ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ವಿವಿಧ ಸಂಘಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ

0

ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘ ರಿ.ಇದರ ಪ್ರಾಯೋಜಕತ್ವದಲ್ಲಿ ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಿವಿಧ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು. 4 ರಂದು ಅಮೃತ ಭವನ ಸಭಾಭವನದಲ್ಲಿ ನಡೆಯಿತು.


ದಕ್ಷಿಣ ಕನ್ನಡ ಗೌಡ ವಿದ್ಯಾಸಂಘ ಇದರ ಅಧ್ಯಕ್ಷ ಧನಂಜಯ ಅಡ್ಪಂಗಾಯ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರವೇರಿಸಿದರು. ಬಳಿಕ ಕಾಲೇಜು ಮತ್ತು ಪ್ರೌಢಶಾಲೆಯ 2024 – 25 ರ ಸಾಲಿನ ಶಾಲಾ ಮಂತ್ರಿ ಮಂಡಲ ಮತ್ತು ವಿವಿಧ ಅಂಗಗಳ ಪದಾಧಿಕಾರಿಗಳ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.


ಸಂಸ್ಥೆಯ ಸಂಬಂಧಪಟ್ಟ ಶಿಕ್ಷಕರು ವಿವಿಧ ಸಂಘ ಸಂಸ್ಥೆಗಳನ್ನು ಪರಿಚಯಿಸಿದರು.


ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಶಾಲುಹೊದಿಸಿ ಸ್ಮರಣಕ್ಕೆ ನೀಡಿ ಗೌರವಿಸಲಾಯಿತು.


ವೇದಿಕೆಯಲ್ಲಿ ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘದ ಡಾಕ್ಟರ್ ರೇವತಿ ನಂದನ್, ಕೋಶಾಧಿಕಾರಿ ಮಾಧವ ಗೌಡ, ನಿರ್ದೇಶಕರಾದ ಶ್ರೀಮತಿ ಸಾಹಿ ಗೀತಾ, ಜಯರಾಮ ಚಿಲ್ತಡ್ಕ, ಪ್ರೌಢಶಾಲಾ ವಿಭಾಗದ ರಕ್ಷಕ ಸಮಿತಿ ಅಧ್ಯಕ್ಷ ನಾರಾಯಣ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.


ಗೌಡ ವಿದ್ಯಾ ಸಂಘದ ಪ್ರಧಾನ ಕಾರ್ಯಧರ್ಶಿ ಡಾ. ರೇವತಿ ನಂದನ್ ಈ ಸಂಧರ್ಭದಲ್ಲಿ ಮಾತನಾಡಿ ನೂತನವಾಗಿ ರಚಿಸಲ್ಪಟ್ಟಿರುವ ಸಂಘಗಳ ಉತ್ತಮವಾಗಿ ಕಾರ್ಯಚಟುವಟಿಕೆಗಳನ್ನು ಮಾಡುವ ಮೂಲಕ ಬರುವ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಕೀರ್ತಿಯನ್ನು ಇನ್ನೂ ಹೆಚ್ಚಿಸಲು ಮಾಹಿತಿಯನ್ನು ನೀಡಿದರು.ಅಲ್ಲದೆ ಕೇವಲ ವಿದ್ಯಾರ್ಥಿನಿಗಳು ಮಾತ್ರ ಇದ್ದ ನಮ್ಮಲ್ಲಿ ಈ ವರ್ಷದಿಂದ ವಿದ್ಯಾರ್ಥಿಗಳಿಗೂ ಕೂಡ ಶಿಕ್ಷಣ ಪಡೆಯಲು ಅವಕಾಶ ಲಭಿಸಿದೆ. ಇದು ಸಂತೋಷದ ವಿಷಯವಾಗಿದೆ ಎಂದು ನೂತನವಾಗಿ ದಾಖಲಾತಿ ಪಡೆದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಬಳಿಕ ಅಧ್ಯಕ್ಷರು ಧನಂಜಯ ಅಡ್ಪಪಂಗಾಯ ಮಾತನಾಡಿ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳನ್ನು ಹೆಚ್ಚಿಸುವ ಬಗ್ಗೆ ಮಾಹಿತಿ ನೀಡಿ ಕಳೆದ ಭಾರಿ 10ನೇ, ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿತಂದ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ರಾಜ್ಯದಲ್ಲಿ 10 ನೇ ರ್‍ಯಾಂಕ್ ಪಡೆಯುವ ಮೂಲಕ ಪ್ರತಿಭೆಮೆರೆದ ವಿದ್ಯಾರ್ಥಿನಿ ಅನುಷ್ಯಳಿಗೆ ಮುಂದಿನ ದಿನದಲ್ಲಿ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದರು.

ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಸ್ವಾಗತಿಸಿ,ಮುಖ್ಯ ಶಿಕ್ಷಕಿ ಶ್ರೀಮತಿ ಭಾರತಿ ಪಿ ವಂದಿಸಿದರು. ವಿದ್ಯಾರ್ಥಿನಿಗಳಾದ ಸೋನಾ ಹಾಗೂ ಶ್ರೀವಲ್ಲಿ ಕಾರ್ಯಕ್ರಮ ನಿರೂಪಿಸಿದರು.