ಸುಳ್ಯ ನಗರ ಪಂಚಾಯತ್ ಹಾಗೂ ಮಾಜಿ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯ ದಿನಾಚರಣೆ

0

ಸುಳ್ಯ ನಗರ ಪಂಚಾಯತ್ ಹಾಗೂ ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನಗರ ಪಂಚಾಯತ್ ಆವರಣದಲ್ಲಿರುವ ಜೈ ಜವಾನ್ ಸ್ಮಾರಕ ಬಳಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.

ಸುಳ್ಯ ಗ್ರೇಡ್ 2 ತಹಶಿಲ್ದಾರ್ ಮಂಜುನಾಥ್ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲರೂ ಸ್ಮಾರಕಕ್ಕೆ ಗೌರವ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷರು ಮಾತನಾಡಿ ‘1999 ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಸ್ಮರಿಸುವ ದಿನ ಇಂದು. ಕಾರ್ಗಿಲ್, ಲಡಾಖ್‌ನಲ್ಲಿ ಈ ಹಿಂದೆ ಪಾಕಿಸ್ತಾನಿ ಪಡೆಗಳು ವಶಪಡಿಸಿಕೊಂಡಿದ್ದ ಆಯಕಟ್ಟಿನ ಪ್ರಮುಖ ಪ್ರದೇಶವನ್ನು ಭಾರತೀಯ ಸೇನೆಯು ಪುನಃ ಪಡೆದುಕೊಂಡ ದಿನ.
ಈ ದಿನವು ದೇಶದ ಸಾರ್ವಭೌಮತ್ವವನ್ನು ಶೌರ್ಯದಿಂದ ರಕ್ಷಿಸಿದ ಭಾರತೀಯ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು, ಅವರ ಬಲಿದಾನವನ್ನು ಕೊಂಡಾಡುವ ಹಾಗೂ ಭಾರತೀಯರೆಲ್ಲರೂ ಹೆಮ್ಮೆಯಿಂದ ಸ್ಮರಿಸುವ ದಿನವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ವಿನಯಕುಮಾರ್ ಕಂದಡ್ಕ ರವರು ಮಾತನಾಡಿ ಈ ದಿನವನ್ನು ಭಾರತೀಯರೆಲ್ಲರೂ ಅತ್ಯಂತ ಸಂತೋಷದಿಂದ ಆಚರಿಸುವ ಮತ್ತು ಕೊಂಡಾಡುವ ದಿನವಾಗಿದೆ.


ವಿಶೇಷವಾಗಿ ಕಾರ್ಗಿಲ್ ಯುದ್ಧದಲ್ಲಿ ಇದಕ್ಕಿಂತ ಮೊದಲು ನಡೆದಿದ್ದ ಎಲ್ಲಾ ಯುದ್ಧಗಳಂತೆ ಆಗಿರಲಿಲ್ಲ. ಕಾರಣ ಕೆಲವು ಯುದ್ಧಗಳಲ್ಲಿ ಯುದ್ಧದ ಸಂದರ್ಭದಲ್ಲಿ ಬೇರೆ ದೇಶಗಳ ಮಾತಿಗೆ ಮಣಿದು ಯುದ್ಧಕ್ಕೆ ವಿರಾಮ ನೀಡುವಂತಹ ಪರಿಸ್ಥಿತಿ ಬಂದಿತ್ತು. ಆದರೆ ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶದ ಒಂದು ಇಂಚು ನೆಲವನ್ನು ಬಿಟ್ಟುಕೊಡದೆ ಅದನ್ನು ವಶ ಪಡಿಸಿಕೊಳ್ಳುವವರೆಗೆ ಯುದ್ಧವನ್ನು ಕೈಬಿಡದೆ ಗುರಿಯನ್ನು ಮುಟ್ಟಿದ ಯುದ್ಧವಾಗಿದೆ. ಕಾರ್ಗಿಲ್ ಲಡಾಕ್ ಎಂಬ ಸ್ಥಳಗಳು 0.48 ಡಿಗ್ರಿ ತಾಪಮಾನ ಹೊಂದಿದ ಚಳಿಯ ಪ್ರದೇಶವಾಗಿದ್ದು ಇಂತಹ ಪ್ರದೇಶದಲ್ಲಿ ನಿಂತು ನಮ್ಮ ದೇಶದ ಸೈನಿಕರು ಶತ್ರುಗಳ ಸಂಹಾರ ಮಾಡುವುದು ನಮ್ಮ ದೇಶದ ಹಿರಿಮೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರುಗಳು,ಮುಖ್ಯ ಅಧಿಕಾರಿ ಸುಧಾಕರ್, ಸಿಬ್ಬಂದಿ ವರ್ಗದವರು, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಗದೀಶ್ ಕೆ ಪಿ, ಪ್ರಧಾನ ಕಾರ್ಯದರ್ಶಿ ಮೋನಪ್ಪ ಗೌಡ ಅಡ್ಕಬಳೆ, ಸದಸ್ಯರುಗಳಾದ ತಿರುಮಲೇಶ್ವರ ಎಸ್, ಸೀತಾ ರಾಮ ಎನ್ ಜಿ, ವೀರಪ್ಪ ಗೌಡ, ಗುರುಪ್ರಸಾದ್, ಪದ್ಮನಾಭ,ಹರೀಶ್ ಎ ಎಸ್, ಸುಧಾಕರ ಬಿ,ವಿಶ್ವನಾಥ್ ಬಾಲಚಂದ್ರ ಕೆ ಎಸ್, ಜಯರಾಮ ಜಿ ಕೆ, ವಿಘ್ನೇದರ್,ಯಶೋಧರ ಪಿ, ಸಂಜೀವ ಎಂ,ಕೃಷ್ಣಪ್ಪ ಕೆ ಮೋನಪ್ಪ, ದುಗ್ಗಪ್ಪ ಕೆ ಮೊದಲಾದವರು ಉಪಸ್ಥಿತರಿದ್ದರು.
ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್ ಸ್ವಾಗತಿಸಿ ವಂದಿಸಿದರು.