ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರ ಮುಸ್ತಫಾ ಪೈಚಾರ್ ಗೆ ಆಶ್ರಯ ನೀಡಿದ ಇಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದೆ. ಮುಸ್ತಫಾ ಪೈಚಾರ್ ಹಾಗೂ ರಿಯಾಜ್ ಎಚ್.ವೈ. ಈ ಆರೋಪಿಗಳು.
ಬಿಜೆಪಿ ಯುವಮೋರ್ಚಾ ಜಿಲ್ಲಾ ಸಮಿತಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು ೨೦೨೨ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕುರಿತು ೨೭.೦೭.೨೦೨೨ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಎನ್‌ಐಎ ಪ್ರಕರಣ ಕೈಗೆತ್ತಿಕೊಂಡ ಬಳಿಕ ೨೦೨೨ರ ಆ.೪ರಂದು ಪ್ರಕರಣವನ್ನು ಮರು ದಾಖಲಿಸಿತ್ತು.
ನೆಟ್ಟಾರು ಕೊಲೆ ಪ್ರಕರಣದಲ್ಲಿ ಇದುವರೆಗೆ ೧೯ ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿ ಮುಸ್ತಫಾ ಪೈಚಾರ್‌ನನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ೧೦.೦೫.೨೦೨೪ರಂದು ಮನೂರ್‌ಪಾಷಾ ಎಂಬಾತನ ಜತೆ ಬಂಧಿಸಲಾಗಿತ್ತು. ಮುಸ್ತಫಾ ಫೈಚಾರ್ ಪ್ರಕರಣದ ಪ್ರಮುಖ ಸಂಚುಕೋರನಾಗಿದ್ದು, ರಾಜ್ಯದಲ್ಲಿ ಪಿಎಫ್‌ಐ ಸೇವಾ ತಂಡದ ಮಾಸ್ಟರ್ ಟ್ರೈನರ್ ಆಗಿದ್ದ.
ತನಿಖೆ ವೇಳೆ ರಿಯಾಜ್ ಎಚ್.ವೈ. ಎಂಬ ಮತ್ತೊಬ್ಬ ಆರೋಪಿ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ್ದು ತಿಳಿದುಬಂದಿತ್ತು. ಈತ ಭಾರತದಿಂದ ಯತ್ನಿಸುತ್ತಿದ್ದಾಗ ಪರಾರಿಯಾಗಲು ೦೩.೦೬.೨೦೨೪ರಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್ ಐಎ ಬಂಧಿಸಿತ್ತು. ಪ್ರಕರಣದಲ್ಲಿ ಪ್ರಮುಖ ಸಂಚುಕೋರನಿಗೆ ಇಬ್ಬರು ಆಶ್ರಯ ನೀಡಿದ್ದಕ್ಕಾಗಿ ಐಪಿಸಿ ಸೆಲ್ ೧೨೦ ಬಿ ಮತ್ತು ೨೧೨ ಮತ್ತು ಯುಎ (ಪಿ) ಃ ಆಕ್ಟ್‌ನ ಸೆಕ್ಷನ್ ೧೯ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಏಳು ಮಂದಿಯನ್ನು ಪತ್ತೆ ಹಚ್ಚಿ ಬಂಧಿಸಲು ತನಿಖೆ ಮುಂದುವರಿದಿದೆ.