ಭ್ರಷ್ಟಾಚಾರ ನಿರ್ಮೂಲನಕ್ಕಾಗಿ ಎಲ್ಲಾ ಕಾರ್ಯಕರ್ತರು ಹೋರಾಟ ನಡೆಸಬೇಕಾಗಿದೆ : ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪಕ್ಷದ 16 ನೇ ಸಂಸ್ಥಾಪನಾ ದಿನಾಚರಣೆಯನ್ನು ಜೂನ್ 21ರಂದು ಸುಳ್ಯದ ಗಾಂಧಿನಗರದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬ್ದುಲ್ ರಜಾಕ್ ಕೆನರಾ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಪಕ್ಷದ ಧ್ವಜಾರೋಹಣವನ್ನು ನೆರವೇರಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಮಾತನಾಡಿ’ ಪಕ್ಷದ ಕಾರ್ಯಕರ್ತರು ಸಮಾಜದ ದುಷ್ಟ ಶಕ್ತಿಗಳ ವಿರುದ್ಧ, ಸಂವಿಧಾನ ವಿರೋಧಿಗಳ ವಿರುದ್ಧ ದಿಟ್ಟ ಹೆಜ್ಜೆ ಇಟ್ಟು ಮುಂದುವರೆಯಬೇಕಾಗಿದೆ. ನಮ್ಮ ದೇಶದಲ್ಲಿ ಅರಾಜಕತೆ ತಾಂಡವಾಡುತ್ತಿದ್ದು ದೇಶದ ಪ್ರಜೆಗಳು ಕಟ್ಟಿದಂತಹ ತೆರಿಗೆಯ ಹತ್ತು ಶೇಕಡ ಕೂಡ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ. ಎಲ್ಲವೂ ಕೂಡ ಕೆಲವು ಮಂತ್ರಿಗಳ ಸಂಸದರ ಪಾಲಾಗುತ್ತಿದೆ.
ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟಗಳನ್ನು ಮಾಡಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅನಿವಾಸಿ ಭಾರತೀಯ ಬದರುದ್ದೀನ್ ಗೂನಡ್ಕರವರು ಮಾತನಾಡಿ ಕಳೆದ 15 ವರ್ಷಗಳಿಂದ ತುಂಬಾ ಕಷ್ಟಪಟ್ಟು ತುಂಬಾ ತ್ಯಾಗಗಳನ್ನು ಸಹಿಸಿ ಕಲ್ಲು ಮುಳ್ಳಿನ ಹಾದಿಯಲ್ಲಿ ಈ ಪಕ್ಷವನ್ನು ನಮ್ಮ ನಾಯಕರುಗಳು ಮುನ್ನಡೆಸಿಕೊಂಡು ಬಂದಿದ್ದಾರೆ. ಇದನ್ನು ನಾವೆಲ್ಲರೂ ಎಷ್ಟೇ ಕಷ್ಟವಾದರೂ ಮುನ್ನಡೆಸಿಕೊಂಡು ಹೋಗಬೇಕು ಇದು ಪ್ರತಿಯೊಬ್ಬ ನಾಯಕನ ಕಾರ್ಯಕರ್ತನ ಕರ್ತವ್ಯವಾಗಿದೆ ಎಂದು ಹೇಳಿದರು.
ವಿಧಾನಸಭಾ ಕ್ಷೇತ್ರದ ಪಕ್ಷ ಸಂಘಟನಾ ಕಾರ್ಯದರ್ಶಿಯಾದ ಸಿದ್ದೀಕ್ ಸವಣೂರು ರವರು ಸ್ವಾಗತಿಸಿ,
ಸುಳ್ಯ ಬ್ಲಾಕ್ ಸಮಿತಿಯ ಅಧ್ಯಕ್ಷ ಮಿರಾಜ್ ಸುಳ್ಯ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಣೆ ಮಾಡಿದರು.
ವಿಧಾನಸಭಾ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಬೆಳ್ಳಾರೆ ಮತ್ತು ಇತರ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.