ಆರಂತೋಡಿನಲ್ಲಿ ಆಟಿ ಗೌಜಿ

0

ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ (ರಿ ), ಆರಂತೋಡು ಗ್ರಾಮ ಗೌಡ ಸಮಿತಿ, ಮಹಿಳಾ ಘಟಕ ಮತ್ತು ತರುಣ ಘಟಕದ ವತಿಯಿಂದ ಆಟಿ ಉತ್ಸವ ಜು. 28 ರಂದು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಘಟಕದ ಕಾರ್ಯದರ್ಶಿ ಭವಾನಿ ಶಂಕರ ಅಡ್ತಲೆ ಆಟಿ ಆಚರಣೆಯ ಮಹತ್ವವನ್ನು ವಿವರಿಸಿದರು.

ನಂತರ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ತೆಂಗಿನಕಾಯಿಗೆ ಕಲ್ಲು ಹೊಡೆಯವ, ಲಕ್ಕಿಗೇಮ್ , ಮಹಿಳೆಯರಿಗೆ ಶೋಭನೆ ಹಾಡು, ಮುಂಡಾಸು ಹಾಕುವ ಸ್ಪರ್ಧೆ, ಬಾಟಲಿಗೆ ಬೊಗಸೆಯಲ್ಲಿ ನೀರು ತುಂಬಿಸುವ ಸ್ಪರ್ಧೆ ಮೊದಲಾದ ಮೋಜಿನ ಮತ್ತು ಸಾಂಪ್ರದಾಯಿಕ ಆಟಗಳನ್ನು ಆಡಿಸಲಾಗಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು.

ಆರಂತೋಡು -ತೋಡಿಕಾನ ಅವಳಿ ಗ್ರಾಮದಲ್ಲಿ ಸಿಎ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾದ ಸಾಧಕ ಪವನ್ ಪಿಂಡಿಮನೆ ಅವರಿಗೆ ಗೌಡ ಗ್ರಾಮ ಸಮಿತಿಯಿಂದ ಸನ್ಮಾನಿಸಲಾಯಿತು. ಕೆ.ಆರ್ ಗಂಗಾಧರ್ ವರು ಸನ್ಮಾನ ಮಾಡಿ ಪವನ್ ರ ಸಾಧನೆಯನ್ನು ಕೊಂಡಾಡಿ “ಸಮುದಾಯದ ಯುವ ಪೀಳಿಗೆಗೇ ರೋಲ್ ಮಾಡೆಲ್ ಆಗಿದ್ದಾನೆ” ಎಂದರು.

ಮುಖ್ಯ ಅತಿಥಿಗಳಾದ ಸುಳ್ಯ ತಾಲೂಕು ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್ ಗಂಗಾಧರ್ ರವರು ಬಹುಮಾನ ವಿತರಿಸಿ ಗೌಡ ಯುವ ಸೇವಾ ಸಂಘದ ಇದುವರೆಗಿನ ಸೇವೆ ಮತ್ತು ಸಾಧನೆಯನ್ನು ತಿಳಿಸಿದರು.

ಇನ್ನೊರ್ವ ಮುಖ್ಯ ಅತಿಥಿ ಸುಳ್ಯ ಗೌಡ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು ಬಹುಮಾನ ವಿತರಿಸಿ ಮಹಿಳೆಯರು ಸಮುದಾಯದ ಏಳಿಗೆಗೆ ಯಾವ ರೀತಿಯ ಕೊಡುಗೆ ನೀಡಬಹುದು ಎಂದು ಪ್ರೇರಣಾದಾಯಕ ಮಾತುಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಗ್ರಾಮ ಗೌಡ ಸಮಿತಿಯ ಅಧ್ಯಕ್ಷ ತೀರ್ಥರಾಮ ಅಡ್ಕಬಳೆ ವಹಿಸಿದ್ದರು.

ಕಿಶೋರ್ ಕುಮಾರ್ ಕಿರ್ಲಾಯ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಗೌಡ ಸಮಿತಿಯ ಉಪಾಧ್ಯಕ್ಷ ಡಾ.ಲಕ್ಷ್ಮೀಶ್ ರವರು ವಂದಿಸಿದರು. ಆಟಿ ತಿಂಗಳ ವಿಶೇಷ ಭಕ್ಷ್ಯ ಗಳಾದ ಪತ್ರೊಡೆ, ತೀಮರೇ ಚಟ್ನಿ, ಅರಶಿಣ ಎಲೆಯ ಹಿಟ್ಟು, ಕನಿಲೆ ಪಲ್ಯ, ಉಪ್ಪಡ್ ಪಚ್ಚಿಲ್, ಆಟಿ ಪಾಯಸ, ಮೂಡೆ ಹಿಟ್ಟು ಮೊದಲಾದ ವಿವಿಧ ತಿಂದಿಗಳನ್ನು ಒಳಗೊಂಡ ಭೋಜನ ಇತ್ತು.

ಹಿರಿಯರಾದ ಕೆ ಆರ್ ಪದ್ಮನಾಭ, ಮೇದಪ್ಪ ಉಳುವಾರು, ತಾಲೂಕು ಗೌಡ ಸಮಿತಿಯ ಸದಸ್ಯರಾದ ಶ್ರೀಮತಿ ಪುಷ್ಪ ಮೇದಪ್ಪ, ಶ್ರೀಮತಿ ವಾರಿಜಾ ಪುರುಷೋತ್ತಮ ಕುರುoಜಿ, ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು, ಹೊನ್ನಪ್ಪ ಗೌಡ ಪಿಂಡಿಮನೆ ಉಪಸ್ಥಿತರಿದ್ದರು