ಪಂಜ ಹಾಲು ಸೊಸೈಟಿ ಗೋದಾಮಿಗೆ ನುಗ್ಗಿದ ಕೃತಕ ನೆರೆ ನೀರು
ಕರಿಕ್ಕಳದಲ್ಲಿ 33 ಕೆ.ವಿ. ಲೈನ್ ಮೇಲೆ ಉರುಳಿದ ಮರ
ಕರಿಕ್ಕಳದಿಂದ ಪುತ್ಯ ತನಕ ಅನೇಕ ಕಡೆ ಗುಡ್ಡ ಕುಸಿತ
ಪಂಜ ಪರಿಸರದಲ್ಲಿ ಆ. 13 ರಂದು ಭಾರೀ ಗಾಳಿ ಮಳೆಯಾಗಿದ್ದು ಅಪಾರ ಹಾನಿಯಾಗಿದೆ.
ಪಂಜದಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದ ಪರಿಣಾಮ ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಗೋದಾಮಿಗೆ ನೀರು ನುಗ್ಗಿದ್ದು ಅಪಾರ ನಷ್ಟ ಸಂಭವಿಸಿದೆ.
ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಪಂಜ ಸಮೀಪ ಕರಿಕ್ಕಳದಲ್ಲಿ
ರಸ್ತೆಯ ಬದಿಯಲ್ಲಿದ್ದ 33 ಕೆ ವಿ ವಿದ್ಯುತ್ ಲೈನ್ ಮೇಲೆ ಮರ ಉರುಳಿದೆ.
ಕರಿಕ್ಕಳದಿಂದ ಪುತ್ಯ ತನಕ ರಸ್ತೆಯ ಬದಿಯಲ್ಲಿ ಅನೇಕ ಕಡೆ ಗುಡ್ಡ ಕುಸಿತ ಗೊಂಡಿದ್ದು ಅದರಲ್ಲಿ ಸಿಲುಕಿರುವ ಮರಗಳು ವಿದ್ಯುತ್ ಲೈನ್ ಮೇಲೆ, ರಸ್ತೆ ಕಡೆ ವಾಲಿದ್ದು ಅಪಾಯದಲ್ಲಿದೆ. ಕೇವಲ 2ತಾಸಿನಲ್ಲಿ ಭಾರೀ ಮಳೆ ಸುರಿದಿದ್ದು ಜನರಲ್ಲಿ ಭಯ ಹುಟ್ಟಿಸಿದೆ. ಪಂಜ ಹೊಳೆಯಲ್ಲಿ ಭಾರೀ ನೀರು ಏರಿಕೆಯಾಗಿ ಪಂಜ -ಸುಬ್ರಹ್ಮಣ್ಯ ರಸ್ತೆ ಸಂಚಾರ ಬಂದ್ ಆಗಿತ್ತು.ಪಂಜ ಪರಿಸರದಲ್ಲಿ ಅನೇಕ ಕಡೆ ಕೃಷಿ ತೋಟಕ್ಕೆ ಗಾಳಿ ನುಗ್ಗಿದ್ದು ಅಡಿಕೆ ಮರಗಳು ಧರೆಗೆ ಉರುಳಿವೆ. ಚರಂಡಿಗೆ ಮಣ್ಣು ಕುಸಿದು ಅನೇಕ ಕೃಷಿ ತೋಟಗಳಿಗೆ ನೀರು ನುಗ್ಗಿದ್ದು ಅಪಾರ ಹಾನಿಯಾಗಿದೆ.
ಪಂಜದ ಮುಖ್ಯ ರಸ್ತೆಯ ಬದಿ ಅನೇಕ ಕಡೆ ಮಳೆ ನೀರು ಹರಿದು ಹೋಗುಲು ಚರಂಡಿಯೇ ಇಲ್ಲ. ಇನ್ನೂ ಕೆಲವು ಕಡೆ ಚರಂಡಿ ಮುಚ್ಚಿ ಹೋಗಿದೆ ಪರಿಣಾಮವಾಗಿ ಕೃತಕ ನೆರೆ ಉಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತ ಸಂಭವಿಸ ಬಹುದಾಗಿದೆ.