ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಗಣಪತಿ ದೇವರ ಗುಡಿಯ ಶಿಲಾನ್ಯಾಸ, ಧಾರ್ಮಿಕ ಸಭೆ

0

ನಮ್ಮ ಜೀವನದಲ್ಲಿ ಏನೆಲ್ಲಾ ಅವಶ್ಯಕತೆಗಳಿವೆಯೋ ಅದನ್ನು ನಾವು ಮರೆತಿದ್ದೇವೆ. ಗುರುಭಕ್ತಿ, ದೇಶಭಕ್ತಿ, ಪರಿಸರ ಭಕ್ತಿ ಬೆಳೆಸಿಕೊಂಡಾಗ ದೇವರನ್ನು ಕಾಣಲು ಸಾಧ್ಯವಿದೆ. 33 ಕೋಟಿ ಕಾಣದ ಭಗವಂತನನ್ನು ಹುಡುಕುವುದು ಬೇಡ. ನಮ್ಮ ಜೊತೆ ಇರುವವರಲ್ಲಿ ದೇವರನ್ನು ಕಾಣಿ. ನಮ್ಮ ದೇಶದ ಐಕ್ಯತೆಗಾಗಿ, ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನು ನೀಡುವ ಅವಶ್ಯಕತೆ ಇದೆ. ಬೇರೆ ಪಕ್ಷದವರು ತಮ್ಮ ಪಕ್ಷ ಮರೆತು ದೇವರ ಪಕ್ಷ ಸೇರಿ ಎಲ್ಲರೂ ನಮ್ಮವರೆಂಬ ಭಾವನೆಗಳನ್ನು ಬೆಳೆಸಿಕೊಳ್ಳೋಣ ಎಂದು ಮೋಹನ ದಾಸ ಪರಮಹಂಸ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಹೇಳಿದರು.

ಅವರು ಆ. 28ರಂದು ಶ್ರೀ ರಾಜರಾಜೇಶ್ವರಿ ಸನ್ನಿಧಿಯಲ್ಲಿ ಶ್ರೀ ಗಣಪತಿ ದೇವರ ಗುಡಿಯ ಶಿಲಾನ್ಯಾಸ ಕಾರ್ಯಕ್ರಮದ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡುತ್ತಾ ಆದಾಯದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ನಾನು ಅಧ್ಯಕ್ಷನಾಗಿದ್ದಾಗ ಉಬರಡ್ಕ ಮತ್ತು ಪೂದೆಯ ಎರಡು ದೇವಸ್ಥಾನಗಳನ್ನು ದತ್ತು ತೆಗೆದುಕೊಂಡಿದ್ದೇವೆ. ಮುಂದಿನ ಸಮಿತಿ ರಚನೆಯಾದಾಗ ರಾಜರಾಜೇಶ್ವರಿ ದೇವಸ್ಥಾನವನ್ನು ದತ್ತು ತೆಗೆದುಕೊಳ್ಳವಂತಾಗಲಿ. ನಾವೆಲ್ಲಾ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುವ ಎಂದರು.


ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪುರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾಟುಕುಕ್ಕೆ ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರೂ, ನಿವೃತ್ತ ಮುಖ್ಯೋಪಾಧ್ಯಾಯರೂ ಆಗಿರುವ ರಾಮಚಂದ್ರ ನಾಯಕ್ ಆಲ್ಚಾರು ಅತಿಥಿಯಾಗಿ ಭಾಗವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪಂಜಿಗಾರು ಪೊಸವಳಿಗೆ, ಪ್ರಧಾನ ಕಾರ್ಯದರ್ಶಿ ಆರ್.ಕೆ. ಭಟ್ ಕುರುಂಬುಡೇಲು, ಆಡಳಿತ ಸಮಿತಿ ಕಾರ್ಯದರ್ಶಿ ಕುಶಾಲಪ್ಪ ಗೌಡ ಮಣಿಮಜಲು ಮತ್ತು ಕೋಶಾಧಿಕಾರಿ ಆನಂದ ಗೌಡ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಪೂರ್ಣಿಮಾ ಪಡ್ಪು, ಶ್ರೀಮತಿ ಲಲಿತಾ ಬಸ್ತಿಗುಡ್ಡೆ ಮತ್ತು ಶ್ರೀಮತಿ ಸವಿತಾ ಬಸ್ತಿಗುಡ್ಡೆ ಪ್ರಾರ್ಥಿಸಿದರು. ಆಡಳಿತ ಮಂಡಳಿ ಸದಸ್ಯ ವಸಂತ ಉಲ್ಲಾಸ್ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಕೆ. ಭಟ್ ವಂದಿಸಿದರು. ಆಡಳಿತ ಸಮಿತಿ ಸದಸ್ಯ ಚಂದ್ರಶೇಖರ ಪನ್ನೆ ಕಾರ್ಯಕ್ರಮ ನಿರೂಪಿಸಿದರು.