ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಮತ್ತು ಮಾನವೀಯ ಸಂಬಂಧಗಳು ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯ ಮತ್ತು ರೋಗಿ ಸಂಬಂಧ ಮೊದಲಿನಂತೆ ಪವಿತ್ರವಾಗಿ ಉಳಿದಿಲ್ಲ. ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಈಗ ಬಹುಶಃ ಎಲ್ಲ ವೈದ್ಯರಿಗೂ ಅನ್ವಯಿಸಲಾರದು. ಅದೇ ರೀತಿ, ಇಂದಿನ ರೋಗಿಗಳು ಕೂಡ ವೈದ್ಯರನ್ನು ಪೂರ್ತಿ ವಿಶ್ವಾಸದಿಂದ ನೋಡುವ ಸ್ಥಿತಿಯಿಲ್ಲಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯರುಗಳು ತಮ್ಮ ವೃತ್ತಿ ಜೀವನದ ಏಳು ಬೀಳುಗಳತ್ತ ದೃಷ್ಟಿ ಹರಿಸಿ ತಮ್ಮ ತಪ್ಪು ಒಪ್ಪುಗಳನ್ನು ಪುನರ್ ವಿಮರ್ಶಿಸಿಕೊಂಡು ಸಾಧನೆ ಮಜಲುಗಳತ್ತ ಹಿನ್ನೋಟ ಬೀರಿ, ತನ್ನ ತನು ಮನ ಧನಗಳನ್ನು ತನ್ನ ವೃತ್ತಿಗೆ ಪುನಃ ಅರ್ಪಿಸಿಕೊಳ್ಳುವ ಸುದಿನ ಜುಲೈ ೧ ಆಗಿರುತ್ತದೆ.
ಜುಲೈ 1 ,1882ರಂದು ಭಾರತ ಕಂಡ ಮಹಾನ್ ವೈದ್ಯ, ಪ್ರಾಮಾಣಿಕ ರಾಜಕಾರಣಿ ,ಅಪ್ರತಿಮ ದೇಶಸೇವಕ ಮತ್ತು ಮಹಾನ್ ಸ್ವಾತಂತ್ರ ಹೋರಾಟಗಾರ, ಶಿಕ್ಷಣ ತಜ್ಞ ಡಾ| ಬಿದನ್ ಚಂದ್ರ ರಾಯ್ ಜನ್ಮವೆತ್ತ ದಿನ. ಈ ಮಹಾನ್ ಚೇತನದ ನೆನಪಿನ ಕುರುಹಾಗಿ ದೇಶದ್ಯಾಂತ ಜುಲೈ 1ರಂದು ವೈದ್ಯರ ದಿನ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಸುಮಾರು 80 ವರ್ಷಗಳ ಕಾಲ ತುಂಬು ಜೀವನ ನಡೆಸಿದ ಡಾ| ಬಿ.ಸಿ ರಾಯ್ ಜೀವನದುದ್ದಕ್ಕೂ ಸರಳ ಮತ್ತು ಉದಾತ್ತ ಜೀವನ ನಡೆಸಿ ಬಡ ಬಗ್ಗರ, ದೀನದಲಿತರ, ನೊಂದ ಜೀವಗಳ ಸಾಂತ್ವನಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. Poor are my patients god pays for them ಎಂಬಂತೆ ಯಾವತ್ತೂ ಬಡವರಿಗೆ ಉಚಿತ ಚಿಕಿತ್ಸೆ ನೀಡಿ ಮಾನವೀಯತೆಯನ್ನು ಜೀವನ ಪರ್ಯಂತ ಮೆರೆದರು. ಗಾಂಧೀಜಿಯವರ ಜೀವನ ಆದರ್ಶಗಳಿಂದ ಬಹಳಷ್ಟು ಪ್ರಭಾವಿತರಾಗಿದ್ದ ಶ್ರೀಯುತರು ಬಡವರ ಉದ್ದಾರಕ್ಕಾಗಿ ಯಾವತ್ತೂ ಶ್ರಮಿಸುತ್ತಿದ್ದರು. ಬಡವರಿಗಾಗಿ ಬಂಗಾಳದ ಕಲ್ಕತ್ತಾದಲ್ಲಿ ಆಸ್ಪತ್ರೆಯನ್ನು ತೆರೆದರು ಕಲ್ಕತ್ತಾದಲ್ಲಿ ಪ್ರಾಥಮಿಕ ವೈದ್ಯಕೀಯ ಶಿಕ್ಷಣ ಪಡೆದು ಇಂಗ್ಲೇಂಡ್ನಲ್ಲಿ ಉನ್ನತ ಶಿಕ್ಷಣ (MRCP,FRCS ) ಕಲಿತ ಬಳಿಕ ತಾಯ್ನಾಡಿನ ಸೆಳೆತಕ್ಕೊಳಗಾಗಿ ಭಾರತಕ್ಕೆ ಹಿಂದುರುಗಿದರು. ತಾವು ನಂಬಿದ ತತ್ವ ಆದರ್ಶ ಧ್ಯೇಯಗಳನ್ನು ಬಲಿಗೊಡದೆ ವೈದ್ಯಕೀಯ ವೃತ್ತಿಯನ್ನೂ ಪ್ರಾಮಾಣಿಕವಾಗಿ ನಡೆಸಿ ನುಡಿದಂತೆ ನಡೆದು ಇತರರಿಗೂ ಆದರ್ಶ ಪ್ರಾಯರಾದರು. ಸ್ವಾತಂತ್ರ ನಂತರದ ದಿನಗಳಲ್ಲಿ ಗಾಂಧೀಜಿಯವರ ಆದೇಶದಂತೆ ರಾಜಕೀಯ ಪ್ರವೇಶಿಸಿ 1948ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದರು. ಮುಖ್ಯಮಂತ್ರಿಯಾದ ಬಳಿಕವೂ ಹಲವಾರು ಆಸ್ಪತ್ರೆಗಳನ್ನು ತೆರೆದು ಬಡವರಿಗೆ ಉಚಿತ ಚಿಕಿತ್ಸೆಯನ್ನು ನೀಡಿದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಉಚಿತ ಶಿಕ್ಷಣವನ್ನು ನೀಡಿಸಿದರು. ಹೀಗೆ ರಾಜಕೀಯ, ವೈದ್ಯಕೀಯ, ಶಿಕ್ಷಣ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ನನಸಾಗಿಸಲು ಜೀವನ ಪರ್ಯಂತ ಶ್ರೀಗಂಧದ ಕೊರಡಿನಂತೆ ತಮ್ಮ ಜೀವನವನ್ನು ಸವೆಸಿದರು. ಹೀಗೆ 80 ವರ್ಷಗಳ ತುಂಬು ಜೀವನ ನಡೆಸಿ 1962ರ ಜುಲೈ ಒಂದರಂದೇ ವಿಧಿವಶರಾದರು. ಅವರ ಅಪ್ರತಿಮ ಸೇವೆಗಾಗಿ ಭಾರತ ಸರ್ಕಾರ 1961ರಲ್ಲಿ ಭಾರತ ರತ್ನ ನೀಡಿ ಗೌರವವಿತ್ತು. 1976ರಿಂದ ವೈದ್ಯಕೀಯ ರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ವೈದ್ಯರಿಗಾಗಿ ಬಿ.ಸಿ.ರಾಯ್ ಪ್ರಶಸ್ತಿಯನ್ನು ಆರಂಭಿಸಲಾಯಿತು. ಇದು ವೈದ್ಯಕೀಯ ಕ್ಷೇತ್ರದ ಪರಮೋಚ್ಛ ಪ್ರಶಸ್ತಿ ಎಂದರೂ ತಪ್ಪಲ್ಲ. ಇಂತಹ ಮಹಾನ್ ಚೇತನದ ನೆನಪಿಗಾಗಿ ದೇಶದ್ಯಾಂತ ಜುಲೈ 1ರಂದು ವೈದರ ದಿನ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಹಾಗೆಯೇ ದೇಶಾದ್ಯ್ಯಂತ ವೈದ್ಯ ಬಂಧುಗಳು ತಮ್ಮ ವೃತ್ತಿ ಜೀವನ ಮಜಲುಗಳತ್ತ ದೃಷ್ಟಿ ಹಾಯಿಸಿಕೊಂಡು ತಪ್ಪನ್ನು ತಿದ್ದಿಕೊಂಡು ಆತ್ಮಾವಲೋಕನ ಮಾಡಿಕೊಂಡು ಮಾನವಕುಲದ ಸೇವೆಗೆ ತಮ್ಮನ್ನು ಮಗದೊಮ್ಮೆ ಸಮರ್ಪಿಸಿಕೊಳ್ಳುವ ಸುದಿನ.
ಆರೋಗ್ಯವೇ ಭಾಗ್ಯ ಮತ್ತು ಪ್ರತಿಯೊಬ್ಬರು ಆರೋಗ್ಯವಂತರಾಗಿ ಬಾಳಿದಾಗ ಪಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ. ಆದರೆ ಇಂದು ಪ್ರತಿಯೊಬ್ಬರೂ ಒತ್ತಡದ ಜೀವನದಿಂದಾಗಿ ಹತ್ತಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪ್ರತಿಯೊಬ್ಬರು ಆರೋಗ್ಯವಂತರಾಗಿ ಇರುವುದು ಅತಿ ಅವಶ್ಯ.
ಜುಲೈ ಒಂದರಂದು ಭಾರತದಲ್ಲಿ ವೈದ್ಯರ ದಿನ ಆಚರಿಸಲಾಗುತ್ತದೆ. ಆಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹೇಗೆ ಹತ್ತಾರು ವಿಧಾನಗಳ ಮೂಲಕ ನಮ್ಮೆಲ್ಲರ ಆರೋಗ್ಯಕ್ಕಾಗಿ ತಮ್ಮ ಬದುಕನ್ನು ಶ್ರೀಗಂಧದ ಕೊರಡಿನಂತೆ ಸವೆಸಿಕೊಂಡು ಮನುಕುಲದ ಏಳ್ಗೆಗೆ ಬದುಕನ್ನು ಸಮರ್ಪಿಸಿಕೊಂಡಿರುವ ವೈದ್ಯರನ್ನು ಅಭಿನಂದಿಸುವ ಕೃತಜ್ಞತೆ ಸೂಚಿಸುವ ದಿನ. ನಮ್ಮ ದೇಹದ ಆರೋಗ್ಯದಲ್ಲಿ ವೈಪರೀತ್ಯ ಉಂಟಾಗಿ ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ಶಮನಗೊಳಿಸಿ, ಧೈರ್ಯ ತುಂಬಿ, ಆತ್ಮವಿಶ್ವಾಸ ತುಂಬಿ ಬಾಳಿಗೆ ಬೆಳಕು ನೀಡಿ ಹೊಸ ಜೀವನಕ್ಕೆ ರಹದಾರಿ ಮಾಡಿ ಕೊಟ್ಟ ನಮ್ಮ ನೆಚ್ಚಿನ ವೈದ್ಯರನ್ನು ಸ್ಮರಿಸುವ ನೆನಪಿಸಿಕೊಳ್ಳುವ ಮತ್ತು ಆಧರಿಸುವ ಸ್ಮರಣೀಯವಾದ ದಿನವಿದು.
