ಮಂಡೆಕೋಲು : ವೃದ್ಧ ತಾಯಿಯನ್ನು ಮಗ ಮತ್ತು ಸೊಸೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪ

0

ಮತ್ತೆ ತಹಶೀಲ್ದಾರ್ ಕಚೇರಿಗೆ ಬಂದು ಕುಳಿತ ವೃದ್ಧ ತಾಯಿ

ಸಂಜೆ ಎ.ಸಿ. ಆಗಮನ : ರಾತ್ರಿವರೆಗೆ ಮಾತುಕತೆ – ವಾರದಲ್ಲಿ ಸೂಕ್ತ ಆದೇಶ ಮಾಡುವುದಾಗಿ ಎ.ಸಿ. ಭರವಸೆ

ಮಗ ಮತ್ತು ಸೊಸೆ ಸರಿಯಾಗಿ ನೋಡು ಕೊಳ್ಳು ತ್ತಿಲ್ಲಾ ಎಂಬ ಆರೋಪದಿಂದ ಮೂರು ವಾರಗಳ ಮೊದಲು ಅಧಿಕಾರಿಗಳು ಮಗನ ಮನೆಗೆ ಸೇರಿಸಿದ್ದ ವೃದ್ದ ಮಹಿಳೆ ಇಂದು ಮತ್ತೆ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಬಂದು ಕುಳಿತು ಸಂಜೆ ಎಸಿ ಆಗಮಿಸಿ ಸುದೀರ್ಘ ಮಾತುಕತೆ ನಡೆದ ಬಳಿಕ ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥದ ಭರವಸೆ ದೊರೆತುದರಿಂದ ವೃದ್ಧ ತಾಯಿ ಮನೆಗೆ ಹಿಂತಿರುಗಿದ ಘಟನೆ ನಡೆದಿದೆ.


ಮಂಡೆಕೋಲು ಗ್ರಾಮದ ಕಲ್ಲಡ್ಕ – ಪೆರಾಜೆಯ ಶೇಷಮ್ಮ ಎಂಬವರು ತಹಶೀಲ್ದಾರ್ ರಿಗೆ ಮಗ ನನ್ನನ್ನು ನೋಡಿಕೊಳ್ಳುತ್ತಿಲ್ಲ ಎಂದು ಕಳೆದ ಮೂರು ವಾರಗಳ ಮೊದಲು ದೂರು ನೀಡಿದ್ದರು.ಅಲ್ಲದೆ ಸಾಮಾಜಿಕ ಕಾರ್ಯಕರ್ತೆ ಸರಸ್ವತಿ ಕಾಮತ್ ಅವರು ಕೂಡಾ ಈ ಸಮಸ್ಯೆಯ ಕುರಿತು ತಹಶೀಲ್ದಾರ್ ಗಮನಕ್ಕೆ ತಂದಿದ್ದರು.


