ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ ದಸರಾ – 2024

0

53ನೇ ವರ್ಷದ ಶ್ರೀ ಶಾರದಾಂಬ ಉತ್ಸವದ ಎಲ್ಲಾ ಸಮಿತಿಯ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ

ತಾಲೂಕಿನ ಪ್ರತಿಯೊಂದು ಸಂಘ -ಸಂಸ್ಥೆಗಳು ಹಾಗೂ ಜನತೆಯ ಒಗ್ಗೂಡುವಿಕೆಯಲ್ಲಿ ವಿಶೇಷ ದಸರಾ ಆಗಿ ಹೊರಹೊಮ್ಮಬೇಕು: ಡಾ. ಡಿ.ವಿ. ಲೀಲಾಧರ್

ಮಕ್ಕಳ ಮತ್ತು ಮಹಿಳಾ ದಸರಾ ಸೇರಿದಂತೆ ಒಂಭತ್ತು ದಿನವೂ ಅದ್ಧೂರಿ ಕಾರ್ಯಕ್ರಮ ನಡೆಸಲು ಸಿದ್ಧತೆ

ನೂತನ ಮಹಿಳಾ ಸಮಿತಿಯ ರಚನೆ

ಸುಳ್ಯದಲ್ಲಿ 1972ರಲ್ಲಿ ಆರಂಭಗೊಂಡ ಶ್ರೀ ಶಾರದಾಂಬ ಉತ್ಸವ ಕಳೆದ 52 ವರ್ಷಗಳಿಂದ ಅದ್ಧೂರಿಯಾಗಿ ಮುಗಿಸಿದ್ದು ಈ ಬಾರಿ 53ನೇ ವರ್ಷದ ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ – ದಸರಾ ಕಾರ್ಯಕ್ರಮಕ್ಕೆ ಉತ್ಸವ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿಕೊಂಡು ಸಿದ್ಧತೆಗಳು ನಡೆಯುತ್ತಿದ್ದು, ಪೂರ್ವಭಾವಿ ಸಭೆಯು ಸುಳ್ಯದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ಜು.17ರಂದು ಸಂಜೆ ನಡೆಯಿತು.

ಈ ಸಭೆಯಲ್ಲಿ ನೂತನ ಮಹಿಳಾ ಸಮಿತಿಯನ್ನು ರಚಿಸಲಾಗಿದ್ದು, ಮಹಿಳಾ ಸಮಿತಿ ನೂತನ ಅಧ್ಯಕ್ಷರಾಗಿ ನ.ಪಂ. ಸದಸ್ಯೆ ಶ್ರೀಮತಿ ಶಶಿಕಲಾ ನೀರಬಿದಿರೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀದೇವಿ ನಾಗರಾಜ್ ಭಟ್ ಅವರನ್ನು ಆಯ್ಕೆ ಮಾಡಲಾಯಿತು.

53ನೇ ವರ್ಷದ ಉತ್ಸವ ಸಮಿತಿ ಅಧ್ಯಕ್ಷ ಡಾ. ಲೀಲಾಧರ್ ಡಿ.ವಿ. ಅವರು ಮಾತನಾಡಿ ಈ ಬಾರಿಯ ನಾಡಹಬ್ಬ ಶ್ರೀ ಶಾರದಾಂಬ – ದಸರಾ ಸುಳ್ಯ ತಾಲೂಕಿನ ಪ್ರತಿಯೊಂದು ಸಂಘ -ಸಂಸ್ಥೆಗಳು, ಧಾರ್ಮಿಕ ಸಂಘಟನೆಯ, ತಾಲೂಕಿನ ಜನತೆಯ ಒಗ್ಗೂಡುವಿಕೆಯಲ್ಲಿ ವಿಶೇಷ ದಸರಾ ಆಗಿ ಹೊರಹೊಮ್ಮಬೇಕು. ದಸರಾವನ್ನು ಎಲ್ಲಾ ಒಂಭತ್ತು ದಿ‌ನಗಳೂ ಕೂಡ ಅದ್ಧೂರಿಯಾಗಿ ಆಚರಣೆ ಮಾಡುವುದಾಗಿ ತಿಳಿಸಿದರಲ್ಲದೇ, ಈ ಬಾರಿ ವಿಶೇಷವಾಗಿ ಒಂದು ದಿನ ಮಹಿಳಾ ಮತ್ತು ಮಕ್ಕಳ ದಸರಾ ಆಚರಿಸಲಾಗುವುದು ಜೊತೆಗೆ ದಸರಾದ ಒಂಭತ್ತು ದಿನಗಳೂ ರಾತ್ರಿ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗುವುದು, ಜೊತೆಗೆ ದಸರಾದ ಒಂಭತ್ತು ದಿನಗಳೂ ಸುಳ್ಯ ಪೇಟೆಯಲ್ಲಿರುವ ಎಲ್ಲಾ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡುವ ಕುರಿತಂತೆ ಆಯಾ ಕಟ್ಟಡದ ಮಾಲಕರಿಗೆ ವಿನಂತಿಸಿಕೊಳ್ಳಲಾಗುವುದು ಎಂದು ತಿಳಿಸಿದರು.


ವೇದಿಕೆಯಲ್ಲಿ ದಸರಾ ಉತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಗೌರವ ಸಲಯೆಗಾರರಾದ ಎನ್.ಎ. ರಾಮಚಂದ್ರ, ಎನ್. ಜಯಪ್ರಕಾಶ್ ರೈ, ಕೋಶಾಧಿಕಾರಿ ಗಣೇಶ್ ಆಳ್ವ, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್, ಅಧ್ಯಕ್ಷ ನಾರಾಯಣ ಕೇಕಡ್ಕ, ಖಜಾಂಜಿ ಅಶೋಕ್ ಪ್ರಭು, ಮಹಿಳಾ ಸಮಿತಿ ನೂತನ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಪ್ರಧಾನ ಕಾರ್ಯದರ್ಶಿ ಶ್ರೀದೇವಿ ನಾಗರಾಜ್ ಭಟ್ ಉಪಸ್ಥಿತರಿದ್ದರು.