ಸುಳ್ಯ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ಸುಳ್ಯ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರಥಬೀದಿಯ ರೋಟರಿ‌ ಸಮುದಾಯ ಸಭಾಭವನದಲ್ಲಿ ಜು.3 ರಂದು ನಡೆಯಿತು.


2024-25ರ ಸಾಲಿನ ನೂತನ ಅಧ್ಯಕ್ಷೆಯಾಗಿ ಯೋಗಿತಾ ಗೋಪಿನಾಥ್, ಕಾರ್ಯದರ್ಶಿಯಾಗಿ ಡಾ.ಹರ್ಷಿತಾ ಪುರುಷೋತ್ತಮ, ಕೋಶಾಧಿಕಾರಿಯಾಗಿ ಹರಿರಾಯ ಕಾಮತ್ ಪದಗ್ರಹಣಗೈದರು.

ರೋಟರಿ ಕ್ಲಬ್‌ನ ನಿರ್ಗಮನ ಅಧ್ಯಕ್ಷ ಆನಂದ ಖಂಡಿಗ ಅಧಿಕಾರ ಹಸ್ತಾಂತರ ಮಾಡಿದರು.


ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ಡಾ.ಶ್ರೀಪತಿ ರಾವ್ ಪದಗ್ರಹಣ ನೆರವೇರಿಸಿದರು. ಮುಖ್ಯ ಅತಿಥಿಯಾಗಿದ್ದ ಝೋನ್ 7ರ ಎಆರ್‌ಆರ್‌ಎಫ್‌ಸಿ ಕೆ.ಕೃಷ್ಣ ಶೆಟ್ಟಿ ಮಾತನಾಡಿ ” ರೋಟರಿಯ ಧ್ಯೇಯೋದ್ದೇಶವನ್ನು ಅರಿತು ಅತ್ಯುತ್ತಮ ಕೆಲಸ‌‌ ಮಾಡಿ. ರೋಟರಿ ಕ್ಲಬ್‌ನ ನೂತನ ತಂಡ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡಿ ಅತ್ಯುತ್ತಮ ಕ್ಲಬ್ ಆಗಿ ಮೂಡಿ ಬರಲಿ ” ಎಂದು ಹಾರೈಸಿದರು.

ನೂತನ ಅಧ್ಯಕ್ಷೆ ಯೋಗಿತಾ ಗೋಪಿನಾಥ್ ಮಾತನಾಡಿ ” 2024-25 ರ ಸಾಲಿನಲ್ಲಿ ನೂತನ ತಂಡದೊಂದಿಗೆ ಸಮಾಜಕ್ಕೆ ಉಪಕಾರವಾಗುವಂತೆ ಸಮಾಜದ ವಿವಿಧ ಸ್ತರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು.


ಅಂತಾರಾಷ್ಟ್ರೀಯ ರೋಟರಿ ಧ್ಯೇಯವಾಕ್ಯ ‘ದಿ ಮ್ಯಾಜಿಕ್ ಆಫ್ ರೋಟರಿ’ ಎಂಬ ವಾಕ್ಯದಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ರಸ್ತೆ ಸುರಕ್ಷತಾ ಜಾಗೃತಿ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ, ಶುದ್ಧ ಕುಡಿಯುವ ನೀರಿನ ನಿರ್ವಹಣೆ,‌ಮಾನಸಿಕ ಆರೋಗ್ಯ ಕಾರ್ಯಕ್ರಮಗಳು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು” ಎಂದು ಹೇಳಿದರು.


ಝೋನ್ 5 ರ ಅಸಿಸ್ಟೆಂಟ್ ಗವರ್ನರ್ ವಿನಯಕುಮಾರ್, ಝೋನಲ್ ಲೆಪ್ಟಿನೆಂಟ್ ಪ್ರಭಾಕರನ್ ನಾಯರ್. ಕೆ ಅತಿಥಿಗಳಾಗಿದ್ದರು.