ದೂರು ಸ್ವೀಕರಿಸಿದ ತಹಶೀಲ್ದಾರ್ ಜಿ. ಮಂಜುನಾಥ್, ಅಧಿಕಾರಿಗಳು, ಹಾಗೂ ಶೇಷಮ್ಮರ ಮೂವರು ಪುತ್ರಿಯರಿದ್ದು ತಾಲೂಕು ಕಚೇರಿಯಲ್ಲಿ ಸಮಾಲೋಚನೆ ನಡೆಸಿ ಶೇಷಮ್ಮರನ್ನು ಕರೆದುಕೊಂಡು ತಹಶೀಲ್ದಾರ್ ನೇತೃತ್ವದ ತಂಡ ಮಂಡೆಕೋಲು ಕಲ್ಲಡ್ಕ ಪೆರಾಜೆಯ ಅವರ ಮನೆಗೆ ತೆರಳಿ ಅಲ್ಲಿ ಬಿಟ್ಟು ಬಂದಿದ್ದರು.
ಅಲ್ಲಿ ಶೇಷಮ್ಮರ ಮಗ, ಸೊಸೆ ಇದ್ದು ಸುದೀರ್ಘ ಸಮಾಲೋಚನೆ ನಡೆಸಿ ಸಮಸ್ಯೆಗೆ ಒಂದು ಹಂತವನ್ನು ತಂದು ಈ ಮೂವರು ಸಹೋದರಿಯರಿಗೂ ತಿಳುವಳಿಕೆಯ ಮಾತುಗಳನ್ನಾಡಿ ಅವರ ಆರೈಕೆ ಮಾಡಲು ಮದುವೆಯಾಗಿರುವ ಮೂವರು ಹೆಣ್ಣು ಮಕ್ಕಳು ಮನೆಯಲ್ಲೇ ಒಬ್ಬರಂತೆ ಇದ್ದು ನೋಡಿಕೊಳ್ಳುವುದಾಗಿ ತಹಶೀಲ್ದಾರ್ ಎದುರು ಹೇಳಿ ಆ ಮೂಲಕ ಕೌಟುಂಬಿಕ ವಿವಾದವೊಂದನ್ನು ಸಮಾಲೋಚನೆ ನಡೆಸಿ ಇತ್ಯರ್ಥ ಪಡಿಸುವಲ್ಲಿ ತಹಶೀಲ್ದಾರ್ ನೇತೃತ್ವದ ತಂಡ ಯಶಸ್ವಿಯಾಗಿತ್ತು.

ಜೂ. ೨೦ರಂದು ಬೆಳಿಗ್ಗೆ ಮತ್ತೆ ಶೇಷಮ್ಮ ಹಾಗೂ ಮೂವರು ಪುತ್ರಿಯರು ಸುಳ್ಯ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಬಂದು ಕುಳಿತಿದ್ದು ಈ ಸಂದರ್ಭ ಮೊದಲು ಪಂಚಾಯಿತಿಗೆಯಲ್ಲಿ ನಿಂತಿದ್ದ ಸಾಮಾಜಿಕ ಕಾರ್ಯಕರ್ತೆ ಸರಸ್ವತಿ ಕಾಮತ್ ರವರು ಅವರಿಗೆ ಸಾತ್ ನೀಡಿದ್ದಾರೆ.

