ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಅದರಲ್ಲೂ ದೇಹದ ತೂಕದ ಬಗ್ಗೆ ವಿಶೇಷವಾದ ಕಾಳಜಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಯುವಕರು ಮತ್ತು ಯುವತಿಯರಲ್ಲಿ ಆಕರ್ಷಕವಾಗಿ ಕಾಣಲು ದೇಹದ ತೂಕ ಇಳಿಸುವ ವಿಶೇಷವಾದ ಆಹಾರ ಪದ್ಧತಿ, ದೈಹಿಕ ಕಸರತ್ತು, ಏರಿಯಲ್ ಯೋಗ, ಜಿಮ್ ಕಸರತ್ತು ಮುಂತಾದವುಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಈ ಪಟ್ಟಿಗೆ ಸೇರಿರುವ ಒಂದು ಆಹಾರ ಪದ್ಧತಿಯನ್ನೇ ಕೀಟೋಜೆನಿಕ್ ಡಯಟ್ ಅಥವಾ ಕೀಟೋ ಡಯಟ್ ಎಂದು ಕರೆಯಲಾಗುತ್ತದೆ. ಇದು ಇಂದಿನ ಯುವಕ ಯುವತಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಇದೊಂದು ಕಡಿಮೆ ಕಾರ್ಬೋಹೈಡ್ರೇಟ್ (ಶರ್ಕರಪಿಷ್ಠ) ಇರುವ ಹೆಚ್ಚು ಪ್ರೋಟಿನ್, ನಾರು ಮತ್ತು ಕೊಬ್ಬು ಇರುವ ಆಹಾರವಾಗಿದ್ದು ದೇಹದ ತೂಕ ಇಳಿಸುವಲ್ಲಿ ಈ ಡಯಟ್ ಬಹು ಮುಖ್ಯ ಭೂಮಿಕೆ ವಹಿಸುತ್ತದೆ ಮತ್ತು ಆರೋಗ್ಯ ವೃದ್ಧಿಸುತ್ತದೆ ಎಂದು ನಂಬಲಾಗಿದೆ. ಈ ರೀತಿಯ ಆಹಾರ ಪದ್ಧತಿ ಬಳಸುವುದರಿಂದ ಮಧುಮೇಹ, ಕ್ಯಾನ್ಸರ್, ಅಪಸ್ಮಾರ ಮತ್ತು ಅಲ್‌ಝೈಮರ್ ಮುಂತಾದ ರೋಗಗಳಿಂದಲೂ ರಕ್ಷಿಸಿಕೊಳ್ಳಬಹುದು ಮತ್ತು ರೋಗ ಬರದಂತೆ ಮಾಡಲು ಸಾಧ್ಯವಾಗಬಹುದು ಎಂದೂ ನಂಬಲಾಗಿದೆ. ಈ ಬಗ್ಗೆ ಹೆಚ್ಚಿನ ವೈಜ್ಞಾನಿಕ ಪುರಾವೆ ಇಲ್ಲದಿದ್ದರೂ ಅಲ್ಪಕಾಲದ ಅಧ್ಯಯನದ ವರದಿಯಂತೆ ಸಾಕಷ್ಟು ಪ್ರಯೋಜನ ಇದೆ ಎಂದು ನಂಬಲಾಗಿದೆ.
ಏನಿದರ ರಹಸ್ಯ?