ವ್ಯಾಪಾರಿ ಪ್ರವೃತ್ತಿಗೆ ಕಡಿವಾಣ ಅಗತ್ಯ
ನಮಗೆ ಸ್ವಾತಂತ್ರ್ಯ ಲಭಿಸಿ ೭೭ ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಕಾಲ ಬದಲಾದಂತೆ ನಮ್ಮ ಜೀವನಶೈಲಿ, ಆಹಾರ ಪದ್ದತಿ, ಜೀವನ ಆದರ್ಶಗಳೂ ಬದಲಾಗಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿಗಳು, ಅವಿಷ್ಕಾರ ನಡೆದಿದೆ. ಹೊಸ ಹೊಸ ರೋಗಗಳು ಮತ್ತು ಹೊಸ ಹೊಸ ಔಷಧಿಗಳು ಹುಟ್ಟಿಕೊಂಡಿವೆ. ಇನ್ನೊಂದೆಡೆ ರೋಗಿ ಮತ್ತು ವೈದ್ಯರ ನಡುವಿನ ಭಾವಾನಾತ್ಮಕ ಸಂಬಂಧ ಶಿಥಿಲವಾಗುತ್ತಿದೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವನೆ ಹೆಚ್ಚಾಗಿ ಬೆಳೆಯುತ್ತಿರುವುದು ವಿಷಾಧನೀಯ ವಿಚಾರ.
ವೈದ್ಯ ಶಿಕ್ಷಣ ವೈದ್ಯಕೀಯ ವೃತ್ತಿ, ಸಂಶೋಧನೆಗಳೇ ಇರಲಿ ಎಲ್ಲ ಕಡೆಯೂ ಧನಬಲವೇ ವಿಜೃಂಭಿಸುತ್ತಿದೆ. ಪ್ರತಿಭೆ, ಪ್ರಾಮಾಣಿಕ ಪರಿಶ್ರಮಗಳಿಗೆ ಕಿಂಚಿತ್ತೂ ಬೆಲೆ ಸಿಗುತ್ತಿಲ್ಲ. ಇದು ಸುಂದರ, ಸ್ವಸ್ಥ ಸಮಾಜಕ್ಕೆ ಖಂಡಿತ ಮಾರಕ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಜನತೆ, ಸಂಘ-ಸಂಸ್ಥೆಗಳು ಮತ್ತು ಸರ್ಕಾರ ತ್ವರಿತಗತಿಯಲ್ಲಿ ಸ್ಪಂದಿಸಬೇಕು. ಅರ್ಹ ಪ್ರತಿಭಾವಂತರಿಗೆ ವೈದ್ಯಕೀಯ ಶಿಕ್ಷಣ ಅವಕಾಶ ದೊರೆತು, ಆರೋಗ್ಯ ಕ್ಷೇತ್ರದಲ್ಲೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕು. ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ರೋಗಗಳಿಗೂ ಮತ್ತು ತಲೆತಲಾಂತರಗಳಿಂದ ಬಾಧಿಸುತ್ತಿರುವ ರೋಗಗಳಿಗೂ ಕಡಿವಾಣ ಹಾಕಬೇಕು. ಔಷಧ, ಶುಶ್ರೂಷೆ ಮತ್ತು ಎಲ್ಲಾ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಬಡವರ ಮನೆ ಬಾಗಿಲಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಿಸ್ವಾರ್ಥದಿಂದ ಸೇವಾ ಮನೋಭಾವದಿಂದ ಹಗಲಿರುಳು ತಮ್ಮ ಜೀವನವನ್ನು ರೋಗಿಗಳ ಒಳಿತಿಗಾಗಿ ತೊಡಗಿಸಿಕೊಂಡು ವೈದ್ಯರನ್ನು ಗುರುತಿಸಿ ಕಾರ್ಯ ನಡೆಯಬೇಕು.
