ತ್ಯಾಜ್ಯದಿಂದ ಆಗುವ ಸಮಸ್ಯೆ ಕುರಿತು ಶಾಸಕರಿಗೆ ವಿವರ ನೀಡಿದ ಕಲ್ಚೆರ್ಪೆ ನಿವಾಸಿಗಳು
ತ್ಯಾಜ್ಯವನ್ನು ಕಲ್ಚರ್ಪೆಗೆ ಕೊಂಡೊಯ್ಯದಂತೆ ಶಾಸಕರ ಖಡಕ್ ಸೂಚನೆ
ಕಲ್ಚರ್ಪೆ ಪರಿಸರದಲ್ಲಿ ಸುಳ್ಯ ನಗರದ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವ ಮತ್ತು ಅದರಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಆ. 12 ರಂದು ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ರವರ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಪರಿಸರದ ನಿವಾಸಿಗಳು,ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸ್ಥಳೀಯ ಸದಸ್ಯರು,ಸುಳ್ಯ ನಗರ ಪಂಚಾಯತ್ ಸದಸ್ಯರು,ನ ಪಂ ಆಡಳಿತಾಧಿಕಾರಿ ತಹಶೀಲ್ದಾರ್ ಮಂಜುನಾಥ್, ಮುಖ್ಯಾಧಿಕಾರಿ ಸುಧಾಕರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಸಭೆಯ ಆರಂಭದಲ್ಲಿ ಮುಖ್ಯಾಧಿಕಾರಿ ಮಾತನಾಡಿ ಪ್ರಸ್ತುತ ಕಲ್ಚರ್ಪೆಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಕಾರ್ಯದ ಬಗ್ಗೆ ಪ್ರಸ್ತಾಪಿಸಿ ನಮ್ಮ ಕಡೆಯಿಂದ ಸರಿಯಾಗಿ ಕೆಲಸ ನಡೆಯುತ್ತಿದೆ.ಅಲ್ಲಿಗೆ ಕೇವಲ ಒಣ ಕಸ ಮಾತ್ರ ಹೋಗುತ್ತಿದ್ದು ಅದು ಅಲ್ಲಿ ದಿನಕ್ಕೆ 800 ರಿಂದ 900 ಕೆಜಿ ಯಷ್ಟು ಬರ್ನಿಂಗ್ ಆಗುತ್ತೆ. ಅಲ್ಲಿ ಕರೆಂಟ್ ಸಮಸ್ಯೆ ಇದ್ದ ಕಾರಣ ಹೊಸ ಜನರೇಟಟ್ ವ್ಯವಸ್ಥೆ ಮಾಡಿದ್ದೇವೆ.
ಇದೀಗ ಕೆಲವು ದಿನ ಮೆಷಿನ್ ಕೇಡಾದ ಕಾರಣ ಕಸ ಬಾಕಿ ಯಾಗಿದೆ. ಇದೀಗ ಅದನ್ನು ಅಲ್ಲಿ ರಿ ಸೈಕಲಿಂಗ್ ಮಾಡುವ ಕಾರ್ಯ ನಡೆಯುತ್ತಿದ್ದು, ಜಾಗದ ಕೊರತೆಯಿಂದ ಸಣ್ಣ ಪುಟ್ಟ ತೊಂದರೆಗಳು ಆಗಿದೆ. ಅದನ್ನು ಸರಿ ಪಡಿಸಿಕ್ಕೊಳುತ್ತೇವೆ ಎಂದು ವಿವರಣೆ ನೀಡಿದರು.