ನಾವು ಸೇವಿಸುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಅಥವಾ ಶರ್ಕರಪಿಷ್ಠಗಳ ಬಳಕೆಯನ್ನು ನಿಯಂತ್ರಿಸಿ ಹೆಚ್ಚು ಪ್ರೋಟಿನ್, ನಾರು ಹಾಗೂ ಕೊಬ್ಬು ಇರುವ ಆಹಾರವನ್ನು ಸೇವಿಸಲಾಗುತ್ತದೆ. ಹೀಗೆ ನಾವು ಸೇವಿಸುವ ಆಹಾರವು ಕಾರ್ಬೋಹೈಡ್ರೇಟ್ ಅಂಶ ಕಡಿಮೆಯಾದಾಗ, ನಮ್ಮ ದೇಹದೊಳಗೆ ಮೊದಲೇ ಶೇಖರಣೆಯಾದ ಕೊಬ್ಬನ್ನು ಕರಗಿಸಿ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ. ಈ ಪ್ರಕ್ರಿಯೆ ಉಂಟಾದಾಗ ದೇಹದಲ್ಲಿನ ಕೊಬ್ಬು ಕೀಟೋನ್ ಆಗಿ ಪರಿವರ್ತನೆಯಾಗುತ್ತದೆ. ಈ ಪ್ರಕ್ರಿಯೆ ಲಿವರ್ ಅಥವಾ ಯಕೃತ್ತಿನಲ್ಲಿ ಜರುಗುತ್ತದೆ ಹಾಗೂ ಈ ಪ್ರಕ್ರಿಯೆಗೆ ಕೀಟೋಸಿಸ್ ಎನ್ನುತ್ತಾರೆ. ಈ ಕೀಟೋಸಿಸ್ ಪ್ರಕ್ರಿಯೆಯಿಂದ ನಮ್ಮ ಮೆದುಳಿಗೆ ಬೇಕಾದ ಶಕ್ತಿ ದೊರಕುತ್ತದೆ. ಇದರ ಜೊತೆಗೆ ಈ ಕೀಟೋ ಡಯಟ್ ನಿಂದಾಗಿ ದೇಹದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ ಹಾಗೂ ಇನುಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಒಟ್ಟಿನಲ್ಲಿ ದೇಹದಲ್ಲಿ ಕಾರ್ಬೋಹೈಡ್ರೆಟ್ ಬಳಕೆ ನಿಯಂತ್ರಣಕ್ಕೆ ಬರುತ್ತದೆ ಮತ್ತು ದೇಹದಲ್ಲಿ ಹೆಚ್ಚಾದ ಕೊಬ್ಬನ್ನು ಕರಗಿಸಿ ದೇಹಕ್ಕೆ ಶಕ್ತಿ ಸಿಗುವಂತೆ ಮಾಡುತ್ತದೆ. ದಿನವೊಂದರಲ್ಲಿ ಕೇವಲ ೨೦ ರಿಂದ ೫೦ ಗ್ರಾಂ ಕಾರ್ಬೋಹೈಡ್ರೇಟ್ ಮಾತ್ರ ಕೀಟೋ ಡಯಟಿನಲ್ಲಿ ಇರುತ್ತದೆ. ಆದರೆ ಈ ಕೀಟೋ ಡಯಟ್‌ನ ಸುರಕ್ಷತೆ ಮತ್ತು ದೀರ್ಘಕಾಲದ ಪ್ರಯೋಜನಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಇದಲ್ಲದೆ ಕೀಟೋ ಡಯಟಿನಲ್ಲಿ ಹೆಚ್ಚು ನಾರಿನಂಶ ಇರುವ ಕಾರಣ ಬೇಗ ಹೊಟ್ಟೆ ತುಂಬಿದಂತೆ ಬಾಸವಾಗಿ ಹಸಿವು ನಿಯಂತ್ರಿಸಲ್ಪಟ್ಟು ದೇಹದ ತೂಕ ನಿಯಂತ್ರಣಕ್ಕೆ, ಬರುತ್ತದೆ ಎಂದು ತಿಳಿದು ಬಂದಿದೆ.
ಕೀಟೋ ಡಯಟಿನಲ್ಲಿ ಸೇವಿಸಬಹುದಾದ ಆಹಾರಗಳು
೧. ಸಾಗರಜನ್ಯ ಉತ್ಪನ್ನಗಳು: ಮೀನು, ಏಡಿ, ಶೆಲ್ ಫಿಶ್ ಮುಂತಾದವುಗಳಲ್ಲಿ ಕನಿಷ್ಠ ಕಾರ್ಬೋಹೈಡ್ರೇಟ್ ಇರುತ್ತದೆ ಮತ್ತು ಹೆಚ್ಚು ವಿಟಮಿನ್ ಬಿ ಕಾಂಪ್ಲೆಕ್ಸ್, ಪೊಟಾಸಿಯಂ ಮತ್ತು ಸೆಲೆನಿಯಂ ಇರುತ್ತದೆ, ಅದೇ ರೀತಿ ಸಾಗರಜನ್ಯ ಮೀನುಗಳಲ್ಲಿ ಹೆಚ್ಚಿನ ಸ್ಯಾಚುರೇಟೆಡ್ ಪ್ಯಾಟೀ ಆಸಿಡ್ ಇರುವುದರಿಂದ ದೇಹದಲ್ಲಿ ಇನ್‌ಸುಲಿನ್ ನಿಯಂತ್ರಿಸಲ್ಪಡುತ್ತದೆ ಮತ್ತು ಇನ್‌ಸುಲಿನ್ ಕಾರ್ಯಕ್ಷಮತೆ ವೃದ್ಧಿಸುತ್ತದೆ ಎಂದು ತಿಳಿದುಬಂದಿದೆ.
