ಕಸಾಪ ವತಿಯಿಂದ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

0

ಕನ್ನಡ ಮಾಧ್ಯಮದಲ್ಲಿ ಶೇ. 100 ಅಂಕ ಪಡೆಯುವುದು ಅಸಾಮಾನ್ಯ ಸಾಧನೆ; ಡಾ.ಕೆ.ವಿ.ಚಿದಾನಂದ

ಕನ್ನಡ ಶಿಕ್ಷಕರು ಭಾಷಾ ಕೌಶಲ್ಯಹೊಂದಿರಬೇಕು ; ಅರವಿಂದ ಚೊಕ್ಕಾಡಿ

ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಶೇ.100 ಅಂಕ ಪಡೆಯುವುದು ಹೆಮ್ಮೆಯ ವಿಚಾರ. ಕನ್ನಡ ಭಾಷೆ ಬೆಳೆಯಲು ಎಲ್ಲರ ಪ್ರೋತ್ಸಾಹ, ಪ್ರಯತ್ನ ಸದಾ ಇರವೇಕು.ಕನ್ನಡ ಬೆಳವಣಿಗೆಗಾಗಿ ಕನ್ನಡ ಸಾಹಿತ್ಯ ಪರಿಷತ್ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುತಿದೆ ಎಂದು ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹೇಳಿದ್ದಾರೆ. ಅವರು ಇಂದು ಸುಳ್ಯ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ವತಿಯಿಂದ 2023- 2024ನೇ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಕನ್ನಡ ವಿಷಯದಲ್ಲಿ ಶೇ.100 ಅಂಕ ಗಳಿಸಿದ ಸುಳ್ಯ ತಾಲೂಕಿನ ವಿದ್ಯಾರ್ಥಿಗಳಿಗೆ ಗೌರವಾರ್ಪನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.


ಅಭಿನಂದನಾ ಭಾಷಣ ಮಾಡಿದ ಸಾಹಿತಿ,ಶಿಕ್ಷಕ ಅರವಿಂದ ಚೊಕ್ಕಾಡಿ ಮಾತನಾಡಿ ‘ನೂರು ಶೇಖಡ ಅಂಕ ಪಡೆಯುವುದು ವಿದ್ಯಾರ್ಥಿಗಳ ದೊಡ್ಡ ಸಾಧನೆ. ಕನ್ನಡ ಭಾಷೆಯನ್ನು ಬೆಳೆಸುವುದಕ್ಕೆ ಈ ರೀತಿಯ ಕಾರ್ಯಕ್ರಮ ಸಹಕಾರಿ. ಕನ್ನಡ ಬೆಳೆಯಬೇಕಾದರೆ ಕನ್ನಡ ಭಾಷೆಯ ಬಳಕೆ ಹೆಚ್ಚಬೇಕು. ಮಡಿವಂತಿಕೆಯನ್ನು ಬಿಟ್ಟು ಭಾಷೆ ಬಳಸಬೇಕು ಎಂದ ಅವರು ಕನ್ನಡ ಭಾ಼ಷೆಯ ಬೋಧಕರು ಭಾಷಾ ಕೌಶಲ್ಯ ಹೊಂದಿರಬೇಕು .ಭಾಷಾ ಕೌಶಲ್ಯ ಇಲ್ಲದಿದ್ದಲ್ಲಿ ಕನ್ನಡ ಮಾಧ್ಯಮ ಅಥವಾ ಇಂಗ್ಲಿಷ್ ಮಾಧ್ಯಮದ ಕಲಿಕೆಗೆ ವ್ಯತ್ಯಾಸವಿರುವುದಿಲ್ಲ.ಮಾತೃ ಭಾಷೆಯ ಮೂಲಕ ಪ್ರತಿಭೆಗಳ ಅನಾವರಣವಾಗಬೇಕು ಎಂದು ಹೇಳಿದರು.
ಸುಳ್ಯ ಲಯನ್ಸ್‌ ಕ್ಲಬ್‌ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಕಾರ್ಯಕ್ರಮ ಉದ್ಘಾಟಿಸಿ ಕಸಾಪ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿದರು.ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಹೃದಯದ ಭಾಷೆ.ಅದನ್ನು ಬೆಳೆಸುವ ಕೆಲಸವನ್ನು ಇಂತಹ ಕಾರ್ಯಕ್ರಮಗಳ ಮೂಲಕ ಮಾಡುತ್ತಿದ್ದೇವೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ,ಜಿಲ್ಲಾ ಕಸಾಪ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ,ಸುಳ್ಯ ಕಸಾಪ ಗೌರವ ಕಾರ್ಯದರ್ಶಿಗಳಾದ ಚಂದ್ರಮತಿ ಕೆ, ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ ವೇದಿಕೆಯಲ್ಲಿ
ಉಪಸ್ಥಿತರಿದ್ದರು.


ಗಾಯಕ ಕೆ.ಆರ್.ಗೋಪಾಲಕೃಷ್ಣ ಆಶಯಗೀತೆ ಹಾಡಿದರು. ತೇಜಸ್ವಿ ಕಡಪಳ ಸ್ವಾಗತಿಸಿ, ಶ್ರೀಮತಿ ಚಂದ್ರಮತಿ ಕೆ.ಗೌರವಾರ್ಪಣೆ ಸ್ವೀಕರಿಸಿದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಸಾಪ ನಿರ್ದೇಶಕ ಸಂಕೀರ್ಣ ಚೊಕ್ಕಾಡಿ ವಂದಿಸಿದರು.ಕಸಾಪ ನಿರ್ದೇಶಕಿ ಲತಾಶ್ರೀ ಸುಪ್ರಿತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.


45 ಮಂದಿಗೆ ಗೌರವಾರ್ಪಣೆ


ತಾಲೂಕಿನ ವಿವಿಧ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಕನ್ನಡ ಪರೀಕ್ಷೆಯಲ್ಲಿ ಶೇ.100 ಅಂಕ ಪಡೆದ 45 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು ತಾಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನಿಯಾದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿಶೇಷ ಮುತುವರ್ಜಿ ವಹಿಸಿದ ಕನ್ನಡ ಮಾಧ್ಯಮ ಶಿಕ್ಷಕರನ್ನು ಹಾಗೂ ಮುಖ್ಯ ಶಿಕ್ಷರನ್ನು ಗೌರವಿಸಲಾಯಿತು. ಸರಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕರಾದ ಪ್ರಕಾಶ್ ಮೂಡಿತ್ತಾಯ, ಮರ್ಕಂಜ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಮಾತನಾಡಿದರು. ಇಬ್ಬರು ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತ ಪಡಿಸಿದರು.