ಜಾನವಾರುಗಳಿಗೆ ಲಿಂಗ ಆಧಾರಿತ ವೀರ್ಯ ನಳಿಕೆಗಳು ಲಭ್ಯ

0

ಕೃತಕ ಗರ್ಭಧಾರಣೆಯ ಕಾರ್ಯಕ್ರಮದಲ್ಲಿ ಪ್ರಸ್ತುತ ಬಳಕೆಯಾಗುತ್ತಿರುವ ವೀರ್ಯ ನಳಿಕೆಗಳಲ್ಲಿ ಹುಟ್ಟುವ ಕರುವಿನ ಲಿಂಗವನ್ನು ನಿರ್ಧಾರ ಮಾಡುವುದು ಸಾಧ್ಯವಿರುವುದಿಲ್ಲ ಮತ್ತು ಹೋರಿ ಕರುಗಳ ಜನನದಿಂದಾಗಿ ರೈತರಿಗೆ ಬಹಳಷ್ಟು ಆರ್ಥಿಕ ನಷ್ಟ ಮತ್ತು ರೈತರು ಈ ಹೋರಿಗಳನ್ನ ಬೀಡಾಡಿಯಾಗಿ ಬಿಡುವುದರಿಂದ ಉತ್ಪನ್ನ ವಾಗುವ ಸಮಸ್ಯೆಗಳಿಗೆ ಪರಿಹಾರ ಇಲ್ಲದಂತಾಗಿರುತ್ತದೆ. ಅದಲ್ಲದೆ ಜಾನುವಾರು ಹತ್ಯೆ ನಿಷೇಧ ಕಾಯ್ದೆಯಡಿಯಲ್ಲಿ ಜಾನುವಾರುಗಳ ಸಾಗಾಟವನ್ನು ವ್ಯವಸ್ಥಿತಗೊಳಿಸಿರುವ ಹಿನ್ನೆಲೆಯಲ್ಲಿ ರೈತರಿಗೆ ಗಂಡು ಕರುಗಳನ್ನು ಸಾಕುವುದು ಕಷ್ಟಕರವಾಗಿರುತ್ತದೆ. ಆದ್ದರಿಂದ ಇದಕ್ಕೆ ಪರಿಹಾರವೆಂಬಂತೆ ಸರ್ಕಾರ ಇದೀಗ ಲಿಂಗ ನಿರ್ಧಾರಿತ ವೀರ್ಯನಳಿಕೆಗಳ ಸರಬರಾಜು ಮಾಡುತ್ತಿದೆ.

ಸುಳ್ಯ ತಾಲೂಕಿನಲ್ಲಿ ಈ ಸೇವೆಯು ಹಿಂದಿನಂತೆಯೇ ಮತ್ತೊಮ್ಮೆ ಲಭ್ಯವಿದ್ದು ತಾಲೂಕಿನ ಪಶು ಆಸ್ಪತ್ರೆ ಮತ್ತು ಪಶು ಚಿಕಿತ್ಸಾಲಯಗಳಲ್ಲಿ ಈ ಸೇವೆ ಲಭ್ಯವಿದೆ. ಲಿಂಗ ನಿರ್ಧಾರಿತ ವೀರ್ಯ ನಳಿಕೆಗಳ ಉಪಯೋಗದಿಂದ ಶೇಕಡ 90ರಷ್ಟು ಹೆಣ್ಣು ಕರುಗಳೇ ಜನಿಸುವುದರಿಂದ ರೈತರಿಗೆ ಬಹಳಷ್ಟು ಉಪಯೋಗವಾಗಲಿದೆ.

ಈ ಸೇವೆಯನ್ನು ಪಡೆಯಲು ರೈತರ ಜಾನುವಾರುಗಳು ಕಡ್ಡಾಯವಾಗಿ 12 ಅಂಕೆಗಳುಳ್ಳ ಕಿವಿ ಓಲೆಯನ್ನು ಹೊಂದಿರಬೇಕು. ಈ ಮಾಹಿತಿಯು ಇನಾಫ್ ತಂತ್ರಾಂಶದಲ್ಲಿ ಲಭ್ಯವಿರಬೇಕು. ಪ್ರಸ್ತುತ ಹೆಚ್ಎಫ್ ಮತ್ತು ಜರ್ಸಿ ಮಿಶ್ರತಳಿಯ ಜಾನುವಾರುಗಳಿಗೆ ಮಾತ್ರ ಈ ಸೇವೆ ಲಭ್ಯವಿದ್ದು ಈ ಜಾನುವಾರುಗಳು ಕನಿಷ್ಠ ದಿನಕ್ಕೆ 10 ಲೀಟರ್ ಗಿಂತ ಹೆಚ್ಚಿನ ಹಾಲನ್ನು ಹಿಂಡುತ್ತಿರಬೇಕು. ಈ ಸೇವೆಯನ್ನು ಪಡೆಯಲು ರೈತರು ಪ್ರತಿ ಲಿಂಗ ನಿರ್ಧಾರಿತ ವೀರ್ಯ ನಳಿಕೆಗೆ ರೂಪಾಯಿ 250ನ್ನು ಪಾವತಿಸಬೇಕಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶು ವೈದ್ಯಕೀಯ ಆಸ್ಪತ್ರೆ ಅಥವಾ ಪಶು ಚಿಕಿತ್ಸಾಲಯಗಳನ್ನು ಅಥವಾ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಪಶು ಸಂಗೋಪನಾ ಇಲಾಖಾ ಆಡಳಿತ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ತಿಳಿಸಿದ್ದಾರೆ.