ಆಲೆಟ್ಟಿಯ ಕೂರ್ನಡ್ಕದಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಗೆ ಆಶ್ರಯ ನೀಡಿದ ಪುತ್ತೂರಿನ ದೀಪಾಶ್ರೀ ಪುನರ್ವಸತಿ ಕೇಂದ್ರ

0

ಒಬ್ಬ ವಿವಾಹಿತ ಒಬ್ಬಂಟಿ ಮಹಿಳೆಜತೆಯಲ್ಲಿರುವುದು ತನ್ನ ಮುದ್ದಿನ ಸಾಕು ನಾಯಿ. ಹೆಸರಿಗೆ ಮಾತ್ರ ಮನೆ ಎಂಬಂತಿರುವ ಇಂದೋ ಅಥವಾ ನಾಳೆಯೋ ಕುಸಿದು ಬೀಳುವ ಸ್ಥಿತಿಯಲ್ಲಿ ಇರುವ ಮುರುಕಲು ಮನೆಯಲ್ಲಿ ವಾಸಿಸುತ್ತಿರುವ ಮಾನಸಿಕ ಅಸ್ವಸ್ಥೆಯಾಗಿರುವ ಮಹಿಳೆ. ಆಲೆಟ್ಟಿಗ್ರಾಮದಕೂರ್ನಡ್ಕ ಶ್ರೀಮತಿ ತೇಜಕುಮಾರಿ ಯವರ ಬದುಕಿನ ಕುರಿತು ಸುದ್ದಿ ಪತ್ರಿಕೆಯಲ್ಲಿ ಕಳೆದ ಕೆಲವೇ ದಿನಗಳ ಹಿಂದೆ ಪ್ರಕಟಗೊಂಡ ವರದಿಗೆ ಹಾಗೂ ಸುದ್ದಿ ವಾಹಿನಿಯಲ್ಲಿ ಬಿತ್ತರಗೊಂಡ ಸ್ಟೋರಿಗೆ ವ್ಯಾಪಕ ಸ್ಪಂದನೆ ದೊರೆತಿದ್ದು ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದ್ದಾರೆ. ಈ ಬಗ್ಗೆ ಹಲವಾರು ಮಂದಿ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ.
ಇದೀಗ ಪುತ್ತೂರಿನಲ್ಲಿ ಕಳೆದ ಕೆಲ ಸಮಯಗಳಿಂದ ಸಮಾಜ ಸೇವೆಯ ಧ್ಯೇಯ ಹೊಂದಿದ ಸೇವಾ ಕೇಂದ್ರವೊಂದು ಮಹಿಳೆಗೆ ಸೂಕ್ತ ಚಿಕಿತ್ಸೆ ಮತ್ತು ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಪುತ್ತೂರಿನ ಜಿಡೆಕಲ್ಲು ಎಂಬಲ್ಲಿ ಇರುವ ದೀಪಾಶ್ರೀ ನಿರ್ಗತಿಕರ ಪುನರ್ವಸತಿ ಕೇಂದ್ರವು ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಲು ಹಾಗೂ ಆಶ್ರಯ ನೀಡಲು ಮುಂದಾಗಿರುವುದಂತೂ ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.

ದೀಪಾಶ್ರೀ ನಿರ್ಗತಿಕರ ಪುನರ್ವಸತಿ ಕೇಂದ್ರದ ಉಸ್ತುವಾರಿಯಾಗಿರುವ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಉಮೇಶ್ ನಾಯಕ್ ರವರ ನೇತೃತ್ವದಲ್ಲಿ ಮಹಿಳೆಯನ್ನು ಸುಳ್ಯ ಸಿ.ಡಿ‌.ಪಿ.ಒ ಇಲಾಖೆಯವರ ಮತ್ತು ಆಲೆಟ್ಟಿ ಪಂಚಾಯತ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರ ಮತ್ತು ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಸೇವಾ ಕೇಂದ್ರದ ಮೂಲಕ ಚಿಕಿತ್ಸೆ ಮತ್ತು ಆಶ್ರಯ ಕೊಡಿಸುವುದಾಗಿ ತಿಳಿಸಿ ಎಲ್ಲರ ಒಪ್ಪಿಗೆಯ ಮೇರೆಗೆ ಜು.11 ರಂದು ಕರೆದುಕೊಂಡು ಹೋಗಲಾಯಿತು.

ಶ್ರೀಮತಿತೇಜಕುಮಾರಿ ಯವರ ಬದುಕಿನ ಬಗ್ಗೆ ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಿದ ಹಲವಾರು ಮಂದಿ ಸಮಾಜ ಸೇವಕರು, ಸಂಘಟನೆಯ ಸದಸ್ಯರು ಸ್ಪಂದಿಸಿದ್ದು ಅನೇಕರು ಸುದ್ದಿಗೆ ಕರೆ ಮಾಡಿ ವಿಚಾರಿಸಿದ್ದರು.