೨. ಮಾಂಸಾಹಾರ ಮತ್ತು ಪೌಲ್ಟಿç ಮಾಂಸದಲ್ಲಿ ಕಾರ್ಬೋಹೈಡ್ರೇಟ್ ಅತೀ ಕಡಿಮೆ ಇರುತ್ತದೆ. ಹೆಚ್ಚಿನ ಲವಣಾಂಶ, ವಿಟಮಿನ್ ಬಿ ಕಾಂಪ್ಲೆಕ್ಸ್ ಇರುತ್ತದೆ. ಅತೀ ಹೆಚ್ಚಿನ ಪ್ರೋಟಿನ್ ಇದ್ದು, ದೇಹದಲ್ಲಿನ ಮಾಂಸಖಂಡಗಳ ಸಾಂಧ್ರತೆಯನ್ನು ಉಳಿಸಲು ಸಹಾಯ ಮಾಡುತ್ತದೆ.
೩. ಮೊಟ್ಟೆ ಅತೀ ಹೆಚ್ಚು ಪ್ರೋಟಿನ್ ನೀಡುವ ಆಹಾರವಾಗಿದ್ದು, ಕೀಟೋ ಡಯಟನಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ, ಪ್ರತಿ ಮೊಟ್ಟೆಯಲ್ಲಿ ಒಂದು ಗ್ರಾಂ ಗಿಂತಲೂ ಕಡಿಮೆ ಕಾರ್ಬೋಹೈಡ್ರೇಟ್ ಇರುತ್ತದೆ ಮತ್ತು ೬ ಗ್ರಾಂ ಗಿಂತಲೂ ಹೆಚ್ಚು ಪ್ರೋಟಿನ್ ಇರುತ್ತದೆ. ಇದರ ಜೊತೆಗೆ ಆಂಟಿ ಆಕ್ಸಿಡೆಂಟ್‌ಗಳಾದ ಲ್ಯೂಟನ್ ಮತ್ತು ಜಿಯಾಕ್ಸಿಂಟಿನ್ ಇದ್ದು ಅವುಗಳ ಕಣ್ಣಿನ ಆರೋಗ್ಯಕ್ಕೆ ಅವಶ್ಯಕ ಆದರೆ ಮೊಟ್ಟೆ ತಿನ್ನುವಾಗ ಬರೀ ಮೊಟ್ಟೆಯ ಬಿಳಿ ಭಾಗ ಮಾತ್ರ ತಿನ್ನಬಾರದು. ಬಿಳಿ ಮತ್ತು ಅರಶಿನ ಭಾಗವೆರಡನ್ನೂ ಸೇವಿಸಬೇಕು. ಹಳದಿ ಭಾಗದಲ್ಲಿ ಹೆಚ್ಚಿನ ಕೊಲೆಸ್ಟಾçಲ್ ಇದ್ದರೂ ವ್ಯಕ್ತಿಯ ಹೃದಯದ ಆರೋಗ್ಯಕ್ಕೆ ಏನೇ ತೊಂದರೆ ಆಗದು ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಮಾಂಸಾಹಾರ ಸೇವಿಸುವವರಿಗೆ ಕೀಟೋ ಡಯಟನ್ನು ವಿಶೇಷವಾಗಿ ಆಹಾರದ ಆಯ್ಕೆಯ ಬಗ್ಗೆ ಹೆಚ್ಚಿನ ಸ್ವಾತಂತ್ರ ಇರುತ್ತದೆ. ಮೊಟ್ಟೆ, ದನ, ಹಂದಿ, ಕೋಳಿ ಮತ್ತು ಸಾಗರಜನ್ಯ ಏಡಿ, ಮೀನು ಮುಂತಾದ ಎಲ್ಲಾ ಮಾಂಸಗಳಲ್ಲಿ ಹೆಚ್ಚಿನ ಪ್ರೋಟಿನ್ ಇರುತ್ತದೆ ಮತ್ತು ಅತೀ ಕಡಿಮೆ ಕಾರ್ಬೋ ಹೈಡ್ರೇಟ್ ಇರುತ್ತದೆ. ಆದರೆ ಸಸ್ಯಹಾರಿಗಳಿಗೆ ಆಹಾರದ ವಿಚಾರದಲ್ಲಿ ಈ ಸ್ವಾತಂತ್ರ ಇರುವುದಿಲ್ಲ.