ಘಟನೆ ತಿಳಿದು ಸ್ಥಳಕ್ಕೆ ತೆರಳಿದ್ದ ಸುದ್ದಿ ವರದಿಗಾರರೊಂದಿಗೆ ಮಾತನಾಡಿರುವ ಶೇಷಮ್ಮ ಅಧಿಕಾರಿಗಳು ನನ್ನನ್ನು ಮಗನ ಮನೆಯಲ್ಲಿ ಬಿಟ್ಟು ಬಂದ ಬಳಿಕ ಮಾರನೆಯ ದಿನದಿಂದಲೇ ನನಗೆ ಅನಾವಶ್ಯಕ ತೊಂದರೆಯನ್ನು ನೀಡುತ್ತಿದ್ದಾರೆ. ಅಲ್ಲದೆ ನನ್ನನ್ನು ಸರಿಯಾಗಿ ಆರೈಕೆ ಮಾಡುತ್ತಿಲ್ಲ. ನನ್ನ ಮಗಳು ನನ್ನೊಂದಿಗೆ ಇದ್ದರೂ ಆಕೆ ಅವರ ಮಕ್ಕಳನ್ನು ಶಾಲೆಗೆ ಮುಂತಾದ ಕಡೆಗೆ ಕರೆದುಕೊಂಡು ಹೋಗುವ ಸನ್ನಿವೇಶಗಳು ಇರುತ್ತವೆ. ಈ ಸಂದರ್ಭದಲ್ಲಿ ನನ್ನ ಮಗ ಮತ್ತು ಸೊಸೆ ನನ್ನನ್ನು ಮನೆಯ ಒಳಗಡೆ ಬಿಟ್ಟು ಹೊರಭಾಗದಿಂದ ಬೀಗ ಹಾಕಿ ಹೋಗುತ್ತಿದ್ದಾರೆ. ಅಲ್ಲದೆ ಸಮಯಕ್ಕೆ ಸರಿಯಾಗಿ ಊಟವನ್ನು ಕೂಡ ಕೊಡುತ್ತಿಲ್ಲ. ನನ್ನೊಂದಿಗೆ ಇರುವ ಮಗಳಿಗೆ ಅಡುಗೆ ಕೋಣೆಗೆ ಹೋಗಿ ನನಗೆ ಬೇಕಾದ ಪದಾರ್ಥಗಳನ್ನು ಮಾಡಲು ಬಿಡುತ್ತಿಲ್ಲ. ಆ ಸಂದರ್ಭದಲ್ಲಿ ಗ್ಯಾಸ್ ಆಫ್ ಮಾಡುವುದು, ಬಿಸಿ ನೀರಿನ ಗೀಜರ್ ಆಫ್ ಮಾಡುವುದು ಮುಂತಾದ ರೀತಿಯ ತೊಂದರೆಯನ್ನು ಕೊಡುತ್ತಿದ್ದಾರೆ. ಇದನ್ನೆಲ್ಲಾ ನೋಡಿ ಬೇಸತ್ತು ಮತ್ತೆ ನಾನು ನನಗೆ ನ್ಯಾಯ ಸಿಗಬೇಕೆಂದು ಮೂವರು ಹೆಣ್ಣು ಮಕ್ಕಳೊಂದಿಗೆ ತಹಶೀಲ್ದಾರ್ ಕಚೇರಿಗೆ ಬಂದು ಕುಳಿತಿದ್ದೇನೆ.
ಆದರೆ ಇದೀಗ ಎಸಿಯವರ ನೇತೃತ್ವದಲ್ಲಿ ಮಾತುಕತೆ ಮಾಡಬೇಕೆಂದು ಅವರು ಸೂಚಿಸಿದ ಹಿನ್ನೆಲೆಯಲ್ಲಿ ಎಸಿ ಅವರ ಗಮನಕ್ಕೂ ನಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದೇವೆ. ಆದ್ದರಿಂದ ಸುಳ್ಯಕ್ಕೆ ಎಸಿ ಅವರು ಬರುತ್ತಿದ್ದು ಅವರು ಬಂದು ನಮಗೆ ನ್ಯಾಯ ಕೊಡಿಸುವವರಿಗೆ ಇಲ್ಲಿಂದ ಕದಲುವುದಿಲ್ಲ ಎಂದು ಹೇಳಿದ್ದಾರೆ.


ಈ ಸಂದರ್ಭದಲ್ಲಿ ಶೇಷಮ್ಮ ರವರ ಮೂವರು ಪುತ್ರಿಯರು ಮತ್ತು ಓರ್ವ ಅಳಿಯ ಅವರೊಂದಿಗೆ ಕುಳಿತಿದ್ದರು.
ಈ ಬಗ್ಗೆ ಸ್ಥಳದಲ್ಲಿದ್ದ ಸರಸ್ವತಿ ಕಾಮತ್ ರವರು ಮಾತನಾಡಿ ಅಧಿಕಾರಿಗಳು ಉತ್ತಮ ರೀತಿಯ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ಶೇಷಮ್ಮ ರವರ ಪುತ್ರ ಮತ್ತು ಮನೆಯವರು ಮತ್ತೆ ಅವರಿಗೆ ಹಿಂಸೆಯನ್ನು ನೀಡುತ್ತಿದ್ದು, ಅದರ ಎಲ್ಲಾ ಸಾಕ್ಷ್ಯಗಳು ನನ್ನಲ್ಲಿ ಇವೆ. ಈ ವೃದ್ಧ ತಾಯಿಗೆ ಆಗುತ್ತಿರುವ ಅನ್ಯಾಯವನ್ನು ನೋಡಿ ಸುಮ್ಮನಿರಲು ನನ್ನಿಂದ ಸಾಧ್ಯವಾಗದೆ ಮತ್ತೆ ನಾನು ಅವರ ಪರವಾಗಿ ಅವರಿಗೆ ನ್ಯಾಯ ಕೊಡಿಸಲು ಬಂದಿದ್ದೇನೆ ಎಂದು ಹೇಳಿದರು.
ಬೆಳಿಗ್ಗೆ ೯ ಗಂಟೆಯಿಂದಲೇ ಪ್ರತಿಭಟನೆ ನಡೆಯಿತು. ಸುಳ್ಯ ತಹಶೀಲ್ದಾರ್ ಕಚೇರಿಯಲ್ಲಿ ಇಲ್ಲದ ಕಾರಣ ಅವರು ಮತ್ತು ಸುಳ್ಯಕ್ಕೆ ಬರಲಿರುವ ಎಸಿಯವರನ್ನು ಕಾದು ಪ್ರತಿಭಟನಾಕಾರರು ಸಂಜೆಯವರೆಗೆ ಕಾದು ಕುಳಿತಿದ್ದರು.