ರೋಗಿಗಳಿಗೂ ಒಂದೆರಡು ಕಿವಿಮಾತು. ದಯವಿಟ್ಟು ತಾಳ್ಮೆ, ಸಂಯಮ ಕಳೆದುಕೊಳ್ಳಬೇಡಿ. ವೈದ್ಯರ ಮೇಲೆ ಪೂರ್ಣ ಭರವಸೆ ಇಡಿ. ಎಲ್ಲಾ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ವೈದ್ಯರೂ ನಿಮ್ಮಂತೆಯೇ ಇರುವ ಇನ್ನೊಂದು ಜೀವ. ಅವರಿಗೆ ಆಸೆ, ಆಕಾಂಕ್ಷೆ, ವೈಯಕ್ತಿಕ ಸಮಸ್ಯೆ, ಭಾವನೆಗಳು ಇರುತ್ತವೆ. ಅವರ ಭಾವನೆಗಳಿಗೆ, ನೋವುಗಳಿಗೂ ರೋಗಿಗಳು ಸ್ಪಂದಿಸಬೇಕು. ಹಾಗಾದ್ದಲ್ಲಿ ಮಾತ್ರ ವೈದ್ಯ –ರೋಗಿಗಳ ನಡುವೆ ಸುಮಧುರ ಬಾಂಧವ್ಯ ಬೆಳೆದು ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ.
ನೆನಪಿಡಿ, ಈಗಿರುವ ಕಾಲಘಟ್ಟದಲ್ಲಿ ರೋಗಿಗಳು ವೈದ್ಯರಿಲ್ಲದೆ ಬದುಕಬಹುದು. . ಆದರೆ ವೈದ್ಯರು ರೋಗಿಗಳಿಲ್ಲದೆ ಬದುಕುವುದು ಅಸಾಧ್ಯ ಎಂಬ ಮಾತು ಬಂದರೆ ಅತಿಶಯೋಕ್ತಿಯಲ್ಲ.
ರೋಗಿಗಳು ಕೂಡ ವೈದ್ಯರಿಗೆ ರೋಗದ ಬಗ್ಗೆ ಸಂಪೂರ್ಣ ಪರಾಮರ್ಶೆ ಮಾಡಲು ಕಾಲಾವಕಾಶ ನೀಡಬೇಕು. ದಿನ ಬೆಳಗಾಗುವುದರೊಳಗೆ ಕಾಯಿಲೆ ವಾಸಿಯಾಗಬೇಕು. ಎಂದು ವೈದ್ಯರ ಮೇಲೆ ಅನಗತ್ಯ ಒತ್ತಡ ಹಾಕಬೇಡಿ. ಅನಗತ್ಯ ಪ್ರಶ್ನೆ ಕೇಳಿ ಅಂತರ್ಜಾಲದ ಮಾಹಿತಿಯನ್ನು ವೈದ್ಯರ ಬಳಿ ತಿಳಿಸಿ, ತಮ್ಮ ಅಲ್ಪ ಸ್ವಲ್ಪ ಜ್ಞಾನದಿಂದ ವೈದ್ಯರ ದಾರಿ ಕೆಡಿಸಬೇಡಿ. ಪ್ರತಿಶತ ಮೂವತ್ತರಷ್ಟು ರೋಗ, ವೈದ್ಯರ ಮೇಲಿನ ನಂಬಿಕೆಯ ತಳಹದಿಯಲ್ಲೇ ಗುಣವಾಗುತ್ತದೆ.
ದೇಹದ ರೋಗವನ್ನು ವೈದ್ಯರು ಗುಣಪಡಿಸಬಹುದು. ಆದರೆ ಮನಸ್ಸಿನ ರೋಗ ಗುಣಪಡಿಸಲು ವೈದ್ಯರಿಂದ ಅಸಾಧ್ಯ ಎನ್ನುವುದನ್ನು ಅರಿತುಕೊಂಡರೆ, ವೈದ್ಯರ ಕೆಲಸ ಸರಳ. ವೈದ್ಯರೂ ಆತ್ಮವಿಮರ್ಶೆ ಮಾಡಿಕೊಂಡು ತಮ್ಮ ವೃತ್ತಿ ಧರ್ಮ ಪಾಲಿಸಿದಲ್ಲಿ ಸುಂದರ ಸದೃಢ ಸಮಾಜ ನಿರ್ಮಾಣ ಸಾಧ್ಯ.
