ಕಲ್ಮಡ್ಕ ಶಾಲಾ ಕಟ್ಟಡ ಬಿರುಕು – ತರಗತಿಗಳ ಸ್ಥಳಾಂತರ

0

ನೂತನ ಕಟ್ಟಡಕ್ಕೆ ಅನುದಾನ ಒದಗಿಸಲು ಗ್ರಾ.ಪಂ.ಅಧ್ಯಕ್ಷರಿಂದ ಸಚಿವರಿಗೆ ಮನವಿ

ಕಲ್ಮಡ್ಕ ಗ್ರಾ.ಪಂ. ವ್ಯಾಪ್ತಿಯ ಕಲ್ಮಡ್ಕ ಸ.ಹಿ.ಪ್ರಾ. ಶಾಲಾ ಕಟ್ಟಡ ಬಿರುಕು ಬಿಟ್ಟಿರುವುದಲ್ಲದೆ ವಾಲಿಕೊಂಡಿದ್ದು, ತರಗತಿಗಳನ್ನು ಸ್ಥಳಾಂತರಿಸಲಾಗಿದೆ. ನೂತನ ಕಟ್ಟಡಕ್ಕೆ ಅನುದಾನ ಒದಗಿಸುವಂತೆ ಕಲ್ಮಡ್ಕ ಗ್ರಾ.ಪಂ.‌ನಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಪ್ರಸ್ತುತ ಶಾಲೆಯಲ್ಲಿ 1ರಿಂದ 7ನೇ ತರಗತಿಯ ತನಕ 61 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಶಾಲಾ ಗೋಡೆಗಳು ಶಿಥಿಲಗೊಂಡಿರುವುದರಿಂದ ತರಗತಿಗಳನ್ನು ತಾತ್ಕಾಲಿಕವಾಗಿ ಶಾಲೆಯ ರಂಗಮಂದಿರದಲ್ಲಿ ನಡೆಸಲಾಗುತ್ತಿದೆ. ಶಾಲೆಯ ಮುಂಭಾಗದಲ್ಲಿ ಮರಾಟಿ ಸಮಾಜಕ್ಕೆ ಸೇರಿದ ಕಟ್ಟಡವಿದ್ದರೂ ವಿದ್ಯಾರ್ಥಿಗಳು ರಸ್ತೆ ದಾಟಿ ಹೋಗಬೇಕಾದ ಅನಿವಾರ್ಯತೆ ಬರುವುದರಿಂದ ಸದ್ಯ ರಂಗಮಂದಿರದಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ. ನಲಿಕಲಿಯ ಒಂದು ಕಟ್ಟಡವಿದ್ದರೂ ಅದರ ಮೇಲ್ಚಾವಣಿಗೆ ಸಾರಣೆ ಮಾಡಿದ ಸಿಮೆಂಟ್ ತುಂಡುತುಂಡಾಗಿ ಕೆಳಕ್ಕೆ ಬೀಳುತ್ತಿರುವುದರಿಂದ ಅಲ್ಲಿಯೂ ತರಗತಿಯನ್ನು ನಡೆಸುವಂತಿಲ್ಲ.

ಈ ಬಗ್ಗೆ ಕಲ್ಮಡ್ಕ ಗ್ರಾ.ಪಂ.‌ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಸ್ಪೀಕರ್ ಯು.ಟಿ.ಖಾದರ್ ರವರ ಮೂಲಕ‌ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರಿಗೆ ಮನವಿ ನೀಡಿದ್ದು, ಸಚಿವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಮಹೇಶ್ ಕುಮಾರ್ ತಿಳಿಸಿದ್ದಾರೆ. ಕಟ್ಟಡ ಹಲವು ವರ್ಷಗಳ ಹಿಂದೆಯೇ ಶಿಥಿಲಗೊಂಡಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದಿದ್ದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ವಿದ್ಯಾರ್ಥಿಗಳು ತ್ರಿಶಂಕು ಪರಿಸ್ಥಿತಿಯಲ್ಲಿ ಪಾಠ ಕೇಳುವಂತಾಗಿದೆ.