ಸುಳ್ಯ ಸಾರ್ವಜನಿಕ ಆಸ್ಪತ್ರೆ: ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿ ಸಮಿತಿ ಸಭೆ

0

ವೈದ್ಯರ ನೇಮಕ ಕುರಿತು ಸಮಾಲೋಚನೆ

ಸುಳ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿ ಸಮಿತಿ ಸಭೆ ಸುಳ್ಯ ಆಸ್ಪತ್ರೆಯ ವೈದ್ಯಾಧಿಕಾರಿ ಕಛೇರಿಯಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷ ಹಾಗೂ ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ನೇತೃತ್ವದಲ್ಲಿ ಸಭೆ ನಡೆಯಿತು. ಈಗಾಗಲೇ ಸರಕಾದಿಂದ ಸ್ಥಳೀಯಾಡಳಿತದ ಪ್ರವಾಸಿ ತಾಣಗಳಲ್ಲಿ ಹಾಗೂ ಆರೋಗ್ಯ ಇಲಾಖೆಯಲ್ಲಿ ಸರಕಾರದ ಮಾರ್ಗದರ್ಶನದಲ್ಲಿ ಅನುಷ್ಠಾನ ಮಾಡಬಹುದಾದ ಪರಿಸರ ಸ್ನೇಹಿ ಯೋಜನೆಯನ್ನು ಅನುಷ್ಠಾನ ಮಾಡಲು ಆದ್ಯತೆ ನೀಡುವಂತೆ ಎಸಿ ಜುಬಿನ್ ಮೊಹಪಾತ್ರ ಅವರು ಪ್ರಸ್ತಾಪಿಸಿದರು. ಈ ಬಗ್ಗೆ ಚರ್ಚೆ ನಡೆದು, ವಿದ್ಯುತ್ ವೆಚ್ಚ ಕಡಿಮೆ ಮಾಡುವುದು ಸೇರಿದಂತೆ ಯಾವ ರೀತಿಯಲ್ಲಿ ಪರಿಸರ ಸ್ನೇಹಿ ಯೋಜನೆ ಅನುಷ್ಠಾನ ಮಾಡಬಹುದು ಎಂಬ ಬಗ್ಗೆ ಮಾಹಿತಿ ಪಡೆಯಲಾಯಿತು.
ಆಸ್ಪತ್ರೆಗೆ ಕಂಪ್ಯೂಟರ್ ಗಳ ಅಗತ್ಯ ಇರಲಿದ್ದು, ಹೆಚ್ಚುವರಿ ಕಂಪ್ಯೂಟರ್ ಖರೀದಿಸಿ ಎಂದು ಎಸಿ ಸಲಹೆ ನೀಡಿದರು. ಕಂಪ್ಯೂಟರ್ ಖರೀದಿಗೆ ಅನುದಾನದ ಬಗ್ಗೆ ಚರ್ಚೆ ನಡೆದು ಆಸ್ಪತ್ರೆಯ ಯಾವುದಾದರೊಂದು ಉಳಿಕೆ ಅಥವಾ ಹೆಚ್ಚುವರಿ ಅನುದಾನದಲ್ಲಿ ಕಂಪ್ಯೂಟರ್ ಖರೀದಿ ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆದು ನಿರ್ಧಾರ ಕೈಗೊಳ್ಳಲಾಯಿತು.

ವೈದ್ಯರ ನೇಮಕದ ಬಗ್ಗೆ ಚರ್ಚೆ:
ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಬಗ್ಗೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಮಾಹಿತಿ ನೀಡಿದರು. ಎರಡು ವೈದ್ಯರ ಹುದ್ದೆಗಳು ಖಾಲಿ ಇದ್ದು ಅದರ ಭರ್ತಿ ಆಗಬೇಕಿದೆ ಎಂದರು. ಈ ಬಗ್ಗೆ ಚರ್ಚೆ ನಡೆದು ಖಾಲಿ ವೈದ್ಯರ ಹುದ್ದೆ ಭರ್ತಿಗೆ ಪೂರಕ ಕ್ರಮಕೈಗೊಳ್ಳುವ ಬಗ್ಗೆ ನಿರ್ಧರಿಸಲಾಯಿತು. ಸುಬ್ರಹ್ಮಣ್ಯ ಪ್ರಾಥಮಿಕ ಆಸ್ಪತ್ರೆ ಹಾಗೂ ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆ ಭರ್ತಿ ಮಾಡುವ ಬಗ್ಗೆ ಚರ್ಚಿಸಲಾಯಿತು.
ತಿಂಗಳಿಗೆ 100ಕ್ಕೂ ಅಧಿಕ ಹೆರಿಗೆ ಆದಲ್ಲಿ ಹೆಚ್ಚಿನ ಸೌಲಭ್ಯಗಳು ಲಭ್ಯವಾಗಲಿದೆ, ಈ ನಿಟ್ಟಿನಲ್ಲಿ ಯೋಜನೆ ರೂಪಿಸಿ ಸೌಲಭ್ಯ ತರಿಸೋಣ ಎಂದು ಎಸಿ ಸಲಹೆ ನೀಡಿದರು.

ಶೋಕಸ್ ನೋಟಿಸ್ ನೀಡಲು ಸೂಚನೆ:
ಎಸಿ ನೇತೃತ್ವದಲ್ಲಿ ನಡೆದ ಕಾರ್ಯಕಾರಿ ಸಮಿತಿಗೆ ಹಾಜರಾಗದ ಮೆಸ್ಕಾಂ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಎಸಿ ಸೂಚಿಸಿದರು. ಸಮಿತಿ ಸಭೆ ಸರಕಾರದ ನಿರ್ದೇಶನದಂತೆ ನಡೆಯಲಿದ್ದು, ಆಸ್ಪತ್ರೆಯಲ್ಲಿ ನಡೆಯುವ ಕಾರ್ಯಚಟುಟಿಕೆಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸಬೇಕು ಎಂದರು.
ಸುಳ್ಯ ತಹಶಿಲ್ದಾರ್ ಮಂಜುನಾಥ್, ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್, ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪರಮೇಶ್ವರ್, ನ.ಪಂ. ಆರೋಗ್ಯ ನಿರೀಕ್ಷಕ ರಾಮಚಂದ್ರ, ತಾ.ಪಂ. ವ್ಯವಸ್ಥಾಪಕ ಹರೀಶ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.