೪. ಚೀಸ್ (ಗಿಣ್ಣು) : ಕೀಟೋ ಡಯಟ್ ಮಾಡಲು ಸಸ್ಯಹಾರಿಗಳಿಗೆ ಚೀಸ್ ಬಹಳ ಉತ್ತಮ ಆಯ್ಕೆಯಾಗಿರುತ್ತದೆ. ಇದರಲ್ಲಿ ಹಲವಾರು ಬಗೆಯ ಗಿಣ್ಣು ಲಭ್ಯವಿದ್ದು, ಹೆಚ್ಚಿನ ಗಿಣ್ಣಿನಲ್ಲಿ ಅತೀ ಕಡಿಮೆ ಕಾರ್ಬೋಹೈಡ್ರೇಟ್ ಇರುತ್ತದೆ. ಒಂದು ಅನ್ಸ್ ಅಂದರೆ ೨೮ ಗ್ರಾಂ ಚೀಸ್‌ನಲ್ಲಿ ೧ ಗ್ರಾಂ ಕಾರ್ಬೋಹೈಡ್ರೇಟ್ ಮತ್ತು ೬ ಗ್ರಾಂ ಪ್ರೋಟಿನ್ ಇರುತ್ತದೆ ಹಾಗೂ ಹೆಚ್ಚಿನ ಕ್ಯಾಲ್ಸಿಯಂ ಕೂಡಾ ದೊರಕುತ್ತದೆ. ಅದೇ ರೀತಿ ಚೀಸ್‌ನಲ್ಲಿ ಸಾಚುರೇಟೆಡ್ ಪ್ಯಾಟ್ ಇರುತ್ತದೆ ಮತ್ತು ಹೃದಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಎಮದು ತಿಳಿದು ಬಂದಿದೆ. ಒಟ್ಟಿನಲ್ಲಿ ದಿನದಲ್ಲಿ ೨೦೦ ಗ್ರಾಂ ಅಂದರೆ ೭ ಜೌನ್ಸ್ ಚೀಸ್ ಯಾವುದೇ ತೊಂದರೆ ಇಲ್ಲದೆ ಕೀಟೋ ಡಯಟನಲ್ಲಿ ತಿನ್ನಬಹುದು ಎಂದೂ ಸಾಬೀತಾಗಿದೆ. ಅದರಲ್ಲೂ ಕಾಟೇಜ್ ಚೀಸ್ ಮತ್ತು ಯೋಗರ್ಟ್ ತಿನ್ನುವುದರಿಂದ ಹಸಿವು ಶಮನವಾಗಿ, ಹೊಟ್ಟೆ ತುಂಬಿದAತಾಗಿ ತೂಕ ನಿಯಂತ್ರಣಕ್ಕೆ ಬರುತ್ತದೆ ಎಂದೂ ತಿಳಿದು ಬಂದಿದೆ.
೫. ಹಾಲಿನ ಕೆನೆಯಲ್ಲಿ ಹೆಚ್ಚಿನ ಪ್ರೋಟಿನ್ ಇರುತ್ತದೆ. ಅತೀ ಕಡಿಮೆ ಕಾರ್ಬೋಹೈಡ್ರೇಟ್ ಇರುತ್ತದೆ. ಇದನ್ನು ಕೀಟೋ ಡಯಟಿನಲ್ಲಿ ಸೇವಿಸಬಹುದಾಗಿದೆ. ಸಕ್ಕರೆ ಸೇರಿಸದ ಸಸ್ಯ ಜನ್ಯ ಹಾಲುಗಳಾದ (ಆಲ್ಮಂಡ್, ತೆಂಗಿನಕಾಯಿ ಹಾಲು) ಸೇವಿಸುವುದರಿಂದ ಹೆಚ್ಚಿನ ಪ್ರೋಟಿನ್ ದೇಹಕ್ಕೆ ಸಿಗುತ್ತದೆ.