ಕೊನೆಗೆ ಸಂಜೆ ೫ ಗಂಟೆಯ ವೇಳೆಗೆ ತಹಶೀಲ್ದಾರ್ ಮತ್ತು ಪುತ್ತೂರು ಎ ಸಿ ರವರು ಸ್ಥಳಕ್ಕೆ ಬಂದಿದ್ದು ಕೂಡಲೇ ಎ ಸಿ ಅವರು ವೃದ್ದ ಮಹಿಳೆ ಮಲಗಿದ್ದ ಸ್ಥಳದಲ್ಲಿ ಪಕ್ಕದಲ್ಲಿ ಕುಳಿತು ಮೊದಲು ಅವರ ಆರೋಗ್ಯವನ್ನು ವಿಚಾರಿಸಿದರು. ಬಳಿಕ ಸ್ಥಳದಲ್ಲಿದ್ದ ತಹಶೀಲ್ದಾರರ ಬಳಿ ಇವರ ಆರೋಗ್ಯದ ಬಗ್ಗೆ ಗಮನಕೊಡಲು ವೈದ್ಯಧಿಕಾರಿಗಳಿಗೆ ಸೂಚಿಸುವಂತೆ ಸೂಚನೆಯನ್ನು ನೀಡಿ ಬಳಿಕ ಅವರ ಸಮಸ್ಯೆಯ ಬಗ್ಗೆ ವಿಚಾರಿಸಿದರು.


ಈ ಸಂದರ್ಭ ಶೇಷಮ್ಮ ರವರು ನನಗೆ ಮಗನ ಮನೆಯಲ್ಲಿ ತೊಂದರೆಯನ್ನು ಕೊಡುತ್ತಿದ್ದಾರೆ. ಸರಿಯಾದ ಸಮಯಕ್ಕೆ ಊಟವನ್ನು ಕೊಡುತ್ತಿಲ್ಲ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ನನಗೆ ಬೇಕಾದ ಬಿಸಿ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದಿಲ್ಲ. ಅಲ್ಲದೆ ನನ್ನ ಜೊತೆ ಇರುವ ಮಗಳನ್ನು ಕೂಡ ಅಡುಗೆ ಕೋಣೆಗೆ ಹೋಗಲು ಬಿಡುವುದಿಲ್ಲ. ನನಗೆ ಬೇಕಾದ ಮಾತ್ರೆ ಮುದ್ದುಗಳನ್ನು ತಂದು ಕೊಡುತ್ತಿಲ್ಲ ಎಂದು ಹೇಳಿ ತಮ್ಮ ನೋವನ್ನು ತಿಳಿಸಿದರು.


