿಕಾರ ಮದದಲ್ಲಿ ಶಿಕ್ಷಕರ ಫೋನ್ ಕರೆ ಕೂಡಾ ಸ್ವೀಕರಿಸುತ್ತಿರಲಿಲ್ಲ ಇದೀಗ ಸೋಲಿನ ಭೀತಿಯಲ್ಲಿ ಹತಾಶರಾಗಿ ನಮ್ಮ ವಿರುದ್ಧವಾಗಿಯೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದರಲ್ಲದೆ, ಹಳೆ ಪಿಂಚಣಿ ಯೋಜನೆಯನ್ನು ತಾನು ಮುಖ್ಯಮಂತ್ರಿಯಾಗಿರುವಾಗ ನಿರ್ದಯತೆಯಿಂದ ರದ್ದು ಮಾಡಿದ ಕುಮಾರಸ್ವಾಮಿ ಯವರಿಗೆ ಮತ್ತು ಅವರ ಪಕ್ಷವನ್ನು ಪ್ರತಿನಿಧಿಸುವವರಿಗೆ ಶಿಕ್ಷಕರ ವಿಚಾರವಾಗಿ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಂ, ಚುನಾವಣಾ ಉಸ್ತುವಾರಿ ಪ್ರದೀಪ್ ಕುಮಾರ್ ರೈ ಪಾಂಬಾರು, ಕಾಂಗ್ರೆಸ್ ನಾಯಕರಾದ ಭರತ್ ಮುಂಡೋಡಿ, ಧನಂಜಯ ಅಡ್ಪಂಗಾಯ, ಕೆ. ಎಂ. ಮುಸ್ತಾಫ, ಎಂ.ವೆಂಕಪ್ಪ ಗೌಡ, ಪಿ.ಎಸ್.ಗಂಗಾಧರ್, ಶರೀಫ್ ಕಂಠಿ, ಮೂಸಾ ಕುಂಞಿ ಪೈಂಬಚ್ಚಾಲ್ ಮೊದಲಾದವರು ಪತ್ರಿಕಾಗೋಷ್ಢಿಯಲ್ಲಿದ್ದರು.