೬. ಹಸಿರು ತರಕಾರಿಗಳು ಸಸ್ಯಹಾರಿಗಳ ಕೀಟೋ ಡಯಟನಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಹಸಿರು ತರಕಾರಿಗಳಲ್ಲಿ ಅತೀ ಹೆಚ್ಚು ವಿಟಮಿನ್, ಲವಣಾಂಶ, ಖನಿಜಾಂಶ ಮತ್ತು ಆಂಟಿ ಆಕ್ಸಿಡೆಂಟ್‌ಗಳು ಇರುತ್ತದೆ ಮತ್ತು ಕನಿಷ್ಠ ಕಾರ್ಬೋಹೈಡ್ರೇಟ್ ಇರುತ್ತದೆ. ಬಸಳೆ, ಹರಿವೆ, ಪಾಲಕ್ ಸೊಪ್ಪುಗಳಲ್ಲಿ ಹೇರಳ ಕಬ್ಬಿಣ ಮತ್ತು ವಿಟಮಿನ್ ಏ ಇರುತ್ತದೆ. ಇದಲ್ಲದೆ ಈ ಆಹಾರದಲ್ಲಿ ನಾರಿನಂಶ ಜಾಸ್ತಿ ಇರುತ್ತದೆ ಹಾಗೂ ಆಹಾರಕ್ಕೆ ಹೆಚ್ಚಿನ ತೂಕ ನೀಡುತ್ತದೆ ಮತ್ತು ಬೇಗ ಹೊಟ್ಟೆ ತುಂಬಿಸುತ್ತದೆ.
೭. ಸಸ್ಯ ಜನ್ಯ ಆಹಾರಗಳಾದ ಕ್ಯಾಬೇಜ್, ಹೂಕೋಸು, ಮಶ್ರೂಮ್, ಸೌತೆಕಾಯಿ, ಬ್ರೊಕೋಲಿ, ಕ್ಯಾರೆಟ್, ಮೂಲಂಗಿ, ನೆನೆ ಹಾಕಿ ಮೊಳಕೆ ಬರಿಸಿದ ಕಾಳುಗಳು ಸಸ್ಯಹಾರಿ ಕೀಟೋ ಡಯಟನಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ಈ ತರಕಾರಿಗಳಲ್ಲಿ ಕನಿಷ್ಠ ಕಾರ್ಬೋಹೈಡ್ರೇಟ್ ಇದ್ದು ಹೆಚ್ಚಿನ ನಾರು ಮತ್ತು ಪ್ರೋಟಿನ್ ಇರುತ್ತದೆ. ಆದರೆ ಸಸ್ಯಹಾರಿಗಳಲ್ಲಿ ಕೀಟೋ ಡಯಟ್ ಮಾಡುವವರು ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಬಟಾಟೆ, ಗೆಣಸು, ನೀರುಳ್ಳಿ (ಅಧಿಕ ಪ್ರಮಾಣದಲ್ಲಿ) ಕಾರ್ನ್, ಬೀಟ್‌ರೂಟ್, ಸುವರ್ಣಗಡ್ಡೆ ಮುಂತಾದ ಆಹಾರವನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸತಕ್ಕದ್ದು. ಈ ಆಹಾರದಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಸಿಗುವ ಕಾರಣದಿಂದ ಕೀಟೋ ಡಯಟದಲ್ಲಿ ಈ ತರಕಾರಿಗಳಿಗೆ ಜಾಗವಿರುವುದಿಲ್ಲ.
