ಶಾಸಕರ ಉಪಸ್ಥಿತಿಯಲ್ಲಿ ಶ್ರೀ ಶಾರದಾಂಬ ಸಮೂಹ ಸಮಿತಿಯ ಸಭೆ
ದಸರಾ ಕಾರ್ಯಕ್ರಮದ ಆಯೋಜನೆ ಕುರಿತು ರೂಪುರೇಷೆ
ಸುಳ್ಯದ ನಾಡಹಬ್ಬ 53ನೇ ವರ್ಷದ ಶ್ರೀ ಶಾರದಾಂಬ ದಸರಾ ಕಾರ್ಯಕ್ರಮದ ರೂಪುರೇಷೆಯ ಕುರಿತಂತೆ ದಸರಾ ಉತ್ಸವ ಸಮಿತಿಯ ಅಧ್ಯಕ್ಷೆ , ಶಾಸಕಿ ಭಾಗೀರಥಿ ಮುರುಳ್ಯ ಅವರ ಉಪಸ್ಥಿತಿಯಲ್ಲಿ ಶ್ರೀ ಶಾರದಾಂಬ ಸಮೂಹ ಸಮಿತಿಯ ಸಭೆಯು ಸುಳ್ಯದ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
53ನೇ ವರ್ಷದ ಉತ್ಸವ ಸಮಿತಿ ಅಧ್ಯಕ್ಷ ಡಾ. ಡಿ.ವಿ. ಲೀಲಾಧರ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಒಂಭತ್ತು ದಿನಗಳ ದಸರಾ ಉತ್ಸವದ ಕಾರ್ಯಕ್ರಮಗಳ ಆಯೋಜನೆ ಕುರಿತು ಚರ್ಚಿಸಲಾಯಿತು.
ವಿಶೇಷವಾಗಿ ಈ ಬಾರಿ ಮಕ್ಕಳ ಮತ್ತು ಮಹಿಳಾ ದಸರಾ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು.
ಮಕ್ಕಳ ದಸರಾ ಮೆರವಣಿಗೆ, ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆ, ಮಹಿಳಾ ದಸರಾ ವ್ಯವಸ್ಥೆ, ಮಹಿಳೆಯರಿಗೆ ಕ್ರೀಡಾಕೂಟಗಳ ಆಯೋಜನೆ ಕುರಿತು ಚರ್ಚಿಸಲಾಯಿತು. ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಮನೆಯಿಂದ ವಿವಿಧ ಬಗೆಯ ಆಹಾರ ಖಾದ್ಯಗಳನ್ನು ತಯಾರಿಸಿ, ತಂದು ಪ್ರದರ್ಶನ ಹಾಗೂ ಮಾರಾಟ, ಗೃಹ ತಯಾರಿಕಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ಕುರಿತಂತೆ ಸಮೂಹ ಸಮಿತಿಗಳ ಉಪಸ್ಥಿತಿಯಲ್ಲಿ ಚರ್ಚಿಸಲಾಯಿತು.
ಒಂಭತ್ತು ದಿನಗಳ ಕಾಲ ಅದ್ದೂರಿಯಾಗಿ ದಸರಾ ಏರ್ಪಡಿಸಲು ನಿರ್ಧರಿಸಲಾಗಿರುವ ಕಾರಣದಿಂದ ಎಲ್ಲಾ ಒಂಭತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮ ನಡೆಸುವ ಕುರಿತಂತೆ ಸಮೂಹ ಸಮಿತಿಯಲ್ಲೇ ಪ್ರಾಯೋಜಕತ್ವದ ಕುರಿತು ತಂಡಗಳನ್ನು ರಚಿಸಲಾಯಿತು.
ಈ ಸಂದರ್ಭದಲ್ಲಿ ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಸುನಿಲ್ ಕೇರ್ಪಳ, 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಕೋಶಾಧಿಕಾರಿ ಗಣೇಶ್ ಆಳ್ವ, ಗೌರವ ಸಲಹೆಗಾರರಾದ ಎನ್. ಜಯಪ್ರಕಾಶ್ ರೈ, ಎನ್.ಎ. ರಾಮಚಂದ್ರ, ಎಂ.ವೆಂಕಪ್ಪ ಗೌಡ, ಡಾ. ಉಜ್ವಲ್ ಯು.ಜೆ., ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್, ಅಧ್ಯಕ್ಷ ನಾರಾಯಣ ಕೇಕಡ್ಕ, ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಖಜಾಂಜಿ ಅಶೋಕ್ ಪ್ರಭು, ಜೊತೆ ಕಾರ್ಯದರ್ಶಿ ಅನಿಲ್ ಕೆ.ಸಿ., ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನವೀನ್ ಚಂದ್ರ , ಕಾರ್ಯದರ್ಶಿ ಸತೀಶ್ , ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಪ್ರಧಾನ ಕಾರ್ಯದರ್ಶಿ ಶ್ರೀದೇವಿ ನಾಗರಾಜ್ ಭಟ್, ಉಪಾಧ್ಯಕ್ಷೆ ಶ್ರೀಮತಿ ಯಶೋಧಾ ರಾಮಚಂದ್ರ ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಗೀತ ರಸಮಂಜರಿಗೆ ಸ್ಟಾರ್ ಸಿಂಗರ್ ಹಾಗೂ ಚಲನಚಿತ್ರ ನಟರನ್ನು ಕರೆಸಲು ನಿರ್ಧಾರ
ಈ ಬಾರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶೋಭಾಯಾತ್ರೆಯ ಹಿಂದಿನ ದಿನ ರಾತ್ರಿ ಜರುಗಲಿರುವ ಸಂಗೀತ ರಸಮಂಜರಿ ಕಾರ್ಯಕ್ರಮಕ್ಕೆ ಸ್ಟಾರ್ ಸಿಂಗರ್ ಗಳನ್ನು ಹಾಗೂ ಚಲನಚಿತ್ರ ನಟರನ್ನು ಕರೆಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಸ್ಥಬ್ದಚಿತ್ರಗಳ ಸಂಖ್ಯೆ ಹೆಚ್ಚಿಸಲು ತೀರ್ಮಾನ
ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ ದಸರಾ ಕಾರ್ಯಕ್ರಮದ ವಿಶೇಷ ಆಕರ್ಷಣೆ ಎಂದರೆ ಕೊನೆಯ ದಿನ ನಡೆಯುವ ಶ್ರೀದೇವಿಯ ಶೋಭಾಯಾತ್ರೆ.
ಸುಳ್ಯದ ವಿವಿಧ ಸಂಘ – ಸಂಸ್ಥೆಗಳೊಂದಿಗೆ ಮಾತನಾಡಿ ಶೋಭಾಯಾತ್ರೆಯಲ್ಲಿ ಈ ಹಿಂದಿನಂತೆ ಪ್ರಸ್ತುತ ಇರುವ ಸ್ಥಬ್ದಚಿತ್ರಗಳ ಸಂಖ್ಯೆಗಿಂತ ಹೆಚ್ಚು ಸ್ಥಬ್ದಚಿತ್ರಗಳನ್ನು ಮಾಡುವಂತೆ ತೀರ್ಮಾನಿಸಲಾಯಿತು.
ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ ಶೋಭಾಯಾತ್ರೆಯ ಕುರಿತು ಮಾಹಿತಿ ನೀಡಿದರು.