ಜಾಲ್ಸೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 37ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆಯು ಪಯಸ್ವಿನಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಆ.26ರಂದು ನಡೆಯಿತು.
ಕಾರ್ಯಕ್ರಮವನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಿಶಾಂತ್ ಮೋಂಟಡ್ಕ ಅವರು ಉದ್ಘಾಟಿಸಿದರು. ಹಿರಿಯರಾದ ಉಮನಾಥ ಗೌಡ ಪಟೇಲ್ ಮನೆ ಅವರು ತೆಂಗಿನ ಕಾಯಿ ಒಡೆಯುವುದರ ಮೂಲಕ ಆಟೋಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಲ್ಲಾ ಸ್ಪರ್ಧೆಗಳು ಜಾಲ್ಸೂರು ಗ್ರಾಮಸ್ಥರಿಗೆ ಮಾತ್ರ ಮೀಸಲಾಗಿದ್ದು, ಅಂಗನವಾಡಿ ಪುಟಾಣಿ ಮಕ್ಕಳಿಗೆ ಕಪ್ಪೆ ಜಿಗಿತ, ಕಾಳು ಹೆಕ್ಕುವುದು, ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಪ್ಪೆ ಜಿಗಿತ, ಬಲೂನ್ ಒಡೆಯುವುದು, ಬಕೆಟ್ ಗೆ ಬಾಲ್ ಹಾಕುವುದು, ಹಿರಿಯ ಪ್ರಾಥಮಿಕ ಶಾಲಾ ಬಾಲಕರಿಗೆ ಕಬಡ್ಡಿ, ಮೂರು ಕಾಲಿನ ಓಟ, ಬಾಲಕಿಯರಿಗೆ ಮೂರು ಕಾಲಿನ ಓಟ, ಸಂಗೀತ ಕುರ್ಚಿ ನಡೆಯಿತು.
ಪ್ರೌಢಶಾಲಾ ಬಾಲಕರಿಗೆ ಮಡಿಕೆ ಒಡೆಯುವುದು, ಕಬಡ್ಡಿ, ಬಾಲಕಿಯರಿಗೆ ಸಂಗೀತ ಕುರ್ಚಿ, ಮೂರು ಕಾಲಿನ ಓಟ ನಡೆಯಿತು.
ಸಾರ್ವಜನಿಕ ಸ್ಪರ್ಧೆಯಲ್ಲಿ ಪುರುಷರಿಗೆ ಕಬಡ್ಡಿ, ಹಗ್ಗಜಗ್ಗಾಟ, ಮಡಿಕೆ ಒಡೆಯುವುದು ಹಾಗೂ ಮಹಿಳೆಯರಿಗೆ ಮಡಿಕೆ ಒಡೆಯುವುದು ಹಾಗೂ ಹಗ್ಗಜಗ್ಗಾಟ ಜರುಗಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು ಅವರು ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಿಶಾಂತ್ ಮೋಂಟಡ್ಕ, ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೆಮನಬಳ್ಳಿ, ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಆತ್ಮಾನಂದ ಗಬ್ಬಲಡ್ಕ, ಮಾದವ ಗೌಡ ಕಾಳಮನೆ, ಜಾಲ್ಸೂರು ಗ್ರಾ.ಪಂ. ಸದಸ್ಯರುಗಳಾದ ಎನ್.ಎಂ. ಸತೀಶ್ ಕೆಮನಬಳ್ಳಿ, ಕೆ.ಎಂ. ಬಾಬು ಕದಿಕಡ್ಕ, ಪಿ.ಆರ್. ಸಂದೀಪ್ ಕದಿಕಡ್ಕ ಉಪಸ್ಥಿತರಿದ್ದರು.
ರಾತ್ರಿ ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ವಿಶೇಷ ಭಜನೆ ನಡೆಯಿತು.