೮. ಹೆಚ್ಚಿನ ಹಣ್ಣುಗಳಿಗೆ ಕೀಟೋ ಡಯಟ್‌ನಲ್ಲಿ ಜಾಗವಿರುವುದಿಲ್ಲ. ಆದರೆ ಬ್ಲಾಕ್‌ಬರ‍್ರಿ ಮತ್ತು ಬ್ಲೂ ಬರ‍್ರಿ ಹಣ್ಣುಗಳಲ್ಲಿ ಕನಿಷ್ಠ ಕಾರ್ಬೋಹೈಡ್ರೇಟ್ ಇದ್ದು ಹೆಚ್ಚು ಪ್ರೋಟಿನ್ ಹಾಗೂ ನಾರು ಇರುತ್ತದೆ. ಈ ಕಾರಣದಿಂದ ಬರ‍್ರಿ ಹಣ್ಣಿಗೆ ಕೀಟೋ ಡಯಟನಲ್ಲಿ ಜಾಗವಿದೆ.
೯. ಬೆಣ್ಣೆ ಮತ್ತು ತುಪ್ಪಗಳಲ್ಲಿ ಹೆಚ್ಚು ಕೊಬ್ಬು ಇರುತ್ತದೆ ಮತ್ತು ಅತೀ ಕಡಿಮೆ ಕಾರ್ಬೋಹೈಡ್ರೇಟ್ ಇರುತ್ತದೆ. ಈ ಕಾರಣದಿಂದ ಕೀಟೋ ಡಯಟಲ್ಲಿ ಈ ಆಹಾರಕ್ಕೆ ಜಾಗ ಸಿಕ್ಕಿದೆ. ಆದರೆ ನಿಯಮಿತ ಪ್ರಮಾಣದಲ್ಲಿ ಮಾತ್ರ ಸೇವಿಸತಕ್ಕದ್ದು ಅದೇ ರೀತಿ ಸಕ್ಕರೆ ಹಾಕದ ಕಾಫಿ ಮತ್ತು ಟೀ ಕೂಡಾ ಕೀಟೋ ಡಯಟನಲ್ಲಿ ಸ್ಥಾನ ಪಡೆದಿದೆ.
ಕೊನೆಮಾತು:
ಕೀಟೋ ಡಯಟ್ ಆರಂಭ ಮಾಡುವಾಗ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಅಗತ್ಯ. ಆರಂಭದ ಹಂತದಲ್ಲಿ ತಲೆ ಸುತ್ತುವಿಕೆ, ಸುಸ್ತು, ಜೀರ್ಣಾಂಗವ್ಯೂಹ ಸಂಬಂಧಿ ಸಮಸ್ಯೆಗಳಾದ ಗ್ಯಾಸ್, ಅಜೀರ್ಣ, ಅತಿ ಬೇಧಿ, ಮಲಬದ್ಧತೆ ಉಂಟಾಗಬಹುದು, ಅದೇ ರೀತಿ ದೇಹದ ಕೊಲೆಸ್ಟಾçಲ್ ಕೂಡಾ ಹೆಚ್ಚಾಗಬಹುದು. ಆರಂಭಿಕ ಹಂತದಲ್ಲಿ ಕಷ್ಟವಾದರೂ ಆಹಾರದ ಆಯ್ಕೆಯಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಸೇವಿಸುವವರಿಗೆ ಆಹಾರದ ಆಯ್ಕೆಯಲ್ಲಿ ಹಲವಾರು ಬಗೆಯ ಆಹಾರ ಸೇವಿಸುವ ಸ್ವಾತಂತ್ರ ಇರುವ ಕಾರಣ ವಿಶೇಷ ತೊಂದರೆ ಆಗದು. ಅದೇನೇ ಇರಲಿ ನಾವು ತಿನ್ನುವ ಆಹಾರದ ಮೇಲೆ ಒಂದು ಕಣ್ಣು ಯಾವತ್ತೂ ಇದ್ದಲ್ಲಿ ನಮ್ಮ ಆರೋಗ್ಯ ಖಂಡಿತಾ ಸುದಾರಿಸಬಹುದು. ಈ ಕಾರಣಕ್ಕಾಗಿಯೇ ನಮ್ಮ ಹಿರಿಯರು ಹೇಳಿದ ಮಾತು “ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ” ಎಂಬುದು ಹೆಚ್ಚು ಔಚಿತ್ಯಪೂರ್ಣ ವಾಗುತ್ತದೆ.
ಡಾ|| ಮುರಲೀ ಮೋಹನ್‌ಚೂಂತಾರು