ಈ ಸಂದರ್ಭ ಅವರ ಜೊತೆಯಿದ್ದ ಮೂವರು ಪುತ್ರಿಯರು ಮತ್ತು ಸಾಮಾಜಿಕ ಹೋರಾಟಗಾರರಾದ ಸರಸ್ವತಿ ಕಾಮತ್‌ರವರು ಕೂಡ ಇದಕ್ಕೆ ಧ್ವನಿಗೂಡಿಸಿದರು.
ಈ ವೇಳೆ ಅಲ್ಲೇ ನಿಂತಿದ್ದ ಶೇಷಮ್ಮರವರ ಪುತ್ರ ತಾಯಿ ಮತ್ತು ಸಹೋದರಿಯರ ಆರೋಪವನ್ನು ತಳ್ಳಿ ಹಾಕಿ ಇದೆಲ್ಲ ತಪ್ಪು ಮಾಹಿತಿಯಾಗಿದೆ. ಬೇಕಾದರೆ ನನ್ನಲ್ಲಿ ಸಿಸಿಟಿವಿ ಫೂಟೇಜ್ ಇದೆ. ಅದರಲ್ಲಿ ತಾವು ವೀಕ್ಷಿಸಿ. ನಾನು ಯಾವುದೇ ರೀತಿಯ ತೊಂದರೆಯನ್ನು ತಾಯಿಗೆ ಕೊಡಲಿಲ್ಲ. ಕೇವಲ ಆಸ್ತಿ ವಿಷಯಕ್ಕೋಸ್ಕರ ಈ ರೀತಿ ನನ್ನ ಮೇಲೆ ಆರೋಪವನ್ನು ಹೊರಿಸುತ್ತಿದ್ದಾರೆ. ಅಲ್ಲದೆ ನನ್ನ ಸಹೋದರಿಯರು ತಾಯಿಯನ್ನು ನೋಡಿಕೊಳ್ಳಲು ತಿಂಗಳಿಗೆ ೨೦ ಸಾವಿರ ರೂಪಾಯಿಯನ್ನು ಕೇಳಿದ್ದಾರೆ. ಅದಕ್ಕೆ ನಾನು ಒಪ್ಪಲಿಲ್ಲ ಎಂದು ಈ ರೀತಿಯ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಎಸಿ ಅವರು ಸ್ಥಳದಲ್ಲಿದ್ದ ತಹಶೀಲ್ದಾರ್ ಮತ್ತು ಸಿ ಡಿ ಪಿ ಓ ಅಧಿಕಾರಿಗೆ ಈ ಘಟನೆಯ ಬಗ್ಗೆ ಸಂಪೂರ್ಣವಾಗಿ ಅವರ ಮನೆಗೆ ತೆರಳಿ ಮಾಹಿತಿ ಕಲೆ ಹಾಕುವಂತೆ ಮತ್ತು ಇದರ ಬಗ್ಗೆ ಪೂರ್ಣವಾದ ವರದಿಯನ್ನು ಅವರಿಗೆ ಕೊಡುವಂತೆ ಸೂಚನೆ ನೀಡಿದರು.


ಬಳಿಕ ಸುದೀರ್ಘ ಚರ್ಚೆ ನಡೆದು ಎಸಿ ಮತ್ತು ತಹಶೀಲ್ದಾರ್‌ರವರು ಕಚೇರಿಗೆ ತೆರಳಿದರು.
ಆದರೆ ಅಧಿಕಾರಿಯವರು ಸರಿಯಾದ ನ್ಯಾಯ ನಮಗೆ ಕೊಡಲಿಲ್ಲ ಎಂದು ಪ್ರತಿಭಟನೆ ನಡೆಸುತ್ತಿದ್ದ ಮನೆಯವರು ಅಲ್ಲಿಂದ ಹೋಗದೆ ಪ್ರತಿಭಟನೆಯನ್ನು ಮುಂದುವರಿಸಿ ಅಲ್ಲೇ ಕುಳಿತರು. ಇದು ರಾತ್ರಿಯ ಸುಮಾರು ಎಂಟು ಗಂಟೆ ತನಕ ಮುಂದುವರೆದು ಬಳಿಕ ಅಧಿಕಾರಿಯವರು ಸರಸ್ವತಿ ಕಾಮತ್ ಮತ್ತು ಮನೆಯವರನ್ನು ಕಚೇರಿಯೊಳಗೆ ಕರೆಸಿ ಮತ್ತೆ ಸುಧೀರ್ಘ ಮಾತುಕತೆ ನಡೆಸಿ ಒಂದು ವಾರದೊಳಗೆ ಸಮಸ್ಯೆಗೆ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ ಬಳಿಕ ಮನೆಯವರು ಪ್ರತಿಭಟನೆಯನ್ನು ಪಡೆದು ಸ್ಥಳದಿಂದ ತೆರಳಿದರು.