ದೊಡ್ಡತೋಟ – ಮರ್ಕಂಜ ರಸ್ತೆಯ ದೊಡ್ಡತೋಟದ ಬಳಿ ಅಪಘಾತವನ್ನು ಕಾಯುತ್ತಿರುವ, ಅಪಾಯವನ್ನು ಆಹ್ವಾನಿಸುತ್ತಿರುವ ರಸ್ತೆ ಬದಿಯ ಹೊಂಡಗಳು

0

ರಸ್ತೆ ಬದಿಯ ಕಾಡು ಕಡಿಯಲಿಲ್ಲ – ರಸ್ತೆ ದುರಸ್ಥಿಯೂ ಆಗಿಲ್ಲ

ಕುರುಡು ನೆಪವೊಡ್ಡಿ ಕುಳಿತಿದೆಯಾ ಲೋಕೋಪಯೋಗಿ ಇಲಾಖೆ?

ರಸ್ತೆ ದುರಸ್ಥಿ ಗೊಳಿಸದ ಇಲಾಖೆಯ ಮೇಲೆ ಫಲಾನುಭವಿಗಳ ಆಕ್ರೋಶ

ದೊಡ್ಡತೋಟ – ಮರ್ಕಂಜ ರಸ್ತೆಯ ದೊಡ್ಡತೋಟ ಎಂಬಲ್ಲಿ ನಿರ್ಮಾಣ ವಾಗಿರುವ ರಸ್ತೆ ಬದಿಯ ಹೊಂಡಗಳು‌ ಅಪಘಾತಕ್ಕೆ ಕಾಯುತ್ತಿದೆ ಮತ್ತು ಅಪಾಯವನ್ನು ಆಹ್ವಾನಿಸುತ್ತಿದೆ.

ಇದೇ ರಸ್ತೆಯ ದೊಡ್ಡತೋಟ ತಿರುವಿನಲ್ಲಿ ಇರುವ ಮನೆಯ ಬಳಿಯ ಬರೆ ಕಳೆದ ಕೆಲ ವರ್ಷದ ಹಿಂದೆ ಕುಸಿದು ಚರಂಡಿ‌ ಬ್ಲಾಕ್‌ ಆಗಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿಯೂ ವರದಿ ಪ್ರಕಟಗೊಂಡಿತ್ತು.‌ ಈ ರಸ್ತೆ ಪಿಡಬ್ಲ್ಯಡಿ ಇಲಾಖೆಗೆ ಸೇರಿದ್ದಾಗಿದ್ದು, ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಜರಿದ ಸ್ಥಳದಲ್ಲಿ ಇಲಾಖೆ ವತಿಯಿಂದ ತಡೆಗೋಡೆ ನಿರ್ಮಿಸಿ ಚರಂಡಿ ಸರಿ ಪಡಿಸದೆ ಇದ್ದ ಕಾರಣ ಮಳೆ ನೀರು ರಸ್ತೆಯಲ್ಲಿ ಹರಿದು ರಸ್ತೆ ಬದಿಯ ಮಣ್ಣು ಕೊರೆದುಕೊಂಡು‌ ಹೋಗಿ ಭಾರೀ ಗಾತ್ರದ ಹೊಂಡಗಳು ನಿರ್ಮಾಣವಾಗಿದೆ.‌ ಇಲ್ಲಿ ದಿನನಿತ್ಯ ನೂರಕ್ಕೂ ಹೆಚ್ಚು ವಾಹನಗಳು ಚಲಿಸುತ್ತಿದ್ದು, ವಿರುದ್ಧ ದಿಕ್ಕಿನಿಂದ ಬಂದ ವಾಹನಕ್ಕೆ ಸೈಡ್ ಕೊಡಲು ಸ್ಥಳವಕಾಶವಿಲ್ಲದಾಗಿದೆ. ದ್ವಿಚಕ್ರ ವಾಹನದವರು ಸ್ವಲ್ಪ ತಪ್ಪಿದರೂ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.


ಇದೇ ರಸ್ತೆಯ ಮರ್ಕಂಜದವರೆಗೆ ರಸ್ತೆ ಬದಿಯ ಕಾಡು ಕಡಿಯುವುದು ಮತ್ತು‌ ರಸ್ತೆ ದುರಸ್ಥಿ ಮಾಡುವುದು ನಡೆಯದೇ ಇರುವುದರಿಂದ ಮಳೆಗಾಲದಲ್ಲಿ ರಸ್ತೆ ಇನ್ನಷ್ಟು ಹದಗೆಟ್ಟಿದೆ. ಕೆಲವು ಕಡೆಗಳಲ್ಲಿ‌ ರಸ್ತೆ ಸಂಪೂರ್ಣ ಹೊಂಡಮಯವಾಗಿದೆ. ಈ ಬಗ್ಗೆ ಮರ್ಕಂಜ ಗ್ರಾಮಸಭೆಯಲ್ಲಿಯೂ ರಸ್ತೆ ದುರಸ್ಥಿ ಮಾಡುವಂತೆ, ಕಾಡು ಕಡಿಯುವಂತೆ ಒತ್ತಾಯಗಳು ಕೇಳಿಬಂದಿತ್ತು.‌ ಅಲ್ಲದೇ ಮರ್ಕಂಜ ಪಂಚಾಯತ್ ಸದಸ್ಯರೂ ಈ ಬಗ್ಗೆ ಇಲಾಖೆಯವರೊಂದಿಗೆ ರಸ್ತೆ ದುರಸ್ತಿ ಮಾಡಿಕೊಡುವಂತೆ ಮನವಿ‌ ಮಾಡಿಕೊಂಡಿದ್ದರು.‌ ಈ ರಸ್ತೆ ಮರ್ಕಂಜ, ನೆಲ್ಲೂರು ಕೆಮ್ರಾಜೆ, ಅಮರ ಮುಡ್ನೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದರೂ, ಈ ಭಾಗದವರು ರಸ್ತೆ ಸರಿ ಪಡಿಸುವಂತೆ ಮನವಿ ಮಾಡುತ್ತಲೇ ಇದ್ದರೂ ಇಲಾಖೆ ಮಾತ್ರ ಕೇಳಿಯೂ ಕೇಳಿಸದಂತೆ, ಕಣ್ಣಿದ್ದು ಕುರುಡಾದಂತೆ ವರ್ತಿಸುತ್ತಿದೆ ಎಂದು ಇದೀಗ ಈ ಭಾಗದ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.