ಮೂರು ಶಾಲೆಗಳು ಅಪಾಯದ ಸ್ಥಿತಿಯಲ್ಲಿ : ಮಕ್ಕಳ ಶಿಕ್ಷಣಕ್ಕೆ ಬದಲಿ ವ್ಯವಸ್ಥೆ
ಪ್ರಾಕೃತಿಕ ವಿಕೋಪದಿಂದ ಮನೆ ಹಾನಿ, ಕೊಟ್ಟಿಗೆ ಹಾನಿ ಮಾತ್ರವಲ್ಲದೆ ಬರೆ ಜರಿದರೂ ಆ ಕುರಿತು ವಿವರವಾದ ವರದಿ ಕೊಡಿ. ಸರಕಾರದಿಂದ ಅನುದಾನ ತರಿಸಿ ಪರಿಹಾರ ಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರಲ್ಲದೆ, ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿತು ಪ್ರತ್ಯೇಕ ಪಟ್ಟಿ ತಯಾರಿಸಿ ಶೀಘ್ರವೇ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆ.6ರಂದು ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಪ್ರಾಕೃತಿಕ ವಿಕೋಪ ಕುರಿತು ಸಮಾಲೋಚನಾ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಹಶೀಲ್ದಾರ್ ಮಂಜುನಾಥ್ ಜಿ, ಇ.ಒ. ರಾಜಣ್ಣ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಈ ಬಾರಿಯ ಮಳೆಗಾಲದಲ್ಲಿ ಮನೆ ಹಾನಿ ಸೇರಿದಂತೆ ಸುಮಾರು 35 ಪ್ರಕರಣಗಳಲ್ಲಿ ಸುಮಾರು 7 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಇ.ಒ. ರಾಜಣ್ಣ ಮಾಹಿತಿ ನೀಡಿದರು. ಬರೆ ಜರಿದ ಪ್ರಕರಣದಲ್ಲಿ ಪರಿಹಾರ ನೀಡಲಾಗಿದೆಯೇ ಎಂದು ಶಾಸಕರು ಹೇಳಿದಾಗ, ಅದಕ್ಕೆ ಪರಿಹಾರ ನೀಡಲು ಅವಕಾಶ ಎಂದು ಇ.ಒ. ಹೇಳಿದರು. “ಎಷ್ಟೋ ಕಡೆ ಬರೆ ಜರಿದು ಅಪಾಯ ಜೀವ ಭಯದಿಂದ ಇರುವಂತ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆ ಅಂಗಳದಲ್ಲಿ ಮಣ್ಣು ನಿಂತಿದೆ. ಅದನ್ನು ತೆರವು ಮಾಡಬೇಕಲ್ಲ. ಈ ರೀತಿಯ ಪ್ರಕರಣಗಳು ಹಲವು ಇದೆ. ಅದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತೇನೆ. ಪ್ರತೀ ಪಂಚಾಯತ್ ವ್ಯಾಪ್ತಿಯ ಪಟ್ಟಿ ತಯಾರಿಸಿ, ಸಮಗ್ರ ವರದಿ ಮಾಡಿ ಕೊಡಬೇಕು ಎಂದು ಶಾಸಕರು ಸೂಚನೆ ನೀಡಿದರು.
ಎಲ್ಲೇ ಅವಘಡ ನಡೆದರೂ ಆ ವ್ಯಾಪ್ತಿಯ ಅಧಿಕಾರಿಗಳು ಭೇಟಿ ನೀಡಿ ಮನೆಯವರ ಜತೆ ಮಾತನಾಡಬೇಕು. ಅಧಿಕಾರಿಗಳು ಯಾರೂ ಬರಲೇ ಇಲ್ಲ ಎಂಬ ದೂರು ಬರಬಾರದು ಎಂದು ಶಾಸಕರು ಖಡಕ್ ಸೂಚನೆ ನೀಡಿದರು.
ಸಿಬ್ಬಂದಿಗಳ ಕೊರತೆ : ಸುಳ್ಯ ಜಿ.ಪಂ. ಇಂಜಿನಿಯರ್ ಮಣಿಕಂಠರು ಇಲಾಖೆಯಲ್ಲಿ ಇಂಜಿನಿಯರ್ ಇಲ್ಲದಿರುವ ಕುರಿತು ಸಮಸ್ಯೆ ಹೇಳಿಕೊಂಡರಲ್ಲದೆ, ಕೆಲಸದ ಒತ್ತಡದ ಕುರಿತು ಸಭೆಯಲ್ಲಿ ವಿವರ ನೀಡಿದರು. ಪಿಡಬ್ಲ್ಯೂಡಿ ಎ.ಇ.ಇ. ಗೋಪಾಲ್ ರವರು ಕೂಡಾ ಇಂಜಿನಿಯರ್ ಗಳಿಲ್ಲದೆ ಕೆಲಸ ತಡವಾಗುತ್ತಿರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು.
ನಗರ ಪಂಚಾಯತ್ ವ್ಯಾಪ್ತಿಯಲ್ಲಿ 63 ಮರ ತೆರವಿಗೆ ಅರ್ಜಿಗಳು ಬಂದಿದ್ದು ಪರಿಶೀಲನೆ ನಡೆಸಲಾಗಿದೆ. 2 ಮರ ಮಾತ್ರ ಅಪಾಯ ಇದೆ. ಉಳಿದೆಲ್ಲವೂ ಗೆಲ್ಲುಗಳು ತೆಗೆದರೆ ಸಾಕಾಗುತ್ತದೆ. ಮರ ತೆಗೆಯುವ ಕುರಿತು ಅರ್ಜಿಗಳ ಪಟ್ಟಿಯ ಕುರಿತು ಸಭೆಯಲ್ಲಿ ವಿವರ ನೀಡಿದರು.
ತಾಲೂಕಿನಲ್ಲಿ 62 ಶಾಲೆಗಳ ಕಟ್ಟಡದಲ್ಲಿ ಡ್ಯಾಮೇಜ್ ಕಂಡು ಬಂದಿದೆ. ಈ ಕುರಿತು ವರದಿ ನೀಡಲಾಗಿದೆ. ಆದರೆ ದೇರಾಜೆ, ಕಲ್ಮಡ್ಕ, ಗಟ್ಟಿಗಾರು ಶಾಲೆ ತೀರಾ ದುಸ್ಥಿತಿಯಲ್ಲಿದ್ದು ಸದ್ಯಕ್ಕೆ ಮಕ್ಕಳನ್ನು ಅಲ್ಲಿಂದ ಬೇರೆಡೆ ಶಿಫ್ಟ್ ಮಾಡಿ ಪಾಠ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ಮಾಹಿತಿ ನೀಡಿದರು.