ಈ ವೇಳೆ ಎದ್ದು ನಿಂತ ಕಲ್ಚರ್ಪೆ ಹೋರಾಟ ಸಮಿತಿಯ ಮುಖಂಡ ಅಶೋಕ್ ಪೀಚೆಯವರು ‘ಸುಮ್ಮ ಸುಮ್ಮನೆ ಅದು ಮಾಡಿದ್ದೇವೆ ಇದು ಮಾಡಿದ್ದೇವೆ ಎಂದು ಸುಳ್ಳು ಹೇಳಬೇಡಿ ನೀವು.ಅಲ್ಲಿ ಯಾವುದೇ ವ್ಯವಸ್ಥಿತವಾಗಿ ತ್ಯಾಜ್ಯ ನಿರ್ವಹಣೆ ಆಗುತ್ತಿಲ್ಲ. ನೀವು ಹೇಳುವ ಆಗೆ ಅಲ್ಲಿ ಆಗಿದ್ದರೆ ಇಂದು ನಾವು ಇಲ್ಲಿ ಸಭೆಗೆ ಬರುವ ಆವಶ್ಯಕತೆ ಇರಲಿಲ್ಲ.ನೀವು ಹೇಳುವ ಯಾವುದೇ ಯೋಜನೆ ಅಲ್ಲಿ ನಡೆಯುತ್ತಿಲ್ಲ.ಕೇವಲ ಕಸವನ್ನು ಮಾತ್ರ ಶೇಖರಣೆ ಮಾಡುತ್ತಿದ್ದೀರಿ.
ಪರಿಸರ ಗಬ್ಬು ನಾರುತ್ತಿದೆ. ಸೊಳ್ಳೆ ಉತ್ಪಾದನೆಯ ತಾಣವಾಗಿ ನಿರ್ಮಾಣ ಮಾಡಿದ್ದೀರಿ.ಈ ಬಗ್ಗೆ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳ,ಅಧಿಕಾರಿ ಗಮನಕ್ಕೆ ಇಲ್ಲಿಯ ಸಮಸ್ಯೆಗಳನ್ನು ತರುತ್ತಿದ್ದರೂ ಅಧಿಕಾರಿಗಳು ಕೇವಲ ಸ್ಥಳಕ್ಕೆ ಬೇಟಿ ನೀಡಿ ಭರವಸೆಯ ಮಾತುಗಳನ್ನು ಮಾತ್ರ ಕೊಟ್ಟು ಹೋಗಿರುವುದಲ್ಲದೆ,ಈ ತನಕ ಯಾವುದೇ ಕ್ರಮ ಕೈಗೊಳ್ಳದೆ,ತ್ಯಾಜ್ಯವನ್ನು ಸಮರ್ಪಕವಾಗಿ ಬರ್ನಿಂಗ್ ಮಾಡದೇ, ಶೆಡ್‌ನಲ್ಲಿ ಶೇಖರಣೆ ಮಾಡುತ್ತಿದ್ದೀರಿ.
ತ್ಯಾಜ್ಯ ಮಿಶ್ರಿತ ನೀರು ಪಯಶ್ವಿನಿ ನದಿಗೆ ಸೇರುತ್ತಿದೆ.
ಸ್ಥಳೀಯರ ಆರೋಗ್ಯ ಕೆಟ್ಟಿದೆ.ಇದಕ್ಕೆಲ್ಲಾ ಹೊಣೆಗಾರರು ಯಾರು ಎಂದು ಪ್ರಶ್ನಿಸಿದರು.
ಆದ್ದರಿಂದ ನಮಗೆ ಒಂದೇ ಒಂದು ಪರಿಹಾರ ಈಗ ಬೇಕಾಗಿದೆ.ನೀವು ಅಲ್ಲಿಂದ ತ್ಯಾಜ್ಯ ಘಟಕವನ್ನು ನಿಮ್ಮ ನಗರ ವ್ಯಾಪ್ತಿಯಲ್ಲಿ ಎಲ್ಲಾದರು ಜಾಗ ಹುಡುಕಿ ಅಲ್ಲಿಗೆ ಹಾಕಿ.ಅದಲ್ಲದೆ ಬೇರೆ ಯಾವುದೇ ಪರಿಹಾರ ನಮಗೆ ಬೇಕಾಗಿಲ್ಲ.ಇನ್ನು ನಮ್ಮಿಂದ ಸಹಿಸಲು ಸಾಧ್ಯವಿಲ್ಲ ಎಂದು ಆಗ್ರಹ ವ್ಯಕ್ತ ಪಡಿಸಿದರು.
