ಕುಂಬಳಚೇರಿ – ಕೂರ್ನಡ್ಕ – ಆಲೆಟ್ಟಿ ರಸ್ತೆ ಸಂಪರ್ಕ ಕಡಿತ
ಆಲೆಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂನಡ್ಕ ಎಂಬಲ್ಲಿ ಭಾರೀ ಮಳೆಗೆ ಸೇತುವೆ ಕುಸಿತಗೊಂಡಿದ್ದು, ಕುಂಬಳಚೇರಿ – ಕೂರ್ನಡ್ಕ – ಆಲೆಟ್ಟಿ ರಸ್ತೆ ಸಂಪರ್ಕ ಕಡಿತಗೊಂಡ ಘಟನೆ ಜು.29ರಂದು ರಾತ್ರಿ ಸಂಭವಿಸಿದೆ.
ಸುಮಾರು ನಲವತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡ ಸೇತುವೆ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಸಿತಗೊಂಡಿದ್ದು, ಸಂಚಾರ ಸ್ಥಗಿತಗೊಂಡಿರುವುದಾಗಿ ತಿಳಿದುಬಂದಿದೆ.
ಕೂರ್ನಡ್ಕದ ಕಮ್ಮಾಡಿ ರಬ್ಬರ್ ಎಸ್ಟೇಟ್ ಗೆ ಆಲೆಟ್ಟಿ ಗ್ರಾಮದ ಬಡ್ಡಡ್ಕ, ನಾಗಪಟ್ಟಣ ಮತ್ತಿತರ ಕಡೆಯಿಂದ ಟ್ಯಾಪಿಂಗ್ ಮಾಡಲು ಬರುತ್ತಿದ್ದ ಕೂಲಿ ಕಾರ್ಮಿಕರು ಸೇತುವೆ ಕುಸಿತದಿಂದ ಸಂಕಷ್ಟಕೀಡಾಗಿದ್ದು, ಈ ಭಾಗದ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ.