ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ವೈದ್ಯಾಧಿಕಾರಿಗಳು ಮಾತುಕತೆ ನಡೆಸಿದ ಪರಿಣಾಮವಾಗಿ ಸುಳ್ಯ ಸರಕಾರಿ ಆಸ್ಪತ್ರೆಯ ಕರೆಯ ಮೇರೆಗೆ ಬರುವ ಪ್ರಸೂತಿ ತಜ್ಞೆಯಾಗಿರುವ ಡಾ. ವೀಣಾ ರವರು ಜು.16 ರಿಂದ ಸರಕಾರಿ ಆಸ್ಪತ್ರೆಗೆ ಕರ್ತವ್ಯಕ್ಕೆ ಮರು ಹಾಜರಾಗಿರುವುದಾಗಿ ತಿಳಿದುಬಂದಿದೆ.
ತನ್ನ ಮೇಲೆ ಬಂದ ಆರೋಪದಿಂದ ಮನನೊಂದಿದ್ದ ಡಾ.ವೀಣಾರವರು ಆಸ್ಪತ್ರೆಗೆ ಕರ್ತವ್ಯಕ್ಕೆ ಬಾರದೆ ಗೈರುಹಾಜರಾಗಿದ್ದರು. ಅವರ ಮನವೊಲಿಕೆಯ ಪ್ರಯತ್ನಗಳು ನಡೆದಿದ್ದರೂ ಡಾ.ವೀಣಾ ಒಪ್ಪಿರಲಿಲ್ಲ. ತನ್ನ ಮೇಲೆ ಆರೋಪ ಮಾಡುವ ಸರಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಗಳು ಆರೋಪಗಳನ್ನು ಹಿಂತೆಗೆದುಕೊಳ್ಳಬೇಕೆಂದು ಅವರು ಷರತ್ತು ಹಾಕಿದ್ದರು.
ಜು.6ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುಳ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಕರೆ ಆಧಾರದಲ್ಲಿರುವ ಪ್ರಸೂತಿ ತಜ್ಞೆ ಡಾ.ವೀಣಾರವರು ಕರ್ತವ್ಯಕ್ಕೆ ಬಾರದಿರುವ ವಿಚಾರ ತಿಳಿದು, ಪೂರ್ಣಾವಧಿ ಸರಕಾರಿ ಪ್ರಸೂತಿ ತಜ್ಞ ವೈದ್ಯರ ನೇಮಕಾತಿ ಸರಕಾರದಿಂದ ಸದ್ಯಕ್ಕೆ ಅಸಾಧ್ಯವಾಗಿರುವುದರಿಂದ ಡಾ.ವೀಣಾರವರ ಮನವೊಲಿಸುವಂತೆ ಹೇಳಿದ್ದರು. ಅದರಂತೆ ವೈದ್ಯಾಧಿಕಾರಿಗಳು ಡಾ.ವೀಣಾರವರ ಜತೆ ಮಾತನಾಡಿದ್ದು ಜು.16ರಿಂದ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆಂದು ತಿಳಿದುಬಂದಿದೆ. ಹಲವು ಮಂದಿ ಸಾರ್ವಜನಿಕರು ಕೂಡ ಡಾ.ವೀಣಾರಲ್ಲಿ ಕರ್ತವ್ಯಕ್ಕೆ ಸರಕಾರಿ ಆಸ್ಪತ್ರೆಗೆ ಬರುವಂತೆ ವಿನಂತಿ ಮಾಡಿಕೊಂಡಿದ್ದರೆಂದು ತಿಳಿದುಬಂದಿದೆ.