ಬಳಿಕ ಮಾತನಾಡಿದ ಹೋರಾಟ ಸಮಿತಿಯ ಮತ್ತೋರ್ವ ಮುಖಂಡ ಗೋಕುಲ್ ದಾಸ್ ‘ಬಹಳ ವರ್ಷಗಳಿಂದ ಈ ಸಮಸ್ಯೆ ಬಗ್ಗೆ ಅನೇಕ ಹೋರಾಟವನ್ನು,ಮನವಿಗಳನ್ನು ನೀಡುವುದನ್ನು ಬಹಳಷ್ಟು ಮಾಡಲಾಗಿದೆ. ಆದರೆ ಪ್ರತಿಫಲ ಮಾತ್ರ ಶೂನ್ಯ.ಪರ್ಯಾಯ ಜಾಗವನ್ನು ಹುಡುಕುತ್ತಿದ್ದೇವೆ ಎಂದು ಅಂದಿನಿಂದ ಹೇಳುತ್ತಾ ಬರುತ್ತಿದ್ದೀರಿ. ಅದು ಇದುವರೆಗೆ ಸಾಧ್ಯವಾಗಿಲ್ಲ. ಖಾಸಗಿ ವ್ಯಕ್ತಿಗಳಿಗೆ ಬೇಕಾದಲ್ಲಿ ಜಾಗಗಳು ಸಿಗುತ್ತದೆ. ಆದರೆ ಸ್ವಚ್ಛ ಭಾರತದಡಿಯಲ್ಲಿ ನಗರದ ಕಸ ವಿಲೆವಾರಿ ಮಾಡಲು ನಿಮಗೆ ಜಾಗ ಸಿಗುತ್ತಿಲ್ಲ.
ನೀವು ಒಮ್ಮೆ ಬಂದು ಒಂದು ರಾತ್ರಿ ಆ ಪ್ರದೇಶದಲ್ಲಿ ನಿಲ್ಲಿ. ಆಗ ನಿಮಗೂ ತಿಳಿಯುತ್ತೆ. ಅಲ್ಲಿಯ ಸಮಸ್ಯೆ ಏನು ಎಂದು.ರಾತ್ರಿ ವೇಳೆಯಲ್ಲಿ ವಿಶ ಜಂತುಗಳು, ಹೆಬ್ಬಾವು ಕಾಡು ಪ್ರಾಣಿಗಳಿಂದ ಅಲ್ಲಿ ನಡೆದಾಡಲು ಭಯವಾಗುತ್ತಿದೆ. ಸಾಂಕ್ರಾಮಿಕ ರೋಗಗಳ ತಾಣವಾಗಿ ಪರಿಸರ ಮಾರ್ಪಾಡಾಗುತ್ತಿದೆ.ನಾವು ಈ ಹಿಂದೆ ಹೇಳಿದ್ದೆವು,ನಮ್ಮ ತಾಲೂಕಿನ ಅನೇಕ ಕಡೆಗಳಲ್ಲಿ ಕಲ್ಲು ಪನೆಗಳು ಇದೆ. ಅಲ್ಲಿ ತೋಡಿರುವ ಗುಂಡಿಗಳಿಗೆ ಈ ತ್ಯಾಜ್ಯವನ್ನು ಹಾಕಿ ಮುಚ್ಚಿ ಅದರ ಮೇಲೆ ಮಣ್ಣು ಹಾಕಿ ಕೃಷಿ ಉತ್ಪಾದನೆಗೆ ಆ ಸ್ಥಳವನ್ನು ಬಳಸಿ ಎಂದು ಸಲಹೆ ನೀಡುತ್ತಾ ಬರುತ್ತಿದ್ದೆ.ಇನ್ನು ಮುಂದೆಯಾದರು ಈ ಬಗ್ಗೆ ಯೋಚಿಸಿದರೆ ಉತ್ತಮ ಎಂದರು.ಅಲ್ಲಿಯ ಬರ್ನಿಂಗ್ ಮೆಷಿನ್ ನಿಂದ ಕರೆಂಟ್ ಉತ್ಪದನೆ ಮಾಡಿ ನಗರಕ್ಕೆ ಕೊಡುತ್ತೇವೆ ಎಂದು ಹೇಳಿದ್ದೀರಿ.ಇದೆಲ್ಲಾ ಎಲ್ಲಿ ಹೋಯ್ತು? ಎಂದು ಕೇಳಿದರು.
ಅದೇ ರೀತಿಯ ಬೇರೆ ಬೇರೆ ಸಮಸ್ಯೆಗಳನ್ನು ಸಭೆಯಲ್ಲಿ ಉಪಸ್ಥಿತರಿದ್ದ ರಾಧಾಕೃಷ್ಣ ಪರಿವಾರಕಾನ,ನಾರಾಯಣ ಜಬಳೆ,ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಯೂಸುಫ್ ಅಂಜಿಕಾರ್, ಮೊದಲಾದವರು ಶಾಸಕರ ಗಮನಕ್ಕೆ ತಂದರು.
ಸ್ಥಳೀಯ ನಿವಾಸಿ ಜನಾರ್ದನ ಚೊಕ್ಕಾಡಿರವರು ಮಾತನಾಡಿ ‘ನಮ್ಮ ಮನೆಯ ಮಕ್ಕಳಿಗೆ ಒಂದಲ್ಲ ಒಂದು ರೀತಿಯಲ್ಲಿ ಕಾಯಿಲೆಗಳು ತಪ್ಪುತಿಲ್ಲ.ಎರೆಹುಳ ಉತ್ಪಾದನೆ ಮಾಡಲು ನಿರ್ಮಿಸಿರುವ ಟ್ಯಾಂಕ್ ಗಳಲ್ಲಿ ರೋಗ ಹರಡುವ ಹುಳಗಳು ಉತ್ಪಾದನೆ ಆಗುತ್ತಿದೆ.
ಅಲ್ಲಿಂದ ಬರುವ ತ್ಯಾಜ್ಯ ಮಿಶ್ರಿತ ನೀರನ್ನು ಸುಳ್ಯದ ಜನತೆ ಕುಡಿಯುತ್ತಿದ್ದಾರೆ. ಇದರಿಂದ ಇಡೀ ಸುಳ್ಯ ನಗರಕ್ಕೆ ರೋಗಗಳು ಹರಡುವ ಭೀತಿ ಮುಂದಿನ ದಿನಗಳಲ್ಲಿ ಇದೆ.ಇದನ್ನು ಪರಿ ಪರಿಯಾಗಿ ನಾವು ಹೇಳುತ್ತಿದ್ದರೂ ನಮ್ಮ ಮಾತಿಗೆ ಯಾವುದೇ ಬೆಲೆಯನ್ನು ನೀವು ಕೊಡುತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಬಾಲಚಂದ್ರ ಕಲ್ಚರ್ಪೆ ಅವರು ಈ ಮೊದಲು ತ್ಯಾಜ್ಯದ ರಾಶಿಗೆ ಬೆಂಕಿ ಹಬ್ಬಿಕೊಂಡಿದ್ದಾಗ ನಿಮ್ಮ ನಗರ ಪಂಚಾಯತಿಯ ಸಿಬ್ಬಂದಿಯಲ್ಲಿ ಓರ್ವರು ಬಂದು ಅದನ್ನು ಸ್ಥಳೀಯ ನಿವಾಸಿಗಳೇ ಬೆಂಕಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದರು.ಅಲ್ಲದೆ ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ನಾವು ಏನಾದರೂ ಸಮಸ್ಯೆಗಳನ್ನು ಹೇಳಿದರೆ ನಮ್ಮ ಮೇಲೆ ದರ್ಪಕ್ಕೆ ಬರುತ್ತಾರೆ. ಇದನ್ನೆಲ್ಲಾ ನೋಡಿ ಸಾಕಾಗಿದೆ. ಆದ್ದರಿಂದ ಈ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಸ್ಥಳೀಯರು ಹೇಳುತ್ತಿದ್ದ ಸಮಸ್ಯೆಗಳನ್ನು ಆಲಿಸಿದ ಶಾಸಕಿಯವರು ನಿಮ್ಮ ಈ ಎಲ್ಲ ವಿಷಯಗಳನ್ನು ತಿಳಿದೇ ಈ ಸಭೆಯನ್ನು ಇಂದು ನಾನು ಕರೆದಿದ್ದೇನೆ ಎಂದರು.
ನಗರ ಪಂಚಾಯತ್ ನ ಎಲ್ಲಾ ಸದಸ್ಯರು, ಅಧಿಕಾರಿಗಳ ಸಮ್ಮುಖದಲ್ಲಿ ನೀವು ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗ ಬಹುದು.
ನಗರ ಪಂಚಾಯತಿನ ಎಲ್ಲಾ ಸದಸ್ಯರುಗಳು ಯಾವ ರೀತಿಯಲ್ಲಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ನಿಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು ಎಂದರು. ಅಲ್ಲದೆ ನಮ್ಮ ಮನೆಯ ಕಸವನ್ನು ಇನ್ನೊಬ್ಬರ ಕಾಂಪೌಂಡಿನೊಳಗೆ ಹಾಕಿ ಅವರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ.ಅಲ್ಲಿ ಇರುವ ಒಂದು ಎಕರೆ ಜಾಗದಲ್ಲಿ ಈಗಾಗಲೇ ಕಸ ಮತ್ತು ಬರ್ನಿಂಗ್ ಕೇಂದ್ರ ಎಂದು ಅದು ಫುಲ್ ಆಗಿದೆ. ಇನ್ನು ಸುಳ್ಯದ ಕಸವನ್ನು ಕೊಂಡು ಹೋಗಿ ಅಲ್ಲಿ ಸುರಿಯಲು ಜಾಗವಿಲ್ಲ.ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಆದಷ್ಟು ಶೀಘ್ರದಲ್ಲಿ ಕಸ ಹಾಕಲು ಬೇರೆ ಜಾಗವನ್ನು ಹುಡುಕಬೇಕಾಗಿದೆ.ಮುಂದೆ ನಗರದ ಯಾವುದೇ ಕಸವನ್ನು ಕಲ್ಚರ್ಪೆಗೆ ತೆಗೆದುಕೊಂಡು ಹೋಗಿ ಹಾಕಬಾರದು ಎಂದು ಸೂಚನೆ ನೀಡಿದರು.
ಅಲ್ಲದೆ ನಗರ ಪಂಚಾಯತಿನ ಎಲ್ಲಾ ಸದಸ್ಯರು ಅಲ್ಲಿಗೆ ಭೇಟಿ ನೀಡಿ ಯಾವ ರೀತಿ ಈ ಸಮಸ್ಯೆಗಳನ್ನು ಬಗೆಹರಿಸಬಹುದೆಂಬ ಬಗ್ಗೆ ಚಿಂತಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್ ಮಾತನಾಡಿ ಯಾವುದೇ ಪೂರ್ವ ಯೋಜನೆ ಇಲ್ಲದೆ ಕೋಟಿಗಟ್ಟಲೆ ಹಣವನ್ನು ಅಲ್ಲಿ ಸುರಿದಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನ ಇಲ್ಲಿಯವರೆಗೆ ಕಂಡುಬಂದಿಲ್ಲ.
ಹೇಳುವಾಗ ದೇಶದಲ್ಲಿ ಈ ಯೋಜನೆ ಇರುವ 2 ನೇ ರಾಜ್ಯ ನಮ್ಮದು ಎಂದು ಹೇಳುತ್ತಾರೆ. ನಮ್ಮ ಮಾಜಿ ಸಚಿವರು ಹೊರ ದೇಶಕ್ಕೆ ಹೋಗಿ ಅಂದು ಅಧ್ಯಾಯನ ಮಾಡಿ ಬಂದು ಈ ಯೋಜನೆಯನ್ನು ಮಾಡಿದ್ದೇವೆ ಎಂದು ಪ್ರಚಾರ ಮಾಡಿದ್ದರು.
ನಮ್ಮ ನಗರ ಪಂಚಾಯತ್ ಆವರಣದಲ್ಲಿಯೇ ಕಸದ ರಾಶಿಯನ್ನು ತುಂಬಿದವರು ಅಲ್ಲಿ ಯಾವ ಪರಿಸ್ಥಿತಿಯಲ್ಲಿ ಇರಬಹುದು ಎಂಬುವುದಕ್ಕೆ ಆ ಊರಿನವರ ಆಕ್ರೋಶ ನೋಡಿದರೆ ತಿಳಿದು ಬರುತ್ತದೆ.ಆದ್ದರಿಂದ ಆ ಪ್ರದೇಶದ ನಿವಾಸಿಗಳ ಬಗ್ಗೆ ಕಾಳಜಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇಲ್ಲಿಯ ಕಸವನ್ನು ಫ್ರೀಯಾಗಿ ತೆಗೆದುಕೊಂಡು ಹೋಗುತ್ತೇವೆ ಎಂದು ಕಂಪನಿಯವರು ಬಂದಾಗ ಹಣ ಕೊಟ್ಟು ಕೊಂಡು ಹೋಗಿ ಎಂದು ಬೇಡಿಕೆ ಇಟ್ಟು ಕಸ ಹೋಗದಂತೆ ಇಲ್ಲಿಯ ಅಧಿಕಾರಿಗಳು ತಡೆಯುತ್ತಿದ್ದಾರೆ.ಆದರಿಂದ ಇಲ್ಲಿಯ ಕಸ ಹೋಗುವುದು ಮುಖ್ಯವೋ ಅಥವಾ ಹಣ ಮುಖ್ಯವೋ ಎಂದು ಸದಸ್ಯರುಗಳಾದ ಶಿಲ್ಪಾಸುದೇವ್ ಹಾಗೂ ಶರೀಫ್ ಕಂಠೀರವವರು ಪ್ರಶ್ನೆ ಹಾಕಿದರು.
ನಗರ ಪಂಚಾಯತಿ ಸದಸ್ಯ ಎಂ ವೆಂಕಪ್ಪಗೌಡ ಈ ಬಗ್ಗೆ ಮಾತನಾಡಿ ಕಲ್ಚರ್ಪೆ ಯಲ್ಲಿ ಕಸವನ್ನು ಹಾಕುತ್ತಿರುವ ಬಗ್ಗೆ ಮತ್ತು ಅಲ್ಲಿ ಉಂಟಾಗಿರುವ ಸಮಸ್ಯೆ ನ್ಯಾಯಾಲಯದ ಮೆಟ್ಟಿಲು ಕೂಡ ಹತ್ತಿದೆ. ಅಲ್ಲದೆ ನ್ಯಾಯಾಲಯದಿಂದ ನಿರ್ದೇಶನದಂತೆ ಒಂದು ಗ್ರಾಮದ ಕಸವನ್ನು ಮತ್ತೊಂದು ಗ್ರಾಮಕ್ಕೋ, ನಗರಕ್ಕೋ ಕೊಂಡೋಗಿ ಆಕುವಂತಿಲ್ಲ.
ಅಂದು ಆ ಸೂಚನೆಯಂತೆ ನಾವು ಪಾಲಿಸುತ್ತೇವೆ ಎಂದು ಹೇಳಿ ಕಸವನ್ನು ಹಾಕಲು ಪ್ರಾರಂಭಿಸಿ ಈವರೆಗೆ ಆ ಸೂಚನೆಯ ಪ್ರಕಾರ ನಡೆದುಕೊಂಡಿಲ್ಲ.ಮೂರು ಎಕರೆ ಜಾಗ ಇದೆ ಎಂದು ಅಂದು ಹೇಳಿ ಈಗ ಕೇವಲ ಒಂದು ಎಕರೆ ಜಾಗಕ್ಕೆ ಬಂದು ನಿಂತಿದೆ.
ಅಂದು ಎರಡು ಜಿಲ್ಲೆಯ ಶಾಸಕರುಗಳು ಒಂದೇ ಪಕ್ಷದವರಾಗಿದ್ದರು. ಸಂಸದರು ಕೂಡ ಒಂದೇ ಪಕ್ಷದವರಾಗಿದ್ದರು. ಆಡಳಿತವೂ ಕೂಡ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಇತ್ತು.ಈ ಸಂದರ್ಭದಲ್ಲಿ ಪರಸ್ಪರ ಮಾತುಕತೆ ಮಾಡಿಕೊಂಡು ಆ ಜಾಗವನ್ನು ಪಡೆದುಕೊಳ್ಳಬೇಕೆಂದು ಸಲಹೆಗಳನ್ನು ನೀಡಿದ್ದೆವು. ಆದರೆ ಅದಕ್ಕೆ ಯಾರೂ ಕೂಡ ಪ್ರಯತ್ನಿಸಿಲ್ಲ. ಕನಿಷ್ಠ ಪಕ್ಷ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಾದರು ಪ್ರಪೋಸಲನ್ನು ಸರ್ಕಾರಕ್ಕೆ ಕಳುಹಿಸಬೇಕಾಗಿತ್ತು.ಅದು ಅವರು ಮಾಡಲಿಲ್ಲ.ಈಗ ಈ ಸಮಸ್ಯೆ ಬೃಹತಾಕಾರದಲ್ಲಿ ಬೆಳೆದು ನಿಂತಿದ್ದು,ನಮ್ಮ ಕ್ಷೇತ್ರದ ಶಾಸಕರಾದ ನೀವು ಇದಕ್ಕೆ ಆದಷ್ಟು ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಬೇಕು.ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಸಲಹೆ ನೀಡಿದರು.
ಕೊನೆಯದಾಗಿ ಈ ಸಮಸ್ಯೆಗೆ ಪರಿಹಾರ ನೀಡುವ ರೀತಿಯಲ್ಲಿ ಮಾತನಾಡಿದ ಸುಳ್ಯ ತಹಶೀಲ್ದಾರ್ ಮಂಜುನಾಥ್ ರವರು ಕಸ ವಿಲೇವಾರಿಗೆ ಪರ್ಯಾಯ ಜಾಗವನ್ನು ಈಗಾಗಲೇ ಕಂಡುಕೊಂಡಿದ್ದೇವೆ. ಅಲ್ಲಿಯ ಸರ್ವೆ ಕಾರ್ಯಗಳು ನಡೆಯುತ್ತಾ ಇದೆ. ಆದಷ್ಟು ಶೀಘ್ರದಲ್ಲಿ ಕಸ ವಿಲೇವಾರಿ ಸ್ಥಳವನ್ನು ಗ್ರಾಮದಿಂದ ನಗರ ವ್ಯಾಪ್ತಿಯಲ್ಲಿ ಮಾಡುವ ಕಾರ್ಯ ನಡೆಯಲಿದೆ. ಆದ್ದರಿಂದ ಅದು ವರೆಗೆ ಊರಿನವರ ಸಹಕಾರ ಬೇಕೆಂದು ಕೇಳಿಕೊಂಡರು.ಮತ್ತು ಪರಿಸರದ ಸ್ವಚ್ಛತೆಯನ್ನು ಕಾಪಾಡಿ ಕೊಂಡು ಅಲ್ಲಿ ಇರುವ ಕಸವನ್ನು ಮುಗಿಸುವ ಕಾರ್ಯವು ಕೂಡ ನಡೆಯಲಿದೆ ಎಂದು ಹೇಳಿದರು.