ನಿರ್ಗಮನ ಅಧ್ಯಕ್ಷ ಆನಂದ‌ ಖಂಡಿಗ ಹಾಗೂ ಕಾರ್ಯದರ್ಶಿ ಕಸ್ತೂರಿ ಶಂಕರ್ ಅವರನ್ನು ಸನ್ಮಾನಿಸಲಾಯಿತು. ವಿಶಿಷ್ಠ ಸಾಧನೆಗಾಗಿ ರೋಟರಿಯ ಹಿರಿಯ ಸದಸ್ಯರಾದ ಕೆ.ಸೀತಾರಾಮ ರೈ ಸವಣೂರು, ರಾಮಚಂದ್ರ ಪಿ. ಅವರನ್ನು ಸನ್ಮಾನಿಸಲಾಯಿತು.


ಅಡ್ಕಾರ್ ಹಾಗೂ ಜ್ಯೋತಿಯ ಅಂಗನವಾಡಿಗಳಿಗೆ ಪ್ರಾಜೆಕ್ಟ್ ಯೋಜನೆಯ ಸವಲತ್ತು ಹಸ್ತಾಂತರ ಮಾಡಲಾಯಿತು.

ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಪಾಸಿಟಿವ್ ಹೆಲ್ತ್‌ನಲ್ಲಿ ಪಾರ್ಶ್ವವಾಯು ಪೀಡಿತ ಮಹಿಳೆಗೆ ವೀಲ್ ಚೆಯರ್ ಹಸ್ತಾಂತರ ಮಾಡಲಾಯಿತು. ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರೋಟರಿ ನಿರ್ಗಮನ ಅಧ್ಯಕ್ಷ ಆನಂದ ಖಂಡಿಗ ಸ್ವಾಗತಿಸಿ, ನೂತನ ಕಾರ್ಯದರ್ಶಿ ಡಾ.ಹರ್ಷಿತಾ ಪುರುಷೋತ್ತಮ ವಂದಿಸಿದರು. ‌ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.

ನೂತನ ಅಧ್ಯಕ್ಷೆ ಯೋಗಿತಾ ಗೋಪಿನಾಥ್

ಪುತ್ತೂರಿನ ಪಳ್ಳತ್ತೂರು ಗ್ರಾಮದ ಮಡ್ಯಳಮಜಲು ನಿವಾಸಿಯಾಗಿದ್ದ ನಿವೃತ್ತ ಅಬಕಾರಿ ವೃತ್ತ ನಿರೀಕ್ಷಕ ದಿ. ಎಂ.ಸಂಜೀವ ಗೌಡ ಹಾಗೂ ಶ್ರೀಮತಿ ಎಂ.ಅನಸೂಯ ದಂಪತಿಗಳ ಪುತ್ರಿಯಾಗಿ, 3 ಜುಲೈ 1974ರಂದು ಜನಿಸಿದ ಇವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಭಟ್ಕಳ , ಮೂಲ್ಕಿ, ಪುತ್ತೂರಿನಲ್ಲಿ ಪೂರೈಸಿ, ಪುತ್ತೂರಿನ ವಿವೇಕಾನಂದ ಕಾಲೇಜ್ ನಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದಾರೆ.
ಸುಳ್ಯದ ಮೋಂಟಡ್ಕ ಮನೆತನದ ನಿವೃತ್ತ ಅಧ್ಯಾಪಕರಾಗಿರುವ ಪುಟ್ಟಣ್ಣ ಗೌಡ ಹಾಗೂ ದಿವಂಗತ ಗಂಗಮ್ಮ ದಂಪತಿಯ ಪುತ್ರರಾದ ಗೋಪಿನಾಥ್ ಎಂ.ಪಿ.ಯವರೊಂದಿಗೆ 1995ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿ ಸುಳ್ಯಕ್ಕೆ ಬಂದರು.