ಮೊದಲೆಲ್ಲಾ ವೈದ್ಯ ವೃತ್ತಿಯನ್ನು ಪವಿತ್ರವಾದ ವೃತ್ತಿ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಬಹಳಷ್ಟು ಬದಲಾವಣೆಗಳಾದವು. ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯಕೀಯ ವೃತ್ತಿಯಲ್ಲಿಯೂ ಬಹಳಷ್ಟು ಪರಿವರ್ತನೆಯಾಯಿತು. ಮೊದಲಿದ್ದ ವೈದ್ಯ- ರೋಗಿಯ ಸಂಬಂಧ ಈಗೀಗ ಮೊದಲಿನಂತೆ ಉಳಿದಿಲ್ಲ. ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದರಲ್ಲಿ ರೋಗಿ ಮತ್ತು ವೈದ್ಯರ ತಪ್ಪೂಇದೆ. ಪ್ರತಿ ವೈದ್ಯ ಮತ್ತು ರೋಗಿ ತನ್ನ ಹೊಣೆಗಾರಿಕೆ, ವೃತ್ತಿ ಧರ್ಮ ಮತ್ತು ಇತಿಮಿತಿಯೊಳಗೆ ವ್ಯವರಿಸಿದ್ದಲ್ಲಿ ಈ ರೀತಿಯ ಸಂಘರ್ಷ ತಪ್ಪಿಸಬಹುದು. ಇದರಲ್ಲಿಯೇ ಇಬ್ಬರ ಒಳಿತು ಮತ್ತು ಸಮಾಜದ ಒಳಿತೂ ಅಡಗಿದೆ. ಸಾವು ಸಮೀಪಿಸಿದಾಗ ವೈದ್ಯ ದೇವರಾಗಿಯೂ, ಚಿಕಿತ್ಸೆ ಆರಂಭಿಸಿದಾಗ ದೇವಮಾನವನಾಗಿಯೂ, ಚಿಕಿತ್ಸೆ ಫಲಿಸಿದಾಗ ಸಾಮಾನ್ಯ ಮನುಷ್ಯನಾಗಿಯೂ, ಶುಲ್ಕ ಕೇಳಿದಾಗ ಧನದಾಹಿ ಎಂದೂ, ಚಿಕಿತ್ಸೆ ಫಲಿಸದಾಗ ಕೊಲೆಗಡುಕ ಎಂದೂ ಜನರು ವೈದ್ಯರನ್ನೂ ಹಾಡಿ ಹೊಗಳುತ್ತಾರೆ ಮತ್ತು ತೆಗಳುತ್ತಾರೆ. ಆದರೆ ಈ ಎಲ್ಲಾ ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೆ ಸಮಚಿತ್ತದಿಂದ ವರ್ತಿಸಿ ವೃತ್ತಿ ಧರ್ಮವನ್ನು ಪಾಲಿಸಿ ರೋಗಿಯು ಗುಣಮುಖವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುವವನೇ ನಿಜವಾದ ವೈದ್ಯ. ಅಂತಹ ವೈದ್ಯ ನಾರಾಯಣನಾಗದಿದ್ದರೂ ಮನುಷ್ಯನಾಗುವುದಂತೂ ಖಂಡಿತ ಸತ್ಯ. ಈ ರೀತಿ ತನ್ನ ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳ ಸೇವೆ ಮಾಡುತ್ತಿರುವ ಸಾವಿರಾರು ವೈದ್ಯರು ನಮ್ಮ ಸಮಾಜದಲ್ಲಿ ಇದ್ದಾರೆ. ಅವರು ಹಾಕಿದ ಆದರ್ಶ ಮತ್ತು ತತ್ವಗಳು ಇತರರಿಗೆ ಮಾದರಿಯಾಗಲಿ. ವೈದ್ಯರ ದಿನದಂದು ನನ್ನೆಲ್ಲಾ ವೈದ್ಯ ಸಹೋದ್ಯೋಗಿ ಬಂಧುಗಳಿಗೆ ಶುಭಾಶಯ ಕೋರುತ್ತೇನೆ.
ಡಾ|| ಮುರಲೀ ಮೋಹನ್ ಚೂಂತಾರು