ಸುದ್ದಿ ವಾಹಿನಿಯಲ್ಲಿ ಬಿತ್ತರಗೊಂಡ ವರದಿಯನ್ನು ಗಮನಿಸಿದ ಪುತ್ತೂರಿನ ರೊ.ಉಮೇಶ್ ನಾಯಕ್ ರವರು ಮುಖತ: ಸುಳ್ಯ ಸುದ್ದಿ ಕಚೇರಿಯನ್ನು ಸಂಪರ್ಕಿಸಿದರು. ಬಳಿಕ ನಿರ್ಗತಿಕ ಮಹಿಳೆಯ ಕುರಿತು ಮಾಹಿತಿ ಕಲೆ ಹಾಕಿದರು.


ಜು.11 ರಂದು ಸುಳ್ಯಕ್ಕೆ ಬಂದ ಅವರು ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಮತ್ತು ಸ್ಥಳೀಯರಾದ ದೇವಿಪ್ರಸಾದ್ ಬಡ್ಡಡ್ಕ ರವರೊಂದಿಗೆ ಆಕೆಯ ಮನೆಗೆ ತೆರಳಿ ಮಾನಸಿಕ ಖಿನ್ನತೆ ಗೊಳಗಾಗಿರುವ ಆಕೆಯ ಮನವೊಲಿಸಿ ಚಿಕಿತ್ಸೆಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಸುಳ್ಯ ಸಿ.ಡಿ.ಪಿ.ಒ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ದೀಪಿಕಾ ರವರು ಜತೆಯಲ್ಲಿದ್ದರು.

ಮಹಿಳೆಯ ಬೀಳುವ ಸ್ಥಿತಿಯಲ್ಲಿ ಇರುವ ಮನೆಯನ್ನು ಕಡೆವಿ ಹೊಸ ಮನೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಯೋಜನೆ ವತಿಯಿಂದ ಅದೇ ಜಾಗದಲ್ಲಿ ನಿರ್ಮಿಸಿಕೊಡುವುದಾಗಿ ಸೇವಾ ಪ್ರತಿನಿಧಿ ಶಕುಂತಲಾ ಮತ್ತು ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ದೇವಿಪ್ರಸಾದ್ ಬಡ್ಡಡ್ಕರವರು ಈ ಸಂದರ್ಭದಲ್ಲಿ ಸುದ್ದಿಗೆ ತಿಳಿಸಿದರು.
ಪಂಚಾಯತ್ ಸಿಬ್ಬಂದಿ ರವಿಕುಮಾರ್ ರವರು ಉಪಸ್ಥಿತರಿದ್ದರು. ಮಹಿಳೆಯಸಂಬಂಧಿಕರಾದ ಗಿರೀಶ್ ಕುಡೆಂಬಿ ಮತ್ತು ಕುಸುಮಾಧರ ಆಡಿಂಜ ರವರು ಮಹಿಳೆಗೆ ಆಶ್ರಯ ನೀಡಿ ಚಿಕಿತ್ಸೆ ಕೊಡಿಸಲು ಮುಂದಾದ ಸೇವಾ ಕೇಂದ್ರದವರಿಗೆ ಧನ್ಯತೆಯನ್ನು ಸಲ್ಲಿಸಿದರು.


ಪುತ್ತೂರಿನಿಂದ ಬಂದ ಉಮೇಶ್ ನಾಯಕ್ ರವರ ಕಾರಿನಲ್ಲಿ ತೇಜಕುಮಾರಿ ಯವರನ್ನು ಮನೆಯಿಂದ ಕರೆದುಕೊಂಡು ಬಂದು ಸುಳ್ಯದ ಉಡುಪಿ ಗಾರ್ಡನ್ ಹೋಟೆಲ್ ನಲ್ಲಿ ಊಟ ಮಾಡಿಸಿ ನಂತರ ಪುತ್ತೂರಿಗೆ ಕರೆದುಕೊಂಡು ಹೋಗಲಾಯಿತು. ಜತೆಯಲ್ಲಿ ಸಿ.ಡಿ.ಪಿ.ಒ ಇಲಾಖೆಯ ದೀಪಿಕಾ ರವರು ತೆರಳಿದ್ದರು.

ಪುನರ್ವಸತಿ ಕೇಂದ್ರದ ಸೇವಾ ಕಾರ್ಯವನ್ನು ಶ್ಲಾಘಿಸಿದ ಪುತ್ತೂರಿನ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ ಹಾಗೂ ಕಾರ್ಯದರ್ಶಿ ವಚನ ಜಯರಾಮ್ ರವರು ತೇಜಕುಮಾರಿಯವರ ತುರ್ತು ಚಿಕಿತ್ಸೆಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ ಎಂದು ಉಮೇಶ್ ನಾಯಕ್ ರವರು ತಿಳಿಸಿದರು.