ನ.ಪಂ. ಕಚೇರಿ ಎದುರು ಜಾರಿ ನಿಂತಿದ್ದ ಚರಂಡಿ ಸ್ಲ್ಯಾಬ್

0


ಗಣ್ಯರು ಬಿದ್ದು ಜಖಂ


ನ.ಪಂ. ಕಚೇರಿ ಎದುರುಗಡೆ ಮೀನು ಮಾರುಕಟ್ಟೆಯ ಕಟ್ಟಡದ ಬಳಿಯಲ್ಲಿ ಚರಂಡಿಯ ಸಿಮೆಂಟ್ ಸ್ಲ್ಯಾಬ್ ಜಾರಿ ನಿಂತಿದ್ದು, ಶನಿವಾರ ರಾತ್ರಿ ಇಲ್ಲಿ ಕೆಲವರು ಜಾರಿ ಚರಂಡಿಗೆ ಬಿದ್ದ ಘಟನೆ ವರದಿಯಾಗಿದೆ.

ಶಣಿವಾರ ಸಂಜೆ ಲಯನ್ಸ್ ಹಾಲ್‌ನಲ್ಲಿ ಇದ್ದ ಕಾರ್ಯಕ್ರಮಕ್ಕೆ ಬಂದಿದ್ದ ಸದಸ್ಯರೊಬ್ಬರು ತಮ್ಮ ಕಾರನ್ನು ಈ ಚರಂಡಿ ಸ್ಲ್ಯಾಬ್ ಜಾರಿ ನಿಂತಿದ್ದ ಜಾಗದ ಪಕ್ಕದಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದರು. ರಾತ್ರಿ ಕಾರ್ಯಕ್ರಮ ಮುಗಿದು ಹಿಂತಿರುಗುವಾಗ ಲಯನ್ಸ್ ಸದಸ್ಯರ ಪತ್ನಿ ಕಾರಲ್ಲಿ ಕುಳಿತುಕೊಳ್ಳಲು ಬರುವಾಗ ಕಾಲು ಜಾರಿ ಈ ಚರಂಡಿಯೊಳಗೆ ಬಿದ್ದರೆನ್ನಲಾಗಿದೆ. ಅದೇ ಕಾರಲ್ಲಿ ತಮ್ಮ ಊರಿಗೆ ಹೋಗಲು ಕಾರಿನ ಬಳಿ ಬರುತ್ತಿದ್ದ ಇನ್ನೊಬ್ಬರು ಇದನ್ನು ಗಮನಿಸಿ ಮಹಿಳೆಯನ್ನು ಮೇಲಕ್ಕೆತ್ತಲು ಹೋದರು. ಆ ವೇಳೆಗೆ ಅವರೂ ಜಾರಿ ಚರಂಡಿಯೊಳಗೆ ಬಿದ್ದರೆನ್ನಲಾಗಿದೆ. ಇದು ಕಾರಲ್ಲಿ ಕುಳಿತಿದ್ದ ಕಾರು ಮಾಲಕರಿಗೆ ಗೊತ್ತಾಗಿರಲಿಲ್ಲ. ಯಾಕೆಂದರೆ ಚರಂಡಿ ಅಷ್ಟು ಆಳವಿದೆ. ಚರಂಡಿಗೆ ಬಿದ್ದ ಇಬ್ಬರೂ ಕೂಗಿ ಕೂಗಿ ಕರೆದಾಗ ಬೊಬ್ಬೆ ಕೇಳಿದ ಕಾರು ಮಾಲಕರು ಡ್ರೈವಿಂಗ್ ಸೀಟಿನಿಂದ ಇಳಿದು ಬಂದು ಇವರಿಬ್ಬರನ್ನು ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಅವರೂ ಚರಂಡಿಗೆ ಬಿದ್ದರು. ಬಳಿಕ ಪತ್ನಿ ಮತ್ತು ಮತ್ತೊಬ್ಬರು ಮೇಲಕ್ಕೆ ಹತ್ತಿ ಕಾರು ಮಾಲಕರನ್ನು ಮೇಲಕ್ಕೆಳೆಯಬೇಕಾಯಿತು. ಈ ಪ್ರಕ್ರಿಯೆಯಲ್ಲಿ ಒಬ್ಬರ ಕೈಯಲ್ಲಿದ್ದ ಕೊಡೆ ಚರಂಡಿಯೊಳಗೆ ಬಿದ್ದಿದ್ದು, ಅದನ್ನು ತೆಗೆಯಬೇಕಾದರೆ ಮತ್ತೆ ಚರಂಡಿಗೆ ಇಳಿಯಬೇಕಾಗಿತ್ತು. ಅಷ್ಟು ಆಳದ ಚರಂಡಿಗೆ ಮತ್ತೆ ಇಳಿದು ತೆಗೆಯಲು ಕಷ್ಟ ಎಂದು ಅನ್ನಿಸಿದುದರಿಂದ ಅವರು ಕೊಡೆಯನ್ನು ಅಲ್ಲೇ ಬಿಟ್ಟು ಕಾರು ಹತ್ತಿ ಊರಿಗೆ ಹೋದರು.


ಈ ರಸ್ತೆಯಲ್ಲಿ ನೂರಾರು ಜನ ಪ್ರತಿನಿತ್ಯ ಓಡಾಡುವವರಿದ್ದು, ಚರಂಡಿಯ ಸ್ಲ್ಯಾಬ್‌ಗಳು ಸರಿಯಾಗಿ ಇಲ್ಲದಿದ್ದರೆ ಸಂಕಷ್ಟಕ್ಕೊಳಗಾಗುತ್ತಾರೆ. ಸುಳ್ಯ ನಗರದ ಮುಖ್ಯ ರಸ್ತೆಯ ಬದಿಯ ಚರಂಡಿಯ ಸ್ಲ್ಯಾಬ್‌ಗಳು ಕೂಡಾ ಇದೇ ರೀತಿ ಜಾರಿ ನಿಂತಿದ್ದು, ಅದನ್ನು ಸರಿಪಡಿಸುವ ಕಾರ್ಯವನ್ನು ನಗರಾಡಳಿತ ಮಾಡಬೇಕಾಗಿದೆ.
ನ.ಪಂ. ಎದುರಿನ ಈ ಜಾರಿದ ಸ್ಲ್ಯಾಬನ್ನು ಪತ್ರಕರ್ತರೊಬ್ಬರು ಮತ್ತು ಕಂಟ್ರಾಕ್ಟರ್ ಒಬ್ಬರು ಸೇರಿ ಸರಿಪಡಿಸಿದರು.