ಸಭೆಯ ಕೊನೆಯಲ್ಲಿ ಸಭಾಂಗಣಕ್ಕೆ ನಗರ ಪಂಚಾಯತಿ ಸದಸ್ಯ ವಿನಯಕುಮಾರ್ ಕಂದಡ್ಕ ಬಂದು ಸಭೆಗೆ ಭಾಗವಹಿಸಿದರು. ಈ ವೇಳೆ ಅವರು ಕೂಡ ಜಾಗದ ಸಮಸ್ಯೆಯ ಕುರಿತು ಮಾತನಾಡಲು ಆರಂಭಿಸಿದಂತೆ ಸ್ಥಳೀಯ ನಿವಾಸಿಗಳಿಗೂ ಮತ್ತು ಅವರಿಗೂ ಸ್ವಲ್ಪಮಟ್ಟಿಗೆ ಮಾತಿನ ಚಕಮಕಿ ನಡೆಯಿತು.
ಅಲ್ಲಿಗೆ ಮಧ್ಯ ಪ್ರವೇಶಿಸಿದ ಮುಖ್ಯ ಅಧಿಕಾರಿ ಸಭೆಯನ್ನು ವಂದನಾರ್ಪಣೆಯ ಮೂಲಕ ಮುಕ್ತಾಯಗೊಳಿಸಿದರು.
ಸಭೆಯಲ್ಲಿ ಸ್ಥಳೀಯರು ತಮ್ಮ ಬಳಿ ತಂದಿದ್ದ ಹತ್ತಕ್ಕೂ ಹೆಚ್ಚು ನಿಬಂಧನೆಗಳುಳ್ಳ ಶರತು ಪತ್ರವನ್ನು ತಹಶೀಲ್ದಾರ್ ರವರಿಗೆ ನೀಡಿದರು.ಆದ್ದರಲ್ಲಿ ನಮ್ಮ ಮನವಿಯ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಆದಷ್ಟು ಶೀಘ್ರದಲ್ಲಿ ಕಾರ್ಯರೂಪಕ್ಕೆ ತಂದು ಪರಿಸರದ ಜನರ ಮನವಿಯನ್ನು ಪುರಸ್ಕರಿಸಬೇಕಾಗಿ ಮತ್ತು ಈಗ ಇರುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ತನಕ ನಗರ ಪಂಚಾಯತ್‌ನಿಂದ ಯಾವುದೇ ಘನತ್ಯಾಜ್ಯವನ್ನು ಇಲ್ಲಿಗೆ ತರಬಾರದು. ತಂದಲ್ಲಿ ನಾವೇಲ್ಲರೂ ಸೇರಿ ರಸ್ತೆಗೆ ತಡೆ ಬೇಲಿಯನ್ನು ರಚಿಸಿ,ಜನರ ಆರೋಗ್ಯದ ದೃಷ್ಟಿಯಿಂದ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಉಲ್ಲೇಖಿಸಲಾಗಿತ್ತು.
ಸಭೆಯಲ್ಲಿ ಅಲೆಟ್ಟಿ ಪಂಚಾಯತ್ ಅಧ್ಯಕ್ಷ ಪುಷ್ಪಾವತಿ ಕುಡಕಲ್ಲು, ಸದಸ್ಯರುಗಳಾದ ಅನಿತಾ ಇಡ್ಯಡ್ಕ, ಸುಕೇಶ್ ಅರಂಬೂರು, ಸ್ಥಳೀಯ ನಿವಾಸಿಗಳಾದ ಅನಿಲ್ ಪರಿವಾರಕಾನ, ವಾಸುದೇವ ಕುಡೆಕಲ್ಲು, ತವೀದ್ ಕಲ್ಚರ್ಪೆ , ಅನಸ್ ಕಲ್ಚರ್ಪೆ,ಉದಯ ಆಚಾರ್ಯ, ನಾರಾಯಣ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.