ಪತಿಯ ಸಹಕಾರದಿಂದ 1995ರಲ್ಲಿ ಇನ್ನರ್ ವ್ಹೀಲ್ ಕ್ಲಬ್ ಗೆ ಸೇರ್ಪಡೆಗೊಂಡು ಹಲವಾರು ಹುದ್ದೆಗಳನ್ನು ಅಲಂಕರಿಸಿ, ಕ್ಲಬ್ ನ ಸೇವಾ ಕಾರ್ಯಗಳನ್ನು ಸಮಾಜಕ್ಕೆ ತಲುಪಲು ಪ್ರಾಮಾಣಿಕ ಪ್ರಯತ್ನ ಪಟ್ಟು, ಬದಲಾವಣೆಗಳನ್ನು ಕಂಡುಕೊಂಡವರು.


1999 ರಿಂದ ಇನ್ನರ್ ವ್ಹೀಲ್ ಕ್ಲಬ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಇವರು 2001ರಲ್ಲಿ ಇನ್ನರ್ ವ್ಹೀಲ್ ಕ್ಲಬ್ ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.


2002-03 ಸಾಲಿನಲ್ಲಿ ಕ್ಲಬ್ ಅಧ್ಯಕ್ಷರಾಗಿ ಇವರ‌ ಅಧ್ಯಕ್ಷತೆಯಲ್ಲಿ , ಪ್ರಥಮ ಬಾರಿಗೆ 12 ಜಿಲ್ಲಾ ಪ್ರಶಸ್ತಿಗಳನ್ನು ಕ್ಲಬ್ ಮುಡಿಗೇರಿಸಿದ್ದಾರೆ. ಇವರ ಅವಧಿಯಲ್ಲಿನ ಜಿಲ್ಲಾ ಮಟ್ಟದ “ಇನ್ನರ್ ಪ್ರತಿಭೆ”ನೃತ್ಯ ಸ್ಪರ್ಧೆ,ಎಲ್ಲರ ಮೆಚ್ಚುಗೆ ಪಡೆದಿತ್ತು. ಅನಿವಾರ್ಯ ಕಾರಣಗಳಿಂದ 2017-18 ರ ಅವಧಿಯಲ್ಲಿ, ಎರಡನೇ ಬಾರಿಗೆ ಕ್ಲಬ್ ನ ಅಧ್ಯಕ್ಷತೆಯನ್ನು ವಹಿಸಿದ್ದರು.

ರೋಟರಿ ಸಂಸ್ಥೆಗೆ 2014 ರಲ್ಲಿ ಪುತ್ತೂರಿನ ರೋಟರಿ ಸಿಟಿ ಕ್ಲಬ್ ನ ಸದಸ್ಯೆಯಾಗಿ ಪಾದರ್ಪಣೆಗೈದು, 2014 ರಿಂದ 2016ರ ವರೆಗೆ ಅಲ್ಲಿ ಕಾರ್ಯನಿರ್ವಹಿಸಿದ್ದಾರೆ. ತದನಂತರ 2019 ರಲ್ಲಿ ಸುಳ್ಯ ರೋಟರಿ ಸದಸ್ಯರಾಗಿ ಸೇರ್ಪಡೆಗೊಂಡರು.

ಮಗ -ಪ್ರಣವ್ ಸ್ವರೂಪ್. (MBA- PGDM) Business ಶಿಕ್ಷಣ ಪೂರೈಸಿದ್ದು, ಮಗಳು – ಡಾ. ನಿಹಾರಿಕಾ BAMS ಪದವಿಯನ್ನು ಪಡೆದಿದ್ದು, Painting & Scclpting Artist ( YouTube channel- crab clouds) ಆಗಿದ್ದು ಸುಳ್ಯದ ಬೊಳುಬೈಲ್ ನ ಗೋಪಿಕಾ ಫಾರ್ಮ್ ನಲ್ಲಿ ಸುಖಿ ಜೀವನ ನಡೆಸುತ್ತಿದ್ದಾರೆ.