ಅಗಲಿದ ರಾಮಚಂದ್ರ ಪ್ರಭುರವರಿಗೆ ನೆಲ್ಲೂರು ಕೆಮ್ರಾಜೆ ಸೊಸೈಟಿ ಮತ್ತು ಗ್ರಾಮ ಪಂಚಾಯತ್ ವತಿಯಿಂದ‌ ಶ್ರದ್ಧಾಂಜಲಿ ಸಭೆ

0

ಪಿಗ್ಮಿ ಸಂಗ್ರಹ ವೃತ್ತಿ ಯನ್ನು ಪ್ರೀತಿಯಿಂದ ಮಾಡುತ್ತಿದ್ದ ಪ್ರಾಮಾಣಿಕರೊಬ್ಬರನ್ನು ಕಳೆದುಕೊಂಡಿದ್ದೇವೆ : ವಿಷ್ಣು ಭಟ್ ಮೂಲೆತೋಟ

ಪಂಚಾಯತ್ ನಲ್ಲಿ ಉತ್ತಮ ಒಡನಾಡಿಯಾಗಿದ್ದರು : ಧನಂಜಯ ಕುಮಾರ್

ಜು.22ರಂದು ಬಸ್ಸು ಮತ್ತು ದ್ವಿಚಕ್ರ ವಾಹನಗಳ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಪಿಗ್ಮಿ ಸಂಗ್ರಾಹಕ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಪ್ರಭುರವರಿಗೆ ಶ್ರದ್ಧಾಂಜಲಿ ಸಭೆಯು ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ‌ ನಡೆಯಿತು.

ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ನ ಜಂಟಿ ಆಶ್ರಯದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಆರಂಭದಲ್ಲಿ ರಾಮಚಂದ್ರ ಪ್ರಭುಗಳ ಭಾವಚಿತ್ರಕ್ಕೆ ಪುಷ್ಪರ್ಚನೆ ಗೈಯಲಾಯಿತು.

ಬಳಿಕ ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಮಾತನಾಡಿ “ರಾಮಚಂದ್ರ ಪ್ರಭುಗಳು ಪ್ರಾಮಾಣಿಕವಾಗಿ ದುಡಿಯುತ್ತಿದ್ದರು. ಅವರು ತನ್ನ ವೃತ್ತಿಯನ್ನು ಪ್ರೀತಿಸುತ್ತಿದ್ದರು. ಪಿಗ್ಮಿ ಸಂಗ್ರಹದ ಆರಂಭದಿಂದಲೇ ಈ ವೃತ್ತಿಯನ್ನು ಒಪ್ಪಿಕೊಂಡು ಅಪ್ಪಿಕೊಂಡಿದ್ದರು. ಇವರ ಜೀವನ ತೆರೆದ ಪುಸ್ತಕದಂತಿತ್ತು. ಸಾರ್ವಜನಿಕ ಜೀವನದಲ್ಲಿಯೂ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡು ಸಂತುಷ್ಟರಾಗಿದ್ದರು ಎಂದು ಹೇಳಿದರು.

ನೆಲ್ಲೂರು ಕೆಮ್ರಾಜೆ ಪಂಚಾಯತ್ ಅಧ್ಯಕ್ಷ ಧನಂಜಯ ಮಾತನಾಡಿ ಪ್ರಭುಗಳು ಪಂಚಾಯತ್ ನೊಂದಿಗೆ ಉತ್ತಮ ಒಡನಾಡಿಯಾಗಿದ್ದರು. ಎಷ್ಟೆ ಕಾರ್ಯಕ್ರಮಗಳಿದ್ದರೂ, ಪಂಚಾಯತ್ ಮೀಟಿಂಗ್ ಇದ್ದರೂ 2.30ಕ್ಕೆ ಹೋಗಿ ಆಗುತ್ತಿತ್ತು. ಅಷ್ಟೊಂದು ಅವರು ತನ್ನ ವೃತ್ತಿಯನ್ನು ಪ್ರೀತಿಸುತ್ತಿದ್ದರು. ಅನೇಕ ಸಮಸ್ಯೆಗಳಿಗೆ ಸ್ಪಂಧಿಸುತ್ತಾ ಕಾಣದ ಕೈ ಯಾಗಿ ಕೆಲಸ ಮಾಡಿದ್ದಾರೆ ಎಂದರು.

ರಾಮಚಂದ್ರ ಪ್ರಭುಗಳ ಬಗ್ಗೆ‌ ಸಾಹಿತಿ‌ ಜಿ.ಎಸ್.ಉಬರಡ್ಕ, ಸೊಸೈಟಿ ನಿರ್ದೇಶಕ ಉಮೇಶ್ ಪ್ರಭು, ನೆಲ್ಲೂರು ಕೆಮ್ರಾಜೆ ಗ್ರಾ.ಪಂ.ಸದಸ್ಯ ವೇಣುಗೋಪಾಲ ಪುನುಕುಟ್ಟಿ, ನಿವೃತ್ತ ಸಿಇಒ ಜಗನ್ನಾಥ ಶೆಟ್ಟಿ ಉಬರಡ್ಕ, ಮಾಜಿ ಅಧ್ಯಕ್ಷ ದಿವಾಕರ ನಾಯಕ್ ಎರ್ಮೆಟ್ಟಿ ಹಾಗೂ ಅನಂತ ಭಟ್ ಕನಿಯಾಲ, ಹೇಮನಾಥ ಕೋಡ್ತುಗುಳಿ ಮಾತನಾಡಿದರು.

ಬಳಿಕ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕರು, ಗ್ರಾ.ಪಂ. ಸದಸ್ಯರು ಊರುವರು ಉಪಸ್ಥಿತರಿದ್ದರು.