ಭಾರೀ ಮಳೆಗೆ ಮಹಿರಾವಣ ಧರೆಗೆ

0

ರಂಗಮನೆಯ ಯಕ್ಷ ಪ್ರತಿಮೆಗೆ ಸಂಪೂರ್ಣ ಹಾನಿ

ಕಲಾ ಜಗತ್ತಿನ ಮೊದಲ ಯಕ್ಷ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಅಂಗಳದಲ್ಲಿ ತಲೆಎತ್ತಿ ನಿಂತಿದ್ದ 15 ಅಡಿ ಎತ್ತರದ ಯಕ್ಷಪ್ರತಿಮೆ ಮೊನ್ನೆಯ ಗಾಳಿಮಳೆಗೆ ಧರೆಗುರುಳಿದೆ.


2004 ರಲ್ಲಿ ಯಕ್ಷಗಾನದ ಹಿರಿಯ ವೇಷಧಾರಿ ದಿ| ಬಣ್ಣದ ಮಹಾಲಿಂಗರ ನೆನಪಿಗಾಗಿ ಸ್ಥಾಪಿಸಲ್ಪಟ್ಟ ಮಹಿರಾವಣ ವೇಷದ ಈ ಯಕ್ಷಪ್ರತಿಮೆ ರಂಗಮನೆಯ ಕಲಾತ್ಮಕತೆಯ ಒಂದು ಭಾಗವಾಗಿತ್ತು. ರಾಜ್ಯದ ಕಲಾಭಿಮಾನಿಗಳ ಆಕರ್ಷಣೆಯ ಶಿಲ್ಪವಾಗಿತ್ತು. ಇದನ್ನು ದಿ| ವಿಠಲ ಪುತ್ತೂರು ನಿರ್ಮಿಸಿದ್ದರು.
ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಗೆ ಪ್ರತಿಮೆಯು ತಳಪಾಯದಿಂದಲೇ ವಾಲಿದ ಪರಿಣಾಮ ರಂಗಮನೆಯ ಆವರಣ ಗೋಡೆಗೂ ಬಹಳ ಹಾನಿಯಾಗಿದೆ.
ಸ್ಥಳಕ್ಕೆ ಸುಳ್ಯದ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್ , ನಗರ ಪಂಚಾಯತ್ ಸದಸ್ಯರಾದ ಬುದ್ದನಾಯ್ಕ ಸೇರಿದಂತೆ ಅನೇಕರು ಭೇಟಿ ನೀಡಿದ್ದಾರೆ.

ತಕ್ಷಣ ಮರು ನಿರ್ಮಾಣ ಕೆಲಸ ಆರಂಭ

ಬಣ್ಣದ ಮಾಲಿಂಗರು ‘ಯಕ್ಷದ್ರೋಣ’ ಅಂತನೇ ಪ್ರಸಿದ್ದಿ ಪಡೆದವರು. ಈ ಶಿಲ್ಪ ಸ್ಫಾಪಿತವಾದ ಮೂರೇ ತಿಂಗಳಲ್ಲಿ ಅವರು ಅಸುನೀಗಿದರು. ನನ್ನ ತಂದೆ ಸೇರಿದಂತೆ ನಮಗೆಲ್ಲರಿಗೂ ಈ ಪ್ರತಿಮೆಯ ಮೇಲೆ ಭಾವನಾತ್ಮಕವಾದ ಪ್ರೀತಿ. ರಾಜ್ಯದ ನಾನಾ ಕಡೆಗಳಿಂದ ಆಗಮಿಸುವ ಕಲಾಸಕ್ತರಿಗೆ ರಂಗಮನೆಯ ಆ ಜಾಗ ನೋಡಲು ಖಾಲಿ ಅನಿಸಬಾರದು. ಹಾಗಾಗಿ ಇಂದಿನಿಂದಲೇ ಅದೇ ರೀತಿಯ ಬೃಹತ್ ಯಕ್ಷ ಪ್ರತಿಮೆಯನ್ನು ಇನ್ನಷ್ಟು ಭದ್ರವಾಗಿ ರಚಿಸಲು ಇಂದೇ ಕೆಲಸ ಆರಂಭಿಸಿದ್ದೇನೆ. ಕುಂಬಳೆಯ ಪ್ರಸಿದ್ಧ ಶಿಲ್ಪಿ ವೇಣುಗೋಪಾಲ ಆಚಾರ್ಯ ಮತ್ತು ಅವರ ತಂಡದ ಕಲಾವಿದರು ಪ್ರತಿಮೆಯನ್ನು ನಿರ್ಮಿಸಲಿದ್ದಾರೆ. ಇನ್ನೆರಡು ತಿಂಗಳಲ್ಲಿ ಬಣ್ಣದ ಮಾಲಿಂಗರ ಮಹಿರಾವಣ ವೇಷವು ಹೊಸ ರೂಪದೊಂದಿಗೆ ರಂಗಮನೆಯಲ್ಲಿ ತಲೆಎತ್ತಿ ನಿಲ್ಲಲಿದೆ.
—– ಜೀವನ್ ರಾಂ ಸುಳ್ಯ